ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ಫಲಾನುಭವಿಗಳ ಸಮ್ಮೇಳನ: ಅಭಿವೃದ್ಧಿಯ ಮಂತ್ರ ಜಪಿಸಿದ ಬೊಮ್ಮಾಯಿ

ಪಕ್ಷ, ಯಾರ ಹೆಸರನ್ನೂ ಉಲ್ಲೇಖಿಸದೆ ಮುಖ್ಯಮಂತ್ರಿ ಟೀಕಾ ಪ್ರಹಾರ
Last Updated 14 ಮಾರ್ಚ್ 2023, 14:41 IST
ಅಕ್ಷರ ಗಾತ್ರ

ಗಂಗಾವತಿ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಯೋಜನೆಗಳ ಫಲಾನುಭವಿಗಳ ಸಮ್ಮೇಳನದಲ್ಲಿ ಸಚಿವರು ಹಾಗೂ ಶಾಸಕರು ನೇರವಾಗಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿವೃದ್ಧಿಯ ಮಂತ್ರ ಜಪಿಸಿದರು. ಆದರೆ, ಅವರು ತಮ್ಮ ಭಾಷಣದಲ್ಲಿ ಎಲ್ಲಿಯೂ ಯಾವುದೇ ಪಕ್ಷ ಹಾಗೂ ವ್ಯಕ್ತಿಯ ಹೆಸರುಗಳನ್ನು ಪ್ರಸ್ತಾಪಿಸಲಿಲ್ಲ.

ಇಲ್ಲಿನ ಕನಕಗಿರಿ ರಸ್ತೆಯ ತಾಲ್ಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ ‘ಸರ್ಕಾರದ ಅಸ್ತಿತ್ವ ಕೇವಲ ವಿಧಾನಸೌಧದಲ್ಲಿ ಇರಬೇಕಾ, ಜನರ ಸಂಕಷ್ಟದಲ್ಲಿ ಇರಬೇಕಾ? ಸರ್ಕಾರ ಜನರ ಸುತ್ತಲು ಇರಬೇಕೆ ಹೊರತು; ಸರ್ಕಾರದ ಸುತ್ತ ಜನ ಸುತ್ತಾಡುವಂತೆ ಆಗಬಾರದು’ ಎಂದರು.

‘ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಜಿಲ್ಲೆಯ 1.57 ಲಕ್ಷ ಜನ ರೈತರಿಗೆ ₹456 ಕೋಟಿ ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿದೆ. ಯಶಸ್ಸಿನ, ವಿದ್ಯಾನಿಧಿ ಹೀಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ಕೊಟ್ಟಿದ್ದೇನೆ. ಈಗ ದುಡ್ಡಿಗಿಂತ ದುಡಿಮೆಯೇ ದೊಡ್ಡಪ್ಪ. ಪ್ರಧಾನಿ ಮೋದಿಯವರ ದೂರದೃಷ್ಟಿಯಿಂದ ಮಧ್ಯವರ್ತಿಗಳ ಹಾವಳಿಯಿಲ್ಲದೇ ಸರ್ಕಾರದ ಫಲಾನುಭವಿಗಳಿಗೆ ನೇರವಾಗಿ ಡಿಬಿಟಿ ಮೂಲಕ ಸಹಾಯ ತಲುಪಿಸಲಾಗುತ್ತಿದೆ’ ಎಂದರು.

‘ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಬೆಳೆದವರು ಆ ಸಮಾಜದವರಿಗೆ ಏನು ಕೊಟ್ಟಿದ್ದಾರೆ. ಪರಿಶಿಷ್ಟ ಸಮುದಾಯದವರ ರಕ್ಷಣೆ ನಮ್ಮಿಂದ ಮಾತ್ರ ಸಾಧ್ಯ ಎಂದವರು ಏನು ಮಾಡಿದರು’ ಎಂದು ಪ್ರಶ್ನಿಸಿದ ಬೊಮ್ಮಾಯಿ, ’ಮೀಸಲಾತಿ ಹೆಚ್ಚಿಸುವ ಜೇನುಗೂಡಿಗೆ ಕೈ ಹಾಕಬೇಡಿ ಎಂದು ಅನೇಕರು ಹೇಳಿದರು. ನಾನು ಜವಾಬ್ದಾರಿ ಹೊತ್ತು ಜೇನುಗೂಡಿಗೆ ಕೈ ಹಾಕಿದ್ದು, ಹುಳ ನಾನು ಕಡಿಸಿಕೊಳ್ಳುತ್ತೇನೆ. ನಮ್ಮನ್ನು ನಂಬಿದವರಿಗೆ ಜೇನು ಕೊಡುತ್ತೇನೆ. ಬಿಜೆಪಿಯಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ’ ಎಂದು ಪ್ರತಿಪಾದಿಸಿದರು.

ಇದಕ್ಕೂ ಮೊದಲು ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಹಾಲಪ್ಪ ಆಚಾರ್‌ ‘ಕಾಂಗ್ರೆಸ್‌ ಪಕ್ಷದ ಬಗ್ಗೆಯೇ ಗ್ಯಾರಂಟಿ ಇಲ್ಲ. ಇನ್ನು ಅವರು ಕೊಡುವ ಕಾರ್ಡ್‌ ಯಾವ ಗ್ಯಾರಂಟಿಯದ್ದು. ಬಜೆಟ್‌ನಲ್ಲಿ ಬೊಮ್ಮಾಯಿ ಅವರು ನನ್ನ ಇಲಾಖೆಗೆ ವಿಶೇಷ ಆದ್ಯತೆ ನೀಡಿ ಮಹಿಳಾ ಕಲ್ಯಾಣಕ್ಕೆ ಕಾರಣರಾಗಿದ್ದಾರೆ’ ಎಂದರು.

ಶಾಸಕ ಪರಣ್ಣ ಮುನವಳ್ಳಿ ‘ಎಡದಂಡೆ ಕಾಲುವೆ ಅಭಿವೃದ್ಧಿಗೆ ಸರ್ಕಾರ ₹1,200 ಕೋಟಿ ಕೊಟ್ಟಿದೆ. ನಮ್ಮ ಡಬಲ್‌ ಎಂಜಿನ್‌ ಸರ್ಕಾರದಿಂದಾಗಿ ಅನೇಕ ಅಭಿವೃದ್ಧಿ ಕೆಲಸಗಳು ಆಗಿವೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌, ತೋಟಗಾರಿಕಾ ಸಚಿವ ಕೆ. ಮುನಿರತ್ನ, ಶಾಸಕ ಬಸವರಾಜ ದಢೇಸೂಗೂರು, ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಗಂಗಾವತಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಶ್ರೇಷ್ಠಿ, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಕೆ ಗಿರೀಶ ಉಪ್ಪಾರ, ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಪಾಲ್ಗೊಂಡಿದ್ದರು. ಕಾಡಾ ಮಾಜಿ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ, ಗಿರೇಗೌಡ, ಬಿಜೆಪಿ ಮುಖಂಡ ವಿರೂಪಾಕ್ಷಪ್ಪ ಸಿಂಗನಾಳ, ನೆಕ್ಕಿಂಟಿ ಸೂರ್ಯಬಾಬು, ಸಂತೋಷ ಕೆಲೋಜಿ, ಕಾಶಿನಾಥ ಚಿತ್ರಗಾರ, ಚನ್ನಪ್ಪ ಮಳಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

100 ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆ
ಗಂಗಾವತಿ:
ಕೊಪ್ಪಳ ಜಿಲ್ಲೆಯಲ್ಲಿ 100 ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುವುದು. ಇದರಿಂದ ರೈತರು ಬೆಳೆದ ಬೆಳೆಗಳು ಸ್ಥಳೀಯ ಮಟ್ಟದಲ್ಲಿ ಸಂಸ್ಕರಣಗೊಂಡು, ಬ್ರ್ಯಾಂಡ್ ನೇಮ್ ಇರುವ ಮಾರುಕಟ್ಟೆ ಹಾಗೂ ರೈತನ ಬೆಳೆಗೆ ಉತ್ತಮ ಬೆಲೆ ದೊರಕಲು ಅನುಕೂಲವಾಗಲಿದೆ ಎಂದು ಬೊಮ್ಮಾಯಿ ತಿಳಿಸಿದರು.

‘ಕೊಪ್ಪಳ ಏತ ನೀರಾವರಿ; ನಾನೇ ಉದ್ಘಾಟಿಸುವೆ’
ಕೊಪ್ಪಳ ಏತ ನೀರಾವರಿ ವಿಚಾರ ಪ್ರಸ್ತಾಪಿಸಿದ ಬೊಮ್ಮಾಯಿ ‘ನೀರಾವರಿಯಲ್ಲಿ ಪರಿಣಿತ ಎಂದು ಹೇಳಿಕೊಂಡು ಕಣ್ಣೀರು ಹಾಕಿದವರು ಒಂದುಹನಿ ನೀರು ತರಲಿಲ್ಲ’ ಎಂದು ಹೆಸರು ಹೇಳದೇ ಸಿದ್ದರಾಮಯ್ಯ ಅವರನ್ನು ಟೀಕಿಸಿದರು. ಜಿಲ್ಲೆಯ ಬುದ್ಧಿವಂತ ರಾಜಕಾರಣಿಯೊಬ್ಬ ತನಗೆ ತಿಳಿದಿದ್ದೇ ಸರಿ ಎಂದುಕೊಂಡು ನೀರು ಬರುವುದಿಲ್ಲ ಎಂದಿದ್ದ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೆಸರು ಪ್ರಸ್ತಾಪಿಸದೇ ಕುಟುಕಿದ ಮುಖ್ಯಮಂತ್ರಿ ಇನ್ನೊಂದು ವಾರದಲ್ಲಿ ನಾನೇ ಬಂದು ಕೊಪ್ಪಳ ಏತನೀರಾವರಿ ಯೋಜನೆಗೆ ಚಾಲನೆ ನೀಡುತ್ತೇನೆ’ ಎಂದರು.

‘ಹಿಂದಿನ ಸರ್ಕಾರಗಳ ಅವಧಿಯಲ್ಲಿ ಸಾಕಾರಗೊಳ್ಳದಿದ್ದ ಕೊಪ್ಪಳ ಏತನೀರಾವರಿ ಯೋಜನೆಗೆ ನಮ್ಮ ಸರ್ಕಾರದ ಅವಧಿಯಲ್ಲಿ ಕಾಯಕಲ್ಪ ಕಾಣುತ್ತಿದೆ. ಗಂಗಾವತಿ ತಾಲ್ಲೂಕಿನಲ್ಲಿ 41 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಮಂಜೂರಾತಿ ನೀಡಲಾಗಿದೆ’ ಎಂದು ಹೇಳಿದರು.

ಜೂನ್‌ ವೇಳೆಗೆ ಸಿಂಧನೂರು ತನಕ ರೈಲು
ಗಂಗಾವತಿ:
ಗಂಗಾವತಿ ತಾಲ್ಲೂಕಿಗೆ ರೈಲು ಬರಲು ನಮ್ಮ ಸರ್ಕಾರವೇ ಕಾರಣ. ಸದ್ಯಕ್ಕೆ ಕಾರಟಗಿ ತನಕ ಇರುವ ರೈಲು ಮಾರ್ಗ ಜೂನ್‌ ವೇಳೆಗೆ ಸಿಂಧನೂರು ತನಕ ವಿಸ್ತರಣೆಯಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

‘ಕಾಂಗ್ರೆಸ್‌ ಕೈಗೊಂಡು ಪೂರ್ಣಗೊಳಿಸದ ಕಾಮಗಾರಿಗಳನ್ನು ನಾವು ಮಾಡುತ್ತಿದ್ದೇವೆ. ಕೊಪ್ಪಳಕ್ಕೆ ವಿಮಾನ ನಿಲ್ದಾಣಕ್ಕೆ ಇರುವ ಅಡೆಗಡೆಗಳನ್ನು ಆದಷ್ಟು ಬೇಗನೆ ಪರಿಹರಿಸಲಾಗುವುದು’ ಎಂದರು.

*
ನೀರು ಕೊಟ್ಟವರನ್ನು ಜನ ಎಂದಿಗೂ ಮರೆಯುವುದಿಲ್ಲ. ಆದರೆ, ಕೊಡದವರಿಗೆ ನೀರು ಕುಡಿಸುತ್ತಾರೆ. ಗಂಗಾವತಿ ತಾಲ್ಲೂಕಿನಲ್ಲಿ ಕೆರೆ ತುಂಬಿಸುವ ಕಾಮಗಾರಿಗಳನ್ನು ನಮ್ಮ ಸರ್ಕಾರವೇ ಉದ್ಘಾಟನೆ ಮಾಡಲಿದೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT