ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಚಿವ ತಂಗಡಗಿಗೆ ಬಸವ ಚೇತನ ಪ್ರಶಸ್ತಿ

ಬಸವನಗರದ ಆದಿ ಬಸವೇಶ್ವರ ದೇವಸ್ಥಾನ ಟ್ರಸ್ಟ್‌ನಿಂದ ಪ್ರದಾನ
Published 26 ಮೇ 2024, 14:38 IST
Last Updated 26 ಮೇ 2024, 14:38 IST
ಅಕ್ಷರ ಗಾತ್ರ

ಕಾರಟಗಿ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಮೊದಲ ಸಾಮಾಜಿಕ ನ್ಯಾಯದ ಹರಿಕಾರ ಎಂದೇ ಕರೆಯಲ್ಪಡುವ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿ, ಐತಿಹಾಸಿಕ ತೀರ್ಮಾನ ಕೈಗೊಂಡರು. ಇದೊಂದು ಹೆಮ್ಮೆಯ, ಸಂತಸದ ವಿಷಯವೆಂದು ನಾವೆಲ್ಲಾ ಸಂಭ್ರಮಿಸಿದ್ದೆವು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ ತಂಗಡಗಿ ಹೇಳಿದರು.

ಭಾನುವಾರ ಸಚಿವರ ಗೃಹ ಕಚೇರಿಯಲ್ಲಿ ಘೋಷಣೆಯ ಹಿಂದಿನ ಶಕ್ತಿಗಳಲ್ಲಿ ತಂಗಡಗಿಯವರೂ ಒಬ್ಬರಾಗಿದ್ದರು ಎಂದು ಸಿದ್ದಾಪುರ ಹೋಬಳಿ ಎಸ್‌. ಬಿ ರೆಡ್ಡಿ ಕ್ಯಾಂಪ್‌ನ ಬಸವನಗರದ ಆದಿ ಬಸವೇಶ್ವರ ದೇವಸ್ಥಾನ ಟ್ರಸ್ಟ್‌ನ ಪದಾಧಿಕಾರಿಗಳು ನೀಡಿದ ಬಸವ ಚೇತನ ಪ್ರಶಸ್ತಿ, ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದರು.

ಮುಖ್ಯಮಂತ್ರಿ ಅವರಿಗೆ ಬಸವ ತತ್ವದ ಮೇಲಿರುವ ನಂಬಿಕೆ ಮತ್ತು ಬದ್ಧತೆಯನ್ನು ಅವರ ನಿರ್ಧಾರ ತೋರಿಸುತ್ತದೆ. ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅವಕಾಶಗಳು ಸಿಗಬೇಕು ಎಂದು ಬಸವಣ್ಣ ಬಯಸಿದ್ದರು. ಕಾಯಕ, ದಾಸೋಹ ತತ್ವಗಳು ಜಗತ್ತಿಗೆ ನೀಡಿದ ಬಹುದೊಡ್ಡ ಸಂದೇಶಗಳಾಗಿವೆ. ಅವರ ವ್ಯಕ್ತಿತ್ವಕ್ಕೆ ತಕ್ಕಂತೆ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಿಸಿದೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ, ಸಂಶೋಧಕ ಶರಣಬಸಪ್ಪ ಕೋಲ್ಕಾರ ಮಾತನಾಡಿ, ‘ಮಹಾ ಮಾನವತಾವಾದಿ, ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸುವುದರೊಂದಿಗೆ ರಾಜ್ಯ ಸರ್ಕಾರ ಶರಣ ಸಂಕುಲಕ್ಕೆ ಬಹುದೊಡ್ಡ ಗೌರವ ಸಲ್ಲಿಸಿದೆ. ಮುಖ್ಯಮಂತ್ರಿ ನಿರ್ಧಾರವು ಚಾರಿತ್ರಿಕ. ಸಚಿವ ಶಿವರಾಜ ತಂಗಡಗಿ ಪ್ರಯತ್ನ, ಒತ್ತಾಸೆ ಇದರ ಹಿಂದೆ ಸಾಕಷ್ಟು ಇತ್ತು. ಜಿಲ್ಲೆಯ ಪ್ರತಿಭಾನ್ವಿತ ಕಲಾವಿದ, ಸಾಹಿತಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ, ವಿವಿಧ ಅಕಾಡೆಮಿ, ಟ್ರಸ್ಟ್‌ಗಳಲ್ಲಿ ಅಧಿಕ ಸ್ಥಾನ ನೀಡಿ, ಜಿಲ್ಲೆಗೆ ಸಾಮಾಜಿಕ, ಪ್ರಾದೇಶಿಕ ನ್ಯಾಯ ಒದಗಿಸಿದ್ದಾರೆ. ಅದಕ್ಕಾಗಿಯೇ ಅವರಿಗೆ ನಮ್ಮ ಟ್ರಸ್ಟ್‌ನಿಂದ ಪ್ರತಿಷ್ಠಿತ ಬಸವಚೇತನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ’ ಎಂದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಅಜ್ಮೀರ ನಂದಾಪುರ ಮಾತನಾಡಿದರು. ಟ್ರಸ್ಟ್‌ ಅಧ್ಯಕ್ಷ ರೇವಣಸಿದ್ದಪ್ಪ ಕೋಲ್ಕಾರ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಶಿವರೆಡ್ಡಿ ನಾಯಕ, ಶರಣೇಗೌಡ ಮಾಲಿಪಾಟೀಲ, ಚನ್ನಬಸಪ್ಪ ಸುಂಕದ, ಶಶಿಧರಗೌಡ ಪಾಟೀಲ, ಶರಣಪ್ಪ ಸಾಹುಕಾರ, ಟ್ರಸ್ಟ್‌ನ ಪದಾಧಿಕಾರಿಗಳಾದ ವೀರಭದ್ರಗೌಡ ಪೊಲೀಸ್‌ಪಾಟೀಲ, ಬಸವರಾಜಪ್ಪ ಕೋಲ್ಕಾರ, ಶರಣಪ್ಪ ಪಲ್ಲೇದ, ಮರುಡಬಸಪ್ಪ ಕೆ, ನಾಗರಾಜ್ ಪಲ್ಲೇದ ಇದ್ದರು. ಶಿಕ್ಷಕಿ ಅಮರಮ್ಮ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT