ಸೋಮವಾರ, ಜನವರಿ 20, 2020
18 °C
ಗಂಗಾವತಿ: ಸಹಕಾರ ಒಕ್ಕೂಟದ ಸಿಇಒಗಳ ವಾರ್ಷಿಕ ಸಭೆ

ಸಹಕಾರ ಕ್ಷೇತ್ರ: ಸಿಇಒಗಳ ಪಾತ್ರ ಮುಖ್ಯ: ಜಿ.ಶ್ರೀಧರ ಕೇಸರಹಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ‘ಸೌಹಾರ್ದ ಸಹಕಾರ ಕ್ಷೇತ್ರಗಳ ಬೆಳವಣಿಗೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪಾತ್ರ ಮುಖ್ಯ’ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಸಂಘದ ರಾಜ್ಯ ನಿರ್ದೇಶಕ ಜಿ.ಶ್ರೀಧರ ಕೇಸರಹಟ್ಟಿ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ಸಂಘದ ಕಲಬುರ್ಗಿ ಪ್ರಾಂತ್ಯದ ವತಿಯಿಂದ ನಗರದ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಕೊಪ್ಪಳ ಜಿಲ್ಲೆಯ ಸೌಹಾರ್ದ ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರ ಮತ್ತು ರೈತ ಸಮುದಾಯಗಳ ಆರ್ಥಿಕ ಬೆಂಬಲಕ್ಕೆ ಸಹಕಾರ ಸಂಸ್ಥೆಗಳು ಕೈ ಜೋಡಿಸುತ್ತಿವೆ. ಸೌಹಾರ್ದ ಸಂಘಗಳು ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಸೌಲಭ್ಯಕ್ಕೂ ಬೆನ್ನೆಲುಬಾಗಿವೆ. ಇಂತಹ ಸೌಹಾರ್ದಗಳ ಬಲವರ್ಧನೆ ನಿಮ್ಮ ಮೇಲಿದೆ ಎಂದರು.

ಸೌಹಾರ್ದ ಸಹಕಾರಿಗಳ ಒಕ್ಕೂಟದ ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ನಾಗಲಿಂಗಪ್ಪ ಪತ್ತಾರ ಮಾತನಾಡಿ,‘ಸೌಹಾರ್ದ ಸಹಕಾರಿಗಳಿಗೆ ಸರ್ಕಾರ ಕಟ್ಟುನಿಟ್ಟಿನ ಕಾಯ್ದೆ ಜಾರಿಗೊಳಿಸುತ್ತಿದೆ ಎಂಬ ಭಯ ಆವರಿಸಿದೆ. ಇದರ ವಿರುದ್ಧ ಒಕ್ಕೂಟ ಹೋರಾಟಕ್ಕೆ ಸಜ್ಜಾಗುತ್ತಿದೆ. ಎಲ್ಲ ಸೌಹಾರ್ದ ಸಹಕಾರಿಗಳು ಇದಕ್ಕೆ ಕೈ ಜೋಡಿಸಬೇಕು’ ಎಂದರು.

ಸಿಬಿಎಸ್ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಹಾಗೂ ಸಹಕಾರ ಭಾರತಿ ಪ್ರಮುಖ ಸಿ.ಜಿ.ಜವಳಿ ಮಾತನಾಡಿ,‘ಸಹಕಾರಿ ಸೌಹಾರ್ದಗಳು ಬಲಿಷ್ಠವಾಗಲು ಮುಖ್ಯ ಕಾರ್ಯನಿರ್ವಾಹಕರು ಪ್ರಮುಖ ಕಾರಣಿಕರ್ತರಾಗಿದ್ದಾರೆ. ಸಂಸ್ಥೆಯ ಎಲ್ಲಾ ಜವಾಬ್ದಾರಿ ನಮ್ಮ ಮೇಲಿರುತ್ತದೆ. ಆಡಳಿತ ಮಂಡಳಿ ನಿರ್ದೇಶನ ಮತ್ತು ಸರ್ಕಾರದ ಕಾಯ್ದೆಗಳನ್ವಯ ನಾವು ಕೆಲಸ ಮಾಡಬೇಕು. ಸಿಬ್ಬಂದಿಗಳ ವಿಶ್ವಾಸದೊಂದಿಗೆ ನಮ್ಮ ಕೆಲಸ ಸುಗಮಗೊಳಿಸಬೇಕು’ ಎಂದರು. ‌

ಗಂಗಾಧರೇಶ್ವರ ಬ್ಯಾಂಕ್‌ನ ವ್ಯವಸ್ಥಾಪಕ ಸುಧಾಕರ, ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ಸಹಾಯಕ ನಿರ್ದೇಶಕ ಸುನೀಲ್‍ಕುಮಾರ ಪತ್ತಾರ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಪ್ರಾಂತೀಯ ವ್ಯವಸ್ಥಾಪಕ ರಾಜಶೇಖರ.ಎಚ್, ಪವನಕುಮಾರ ಹಾಗೂ ಇತರರು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು