ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಗಿರಿ: ಭಕ್ತಿ–ಭಾವದ‌ ಗ್ರಾಮ ಪ್ರದಕ್ಷಿಣೆ

ಹೊರ ರಾಜ್ಯದಲ್ಲಿಯೂ ಭಜನಾ ಕಲೆ ಪ್ರದರ್ಶನ: ಕನಕಾಚಲಪತಿ ಮಂಡಳಿ ಕಾರ್ಯ
Published 1 ಸೆಪ್ಟೆಂಬರ್ 2024, 5:09 IST
Last Updated 1 ಸೆಪ್ಟೆಂಬರ್ 2024, 5:09 IST
ಅಕ್ಷರ ಗಾತ್ರ

ಕನಕಗಿರಿ: ಭಜನೆ ಎಂಬ ಮೂರಕ್ಷರಕ್ಕೆ ತುಂಬ ಮಹತ್ವ ಇದೆ. ಮನುಷ್ಯ ತನ್ನಿಂದ ಮನಃಪೂರ್ವಕವಾಗಿ ದೇವರಿಗೆ ನೀಡುವಂತಹ  ಸಂಪತ್ತು ಎಂದರೆ ಅದು ಭಜನೆ. ಭಾವ, ಭಕ್ತಿ ಪೂರ್ವಕವಾಗಿ ಹಾಡುವ ಭಜನೆ ಪದಗಳು ಅನೇಕ ವರ್ಷಗಳಿಂದ‌ ಪ್ರಚಲಿತದಲ್ಲಿವೆ. ಇಂಥ ಪದಗಳನ್ನು ಹಾಡುತ್ತಾ ಆ ಕಲೆ ಉಳಿಸಿಕೊಂಡು ಹೋಗುವ ಕೆಲಸವನ್ನು ಇಲ್ಲಿನ ಕನಕಾಚಲಪತಿ ಭಜನಾ ಮಂಡಳಿ ಕಳೆದ ಎರಡು ದಶಕಗಳಿಂದಲೂ ಮಾಡುತ್ತಿದೆ.

ಸಂಘವು ಪಟ್ಟಣ ಸೇರಿದಂತೆ ಜಿಲ್ಲೆ, ಹೊರ ರಾಜ್ಯದಲ್ಲಿ ಹೆಸರು ಮಾಡಿದೆ. ಪ್ರತಿ ಶ್ರಾವಣ ಮಾಸದಲ್ಲಿ ‘ಗ್ರಾಮ ಪ್ರದಕ್ಷಿಣೆ’ ಎಂಬ‌ ವಿಶಿಷ್ಟ ಕಾರ್ಯಕ್ರಮವನ್ನು ಒಂದು ತಿಂಗಳ ಕಾಲ ನಡೆಸಿಕೊಂಡು ಬರಲಾಗುತ್ತಿದೆ. ಭಜನೆ, ಭಕ್ತಿಗೀತೆ, ದಾಸರ ಪದಗಳು, ತತ್ವಪದಗಳನ್ನು ಹಾಡುತ್ತಾ ಪಟ್ಟಣದಲ್ಲಿರುವ ದೇಗುಲ, ಮಸೀದಿ ಹಾಗೂ ದರ್ಗಾದಲ್ಲಿ ನಸುಕಿನ‌ಜಾವ ದೀಪ ಮೂಡಿಸಲಾಗುತ್ತಿದೆ.

ಕನಕಾಚಲಪತಿ ದೇಗುಲದಲ್ಲಿ ಮಹಾ ಮಂಗಳಾರತಿಯೊಂದಿಗೆ ಆರಂಭವಾಗುವ ಗ್ರಾಮ ಪ್ರದಕ್ಷಿಣೆ ಪ್ರತಾಪರಾಯನ‌ ಗುಡಿ, ಆನೆಗೊಂದಿ ಅಗಸಿಯ ಹನುಮಪ್ಪ, ಹೊನ್ನೂರುಬಾಷನ‌ ಮಸೀದಿ, ದ್ಯಾಮವ್ವನ ಗುಡಿಯಲ್ಲಿ ದೀಪಾರಾಧನೆ ಮಾಡಿ ತೆಗ್ಗಿನಮನಿ ಓಣಿ ಮೂಲಕ ಯಮನೂರಸ್ವಾಮಿ ದರ್ಗಾ, ವೆಂಕಟರಮಣ, ಮಲ್ಲಯ್ಯ ತಾತನ‌ ದೇವಸ್ಥಾನ ಸೇರಿದಂತೆ‌ ರಾಜಬೀದಿಯಲ್ಲಿರುವ ಎಲ್ಲಾ ದೇಗುಲದಲ್ಲಿ ಎಣ್ಣೆ ಹಾಕಿ ದೀಪ ಮೂಡಿಸಿ ಮಳೆ, ಬೆಳೆ ಚೆನ್ನಾಗಿರಲಿ ಹಾಗೂ ರೈತನ‌ ಬದುಕು ಹಸನಾಗಲಿ ಎಂದು ಪ್ರಾರ್ಥಿಸಲಾಗುತ್ತಿದೆ.

ಭಜನಾ ಸಂಘದಿಂದ‌ ಇಡೀ ವರ್ಷದಲ್ಲಿ ಪ್ರತಿ ಶುಕ್ರವಾರ ಏಕಾಂತಸೇವೆ, ಶನಿವಾರ ಪಲ್ಲಕ್ಕಿ, ತೊಟ್ಟಿಲು ಸೇವೆ ಹಾಗೂ ಪ್ರತಿ ಅಮಾವಾಸ್ಯೆ ದಿನ ಅರಿಕೆ ರಥೋತ್ಸವ ನಡೆಸಲಾಗುತ್ತಿದೆ.

ಕಾರ್ತಿಕ ಮಾಸದಲ್ಲಿ ತಿಂಗಳ ಪರ್ಯಾಂತ ದೀಪೋತ್ಸವ ನಡೆಸಿದರೆ ಗುರು ಪೂರ್ಣಿಮೆ, ನರಸಿಂಹ‌ ಜಯಂತಿ, ರಾಯರ ಆರಾಧನೆ,‌ ವಿಶಿಷ್ಟ ಗರುಡೋತ್ಸವ, ತುಳಸಿ ಅರ್ಚನೆ ಹೀಗೆ ಕನಕದಾಸ, ಪುರದಂರದಾಸರ ಜಯಂತಿಯನ್ನು ವಿಶಿಷ್ಟ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಸಂಘದ ಆಶ್ರಯದಲ್ಲಿ ಮಕರ ಸಂಕ್ರಮಣ ನಿಮಿತ್ತ ಮಂತ್ರಾಲಯಕ್ಕೆ ಪಾದಯಾತ್ರೆ ನಡೆಸಿಕೊಂಡು‌ ಹೋಗಲಾಗುತ್ತಿದ್ದು ಇಲ್ಲಿಗೆ ಇಪ್ಪತ್ತೊಂದು ವರ್ಷಗಳಾಗಿವೆ.

ಐದು ಸಲ ತಿರುಪತಿ‌ ಮೆಟ್ಟಿಲೋತ್ಸವ (ಭಜನೆ ಪದಗಳನ್ನು ಹಾಡುತ್ತಾ ತಿರುಪತಿಯ ಮೆಟ್ಟಿಲು ಹತ್ತುವುದು)
ಮಾಡಿ ಗಮನ ಸೆಳೆಯಲಾಗಿದೆ.  ಕರಡಿಗುಡ್ಡದಲ್ಲಿ ನಡೆದ ಹನುಮದ್‌ ವ್ರತ ಹಾಗೂ ಶ್ರೀನಿವಾಸ‌ ಕಲ್ಯಾಣ ಮಹೋತ್ಸವ, ಮಾನವಿ,‌ ಹಾಗೂ ಚಿಕಲಪರ್ವಿಯಲ್ಲಿ ನಡೆದ ಜಗನ್ನಾಥ ದಾಸರು ಹಾಗೂ ವಿಜಯದಾಸರ ಆರಾಧನೆ ಮತ್ತು ಕುಷ್ಟಗಿ ತಾಲ್ಲೂಕಿನ‌ ಮೆಣೆದಾಳದಲ್ಲಿ ನಡೆದ ಜಗನ್ನಾಥ ದಾಸರ ಆರಾಧನೆಯಲ್ಲಿ ಭಜನಾ‌ ಸಂಘದ ಸದಸ್ಯರು ಭಾಗವಹಿಸಿ ತಮ್ಮ ಪ್ರತಿಭೆ ಅನಾವರಣ ಮಾಡಿದ್ದಾರೆ ಎಂದು ಸಂಘದ ಅಧ್ಯಕ್ಷ ಗೋಪಾಲರೆಡ್ಡಿ‌ ಮಹಲಮನಿ ತಿಳಿಸುತ್ತಾರೆ.

ಕಲಬುರಗಿ ಜಿಲ್ಲೆಯ ದುಮಾದ್ರಿಯಲ್ಲಿ ನಡೆದ ಮಧ್ವನವಮಿಯಲ್ಲಿಯೂ ಕಲೆ ಮರೆದಿದ್ದಾರೆ.  ಗೋಪಾಲ ದಾಸರ ಸೇವೆ ಮೆಚ್ಚಿ ರಾಜೀವಗಾಂಧಿ ಯುವ ಶಕ್ತಿ ಸಂಘ ಹಾಗೂ ಇತರೆ ಸಂಘಟನೆಗಳು ಸನ್ಮಾನಿಸಿವೆ

ತಾಲ್ಲೂಕು ಮಟ್ಟದ ಭಜನಾ ಸ್ಪರ್ಧೆ ನಡೆಸಿ ಗ್ರಾಮೀಣ ಪ್ರತಿಭೆಗಳಿಗೆ‌ ಪ್ರೋತ್ಸಾಹ ನೀಡಲಾಗಿದೆ ಎಂದು ಕಾರ್ಯದರ್ಶಿ ಗುಂಡಪ್ಪ ಚಿತ್ರಗಾರ ತಿಳಿಸಿದರು.

ಭಜನಾ ಸಂಘದ ಅಧ್ಯಕ್ಷರಾಗಿರುವ ಗೋಪಾಲರೆಡ್ಡಿ ಅಕ್ಷರ ಬಲ್ಲವರಲ್ಲ, ಆದರೂ ಎರಡು ‌ನೂರಕ್ಕೂ ಹೆಚ್ಚು ಹಾಡುಗಳನ್ನು ನಿರರ್ಗಳವಾಗಿ ಹಾಡುತ್ತಾರೆ. ತಂದೆ ನಾಗರೆಡ್ಡಿ ಹಾಗೂ ಹಿರಿಯ ಭಜನೆ ಪದ ಹಾಡುವವರ ಸ್ನೇಹ ಅವರ ಹಾಡುಗಾರಿಕೆಗೆ ಶಕ್ತಿ ತುಂಬಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT