ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗಲುವೇಷ ಕಲಾವಿದರಿಗೆ ಸಂದ ಗೌರವ: ಮೀರಾಲಿ ಶಿವಲಿಂಗಪ್ಪ

ಬೀದಿಯಲ್ಲಿ ಪ್ರದರ್ಶನಕ್ಕಿದ್ದ ಕಲೆಯನ್ನು ವೇದಿಕೆಗೆ ತಂದ ಕೀರ್ತಿ
Last Updated 26 ಜನವರಿ 2022, 4:01 IST
ಅಕ್ಷರ ಗಾತ್ರ

ಕೊಪ್ಪಳ: ಅಳಿವಿನಂಚಿನಲ್ಲಿರುವ ಹಗಲುವೇಷ ಕಲೆಯನ್ನು ಉಳಿಸಲು ಶ್ರಮಿಸಿದ ಜಾನಪದ ಕಲಾವಿದರಿಗೆ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪುರಸ್ಕಾರ ಒಲಿದು ಬಂದಿದೆ.

ಕರ್ನಾಟಕ ಜಾನಪದ ಅಕಾಡೆಮಿ ನೀಡುವ 2021ನೇ ಸಾಲಿನ ಜಾನಪದ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿಗೆ ತಾಲ್ಲೂಕಿನ ಸಿದ್ದಾಪುರ ಗ್ರಾಮದ ಹಗಲುವೇಷ ಕಲಾವಿದ ಮೀರಾಲಿ ಶಿವಲಿಂಗಪ್ಪ (71) ಭಾಜನರಾಗಿದ್ದಾರೆ.

ಕಲ್ಯಾಣ ಕರ್ನಾಟಕದಹಿಂದುಳಿದ ಭಾಗದ ಅದರಲ್ಲಿಯೂ ಕಡುಬಡತನದಲ್ಲಿಯೇ ಇರುವ ಅಲೆಮಾರಿ ಬುಡ್ಗ ಜಂಗಮಪಂಗಡಕ್ಕೆ ಸೇರಿದ ಮೀರಾಲಿ ಶಿವಲಿಂಗಪ್ಪ ಒಬ್ಬ ಅದ್ವಿತೀಯ ಜಾನಪದ ಕಲಾವಿದರು.

ಪರಿಶಿಷ್ಟ ಜಾತಿಗೆ ಸೇರಿದ ಈ ಸಮುದಾಯ ಸೌಲಭ್ಯಗಳಿಲ್ಲದೆ, ಹೊಟ್ಟೆ ಹೊರೆಯಲು ಮನೆತನದಿಂದ ಬಳುವಳಿಯಾಗಿ ಬಂದ ಹಗಲು ವೇಷ ಧರಿಸಿ ಊರೂರು ಅಲೆಯುತ್ತ ಜಾನಪದ ಕಲೆಗಳ ಮೂಲಕ ನಾಡಿನ ಸಂಸ್ಕೃತಿ, ಪುರಾಣಗಳನ್ನು ಅಭಿನಯಿಸಿ ಜೀವನ ನಡೆಸುತ್ತಿದೆ.

ಬಾಲ್ಯದಲ್ಲಿಯೇ ತಂದೆ ರಾಮಣ್ಣನವರನ್ನು ಕಳೆದುಕೊಂಡ ಶಿವಲಿಂಗಪ್ಪನವರು ತಾಯಿ ಈರಮ್ಮ ಸೋದರ ಮಾವ ಯಡವಲಿ ಶಂಕಪ್ಪನವರ ಸಹಕಾರದೊಂದಿಗೆ ಈ ಹಗಲುವೇಷ ಕಲೆ ಕಲಿತಿದ್ದಾರೆ. ಅವರ ಮಾರ್ಗದರ್ಶನದಿಂದ ಅನೇಕ ನಾಟಕ, ಜಾನಪದ ಸಂಗೀತ, ಸುಗಮ ಸಂಗೀತ ಇನ್ನೂ ಮುಂತಾದ ಕಲೆಗಳನ್ನು ಕಲಿತು ನಾಡಿನಾದ್ಯಂತ ಪ್ರದರ್ಶನ ನೀಡಿ ಭೇಷ್ ಎನಿಸಿಕೊಂಡರು.

ಶಿವಲಿಂಗಪ್ಪ ಮೀರಾಲಿ ಅವರದು ಪತ್ನಿ ಶಿವಮ್ಮ, ನಾಲ್ವರು ಪುತ್ರರು, ನಾಲ್ವರು ಪುತ್ರಿಯರು ಇರುವ ತುಂಬು ಕುಟುಂಬ. ತಂದೆಯ ಕಲೆಗೆ ಸಾಥ್ ನೀಡುತ್ತಿದ್ದಾರೆ. ಇನ್ನಿಬ್ಬರು ಪುತ್ರರಲ್ಲಿ ಒಬ್ಬ ಎಂಬಿಎ ಫೈನಾನ್ಸ್ ಮಾಡಿ ಖಾಸಗಿ ಬ್ಯಾಂಕ್ ಉದ್ಯೋಗದಲ್ಲಿದ್ದಾರೆ. ಜಿಲ್ಲೆಯ ಅಲೆಮಾರಿ ಬುಡ್ಗ, ಜಂಗಮ ಸಮುದಾಯದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT