ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರ್ ಕಾಲಿಗೆ ಬೀಳಲು ಯತ್ನಿಸಿದ ತಾ.ಪಂ ಸದಸ್ಯ

ದೇವಸ್ಥಾನಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸದ್ದಕ್ಕೆ ಬೇಸರ
Last Updated 8 ಜೂನ್ 2020, 20:49 IST
ಅಕ್ಷರ ಗಾತ್ರ

ಕುಷ್ಟಗಿ (ಕೊಪ್ಪಳ ಜಿಲ್ಲೆ): ದೋಟಿಹಾಳ ಬಳಿಯ ಗೋತಗಿ ರಸ್ತೆಯಲ್ಲಿರುವ ಮಾರುತಿ ದೇವಸ್ಥಾನಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ಬೇಡಿಕೆ ಈಡೇರಿಸದ ಜೆಸ್ಕಾಂ ಅಧಿಕಾರಿ ವರ್ತನೆಗೆ ಬೇಸತ್ತ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಬದಾಮಿ ಅವರು ಎಂಜಿನಿಯರ್‌ಗೆ ಕೈ ಮುಗಿದು, ಕಾಲಿಗೆ ಬೀಳಲು ಮುಂದಾದರು.

ಸೋಮವಾರ ಸಾಮಾನ್ಯ ಸಭೆಯಲ್ಲಿ ವಿದ್ಯುತ್‌ ಕುರಿತು ಚರ್ಚೆ ನಡೆಯುತ್ತಿದ್ದಾಗ ಆಸನದಿಂದ ಎದ್ದು ಬಂದ ಮಹಾಂತೇಶ, ಸಭಾಂಗಣದ ವೇದಿಕೆಯ ಮೇಲೆಯೇ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಮಂಜುನಾಥ್‌ ಅವರ ಕಾಲಿಗೆ ಬೀಳಲು ಮುಂದಾದರು. ಬೇಡ ಎಂದು ತಡೆದರೂ ಮಹಾಂತೇಶ ಪಟ್ಟು ಸಡಿಲಿಸದೆ ಕಾಲಿಗೆ ಬೀಳಲು ಪದೇ ಪದೇ ಯತ್ನಿಸಿದರು.

‘ಮಾರುತಿ ದೇವಸ್ಥಾನಕ್ಕೆ ವಿದ್ಯುತ್‌ ಸಂಪರ್ಕ ಇಲ್ಲ. ಪ್ರತಿ ಅಮಾವಾಸ್ಯೆ, ಇತರ ಸಂದರ್ಭಗಳಲ್ಲಿ ನೂರಾರು ಭಕ್ತರು ಅಲ್ಲಿಗೆ ಬರುತ್ತಿರುತ್ತಾರೆ. ವಿದ್ಯುತ್‌ ಇಲ್ಲದೆ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ವಿದ್ಯುತ್‌ ಸಂಪರ್ಕ ಕಲ್ಪಿಸುವಂತೆ ಹೇಳುತ್ತ ಬಂದರೂ ಜೆಸ್ಕಾಂ ಕ್ರಮ ಕೈಗೊಂಡಿಲ್ಲ. ಚುನಾಯಿತ ಪ್ರತಿನಿಧಿಯಾದ ನನ್ನನ್ನು ಜನರು ನಿಂದಿಸುತ್ತಿದ್ದಾರೆ’ ಎಂದು ಮಹಾಂತೇಶ ಕಿಡಿಕಾರಿದರು.

‘ಕೆಲಸ ಆಗುವುದಾದರೆ ನಿಮಗೆ ಕೈ ಮುಗಿದು, ಕಾಲಿಗಾದರೂ ಬೀಳುತ್ತೇನೆ. ವೇದಿಕೆ ಮುಂದೆ ಬನ್ನಿ' ಎಂದಾಗ ಇತರ ಸದಸ್ಯರಿಂದಲೂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

ಮಹಾಂತೇಶ ಅವರನ್ನು ಸಮಾಧಾನಪಡಿಸಿದ ಕಾರ್ಯನಿರ್ವಾಹಕ ಅಧಿಕಾರಿಕೆ.ತಿಮ್ಮಪ್ಪ, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜೆಸ್ಕಾಂ ಎಂಜಿನಿಯರ್‌ಗೆ ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT