ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರಳು ಮನೆಯಲ್ಲೂ ಬೆಳೆಯಬಹುದು ವೀಳ್ಯದೆಲೆ

ನಿಡಶೇಸಿ ಫಾರ್ಮ್‌ನಲ್ಲಿ ಗಮನಸೆಳೆಯುವ ಇಸ್ರೇಲ್ ಮಾದರಿ ಬೇಸಾಯ
Published 11 ಜೂನ್ 2024, 7:01 IST
Last Updated 11 ಜೂನ್ 2024, 7:01 IST
ಅಕ್ಷರ ಗಾತ್ರ

ಕುಷ್ಟಗಿ: ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಸುಧಾರಿತ ತಂತ್ರಜ್ಞಾನ ಮತ್ತು ಬೇಸಾಯ ಕ್ರಮಗಳನ್ನು ಅನುಸರಿಸಿದರೆ ಫಲವತ್ತಲ್ಲದ ಮತ್ತು ಜವಳು ಮಣ್ಣು ಜಮೀನಿನಲ್ಲಿಯೂ ವೀಳ್ಯದೆಲೆ ಬಳ್ಳಿ ಬೆಳೆಯನ್ನು ರೈತರು ಲಾಭದಾಯಕವಾಗಿಸಿಕೊಳ್ಳಲು ಸಾಧ್ಯ.

ರಾಜ್ಯ ತೋಟಗಾರಿಕೆ ಏಜೆನ್ಸಿ (ಕೆಎಸ್‌ಎಚ್‌ಡಿಎ) ವ್ಯಾಪ್ತಿಯಲ್ಲಿರುವ ತಾಲ್ಲೂಕಿನ ನಿಡಶೇಸಿಯಲ್ಲಿರುವ ಇಸ್ರೇಲ್‌ ಮಾದರಿ ತೋಟಗಾರಿಕೆ ಸಸ್ಯ ಕ್ಷೇತ್ರದಲ್ಲಿ ವೀಳ್ಯದೆಲೆ ಬಳ್ಳಿಯನ್ನು ಅಭಿವೃದ್ಧಿಪಡಿಸಿರುವುದು ಕಂಡುಬರುತ್ತದೆ. ಕರಿಎಲೆ ಮತ್ತು ಅಂಬಾಡಿ ವೀಳ್ಯದೆಲೆಯನ್ನು ಪ್ರತ್ಯೇಕವಾಗಿ ಬೆಳೆಯಲಾಗುತ್ತಿದ್ದು, ರೈತರ ಗಮನಸೆಳೆಯುತ್ತಿದೆ. ಪ್ರಾತ್ಯಕ್ಷಿಕೆ ಮೂಲಕ ಹೊಸ ಮಾದರಿಯನ್ನು ರೈತರಿಗೆ ಪರಿಚಯಿಸುವುದು, ಪ್ರೋತ್ಸಾಹ, ತರಬೇತಿ ನೀಡುವುದರ ಜೊತೆಗೆ ಇಲಾಖೆಗೆ ಆದಾಯವನ್ನೂ ತಂದು ಕೊಡುವ ಉದ್ದೇಶದಿಂದ ಕ್ಷೇತ್ರದಲ್ಲಿ ಹಲವು ರೀತಿಯ ಹಣ್ಣು, ತರಕಾರಿ ಬೆಳೆಗಳನ್ನು ಬೆಳೆಯುತ್ತಿದ್ದು ಅದರಲ್ಲಿ ಎಲೆಬಳ್ಳಿಯೂ ಒಂದು.

ತಾಲ್ಲೂಕಿನಲ್ಲಿ ಅಲ್ಲಲ್ಲಿ ಎಲೆ ಬಳ್ಳಿಯನ್ನು ವಾಣಿಜ್ಯ ಬೆಳೆಯಾಗಿ ಅನೇಕ ರೈತರು ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆಯುತ್ತಿದ್ದರೂ ತಲಾ 10 ಗುಂಟೆ ಪ್ರದೇಶದಲ್ಲಿ ಅಳವಡಿಸಿರುವ ಪಾಲಿಹೌಸ್‌ ಮತ್ತು ಕಡಿಮೆ ಖರ್ಚಿನ ಪಾಲಿ ಟೆನಲ್ ನೆರಳು ಪರದೆ ವ್ಯವಸ್ಥೆಯಲ್ಲಿನ ಎಲೆಬಳ್ಳಿ ತೆಳುವಾಗಿರುತ್ತದೆ. ಖಾರ ಕಡಿಮೆ, ಉತ್ಕೃಷ್ಟವೂ ಹೌದು. ಇದೇ ಕಾರಣಕ್ಕೆ ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆದಿದ್ದಕ್ಕಿಂತ ನಿಡಶೇಸಿ ಫಾರ್ಮ್‌ನಲ್ಲಿ ಬೆಳೆದ ಎಲೆ ಹೆಚ್ಚಿನ ದರಕ್ಕೆ ಮಾರಾಟವಾಗುತ್ತಿದೆ.

ನಾಟಿ ಪದ್ಧತಿ: ಹತ್ತು ಗುಂಟೆಯಲ್ಲಿ ಬಳ್ಳಿಯಿಂದ ಬಳ್ಳಿಗೆ 2 ಅಡಿ ಸಾಲಿನಿಂದ 4 ಅಡಿ ಅಂತರದಲ್ಲಿ 800 ರೆಂಬೆ (ಕಡ್ಡಿ)ಗಳನ್ನು ನಾಟಿ ಮಾಡಲಾಗಿದ್ದು, ಆರು ತಿಂಗಳಲ್ಲಿ ಎಲೆಗಳು ಕಟಾವಿಗೆ ಬಂದಿವೆ. ನಿರಂತರವಾಗಿ ಕಟಾವು ಮಾಡಲಾಗುತ್ತಿದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಬೆಳೆದರೆ ಕಟಾವಿಗೆ ಬರುವುದು ವರ್ಷದ ನಂತರ. ಅಷ್ಟೇ ಅಲ್ಲ ಐದು ಎಕರೆಯಲ್ಲಿ ಬರುವ ಲಾಭ ನೆರಳು ಪದ್ಧತಿಯಲ್ಲಿ ಹತ್ತು ಗುಂಟೆಯಲ್ಲಿ ಪಡೆಯಲು ಸಾಧ್ಯ ಎಂಬುದು ವಿಶೇಷ.

ಬೇಸಾಯ ಕ್ರಮ: ಎಲೆಬಳ್ಳಿಗೆ ಸೂರ್ಯನ ಕಿರಣಗಳು ನೇರವಾಗಿ ಸ್ಪ‍ರ್ಶಿಸಿದರೆ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಅಲ್ಲದೆ ನೆರಳು, ಗಾಳಿ ತಡೆಗೆ ಮತ್ತು ಬಳ್ಳಿಗೆ ಆಸರೆಗಾಗಿ ಸಾಂಪ್ರದಾಯಿಕ ಪದ್ಧತಿಯಲ್ಲಿ ನುಗ್ಗೆ, ಚೊಗಚೆ ಬೆಳೆಸಲಾಗುತ್ತದೆ. ಆದರೆ ಪೋಷಕಾಂಶ ಬಳಸಿಕೊಳ್ಳುವಲ್ಲಿ ಎಲೆಬಳ್ಳಿಗಿಂತ ಇತರೆ ಗಿಡಗಳು ಹೆಚ್ಚು ಪೈಪೋಟಿ ನೀಡುತ್ತವೆ. ನೆರಳು ಪದ್ಧತಿಯಲ್ಲಿ ಆಸರೆಗೆ ಗಿಡಗಳ ಬದಲು 14 ಅಡಿ ಬಿದಿರಿನ ಗಟ್ಟಿ ಬೊಂಬುಗಳನ್ನು ನಿಲ್ಲಿಸಲಾಗಿದೆ. ಹನಿ ನೀರಾವರಿ, ಮೈಕ್ರೋಸ್ಪ್ರಿಂಕ್ಲರ್, ಜೀವಾಮೃತ, ಎರೆಜಲದಂಥ ಸಾವಯವ ಪೋಷಕಾಂಶಗಳನ್ನು ನೀಡಲಾಗುತ್ತಿದೆ. ರಸಹೀರುವ ಕೀಟಬಾಧೆ ನಿಯಂತ್ರಣಕ್ಕೆ ಬೇವು, ಸಸ್ಯಜನ್ಯ ಔಷಧ ಬಳಕೆ ಮಾಡಲಾಗುತ್ತಿದೆ. ನಿಡಶೇಸಿ ಫಾರ್ಮ್‌ನಲ್ಲಿ ಮಣ್ಣು ಜವಳು ಮಿಶ್ರಿತವಾಗಿದ್ದು, ರೈತರ ಜಮೀನು ಫಲವತ್ತಾಗಿದ್ದರೆ ಇನ್ನೂ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ ಎನ್ನುತ್ತಾರೆ ಸಸ್ಯಕ್ಷೇತ್ರದ ನಿರ್ವಹಿಸುವ ತೋಟಗಾರಿಕೆ ಸಹಾಯಕ ಆಂಜನೇಯ ದಾಸರ.

ಕಾಂಡಕ್ಕೂ ಬೇಡಿಕೆ: ನಿಡಶೇಸಿ ಫಾರ್ಮ್‌ ಎಲೆ ಬಳ್ಳಿ ಪದ್ಧತಿ ಬಗ್ಗೆ ರೈತರಲ್ಲಿ ಆಸಕ್ತಿ ಹೆಚ್ಚಿಸಿದೆ. ಹಾಗಾಗಿ ನಾಟಿಗೆ ಬೇಕಿರುವ ಎಲೆಬಳ್ಳಿ ಕಾಂಡಕ್ಕೆ ಹೆಚ್ಚಿನ ಬೇಡಿಕೆ ಬಂದಿದ್ದು, ಒಂದು ಕಾಂಡದ ಬೆಲೆ ₹20 ಎಕರೆಗೆ ಮೂರು ಸಾವಿರ ಕಾಂಡಗಳು ಬೇಕಾಗುತ್ತವೆ ಎಂದು ದಾಸರ ವಿವರಿಸಿದರು.

ಕೋಲಕತ್ತಾ ಬಳ್ಳಿ: ಈ ಮಧ್ಯೆ ಅತಿ ಹೆಚ್ಚು ರುಚಿ, ಸಿಹಿಯಾಗಿರುವ ಕೋಲಕತ್ತಾ ಎಲೆಬಳ್ಳಿಯನ್ನೂ ನಿಡಶೇಸಿ ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸುವ ಆಲೋಚನೆ ಇದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅದೂ ಅತಿ ಹೆಚ್ಚು ಲಾಭದ ಬೆಳೆ ಎನ್ನಲಾಗುತ್ತಿದೆ ಎಂದರು. (ಆಂಜನೇಯ ಅವರ ಸಂಪರ್ಕ ಸಂಖ್ಯೆ: 8217896705).

ಸುಧಾರಿತ ರೀತಿಯಲ್ಲಿ ಎಲೆಬಳ್ಳಿ ಬೆಳೆದರೆ ಹೆಚ್ಚು ಲಾಭ. ಈ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ.
–ಆಂಜನೇಯ ದಾಸರ, ತೋಟಗಾರಿಕೆ ಸಹಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT