ಭಾನುವಾರ, ಆಗಸ್ಟ್ 14, 2022
20 °C
‘ಪ್ರಜಾವಾಣಿ ಫೋನ್ ಇನ್’: ಜನರ ಪ್ರಶ್ನೆಗೆ ಕೃಷಿ ಜಂಟಿ ನಿರ್ದೇಶಕ ಸದಾಶಿವ ಉತ್ತರ

‘ಹೆಚ್ಚು ಬೆಲೆಗೆ ಗೊಬ್ಬರ ಮಾರಿದರೆ ದೂರು ನೀಡಿ’-ಕೃಷಿ ಜಂಟಿ ನಿರ್ದೇಶಕ ಸದಾಶಿವ

ಪ್ರಮೋದ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕೃಷಿ ಚಟುವಟಿಕೆ, ಯೋಜನೆ, ಸಮಸ್ಯೆ ಮತ್ತು ಸವಾಲುಗಳಿಗೆ ಸಂಬಂಧಿಸಿದಂತೆ ಬುಧವಾರ ‘ಪ್ರಜಾವಾಣಿ’ ವತಿಯಿಂದ ಕೃಷಿ ಇಲಾಖೆ ಫೋನ್ ಇನ್ ಕಾರ್ಯಕ್ರಮದಲ್ಲಿ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ವಿ. ಅವರು ಓದುಗರು, ರೈತರು ಸೇರಿ ಹಲವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು. ವಿವಿಧ ಯೋಜನೆಗಳ ಬಗ್ಗೆ ವಿವರಿಸಿದ ಅವರು ಅವುಗಳನ್ನು ಪಡೆಯುವ ಬಗ್ಗೆ ಮಾಹಿತಿ ನೀಡಿದರು.

* ರಮೇಶಗೌಡ ಮಾಲಿಪಾಟೀಲ ಅಳವಂಡಿ, ಹನುಮೇಶ ಬಾಳಣ್ಣನವರ ನೆಲೋಗಿ, ಶರಣಪ್ಪ ಗಡ್ಡಿ ಕನಕಗಿರಿ, ನಿಂಗನಗೌಡ ಹಿರೇವಕ್ಕಲಗುಂಟ ಹಾಗೂ ಸುರೇಶ ಕುಕನೂರು, ನಾಗರಾಜ, ಹಿರೇಸಿಂಧೋಗಿ.

ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಇದ್ದರೂ ಚೀಲದ ಮೇಲೆ ನಮದಿಸಲಾದ ಬೆಲೆಗಿಂತ ಹೆಚ್ಚಿನ ದರ  ಕೇಳುತ್ತಾರೆ. ಸ್ಥಳೀಯ ಅಧಿಕಾರಿಗಳು ಹೇಳಿದರೂ ಹೆಚ್ಚು ಹಣ ಕೇಳುವುದನ್ನು ಬಿಡುತ್ತಿಲ್ಲ. ಏನು ಮಾಡಬೇಕು?

ಉತ್ತರ: ರೈತ ಸಂಪರ್ಕ ಕೇಂದ್ರದಲ್ಲಿ ಯೂರಿಯಾ ಗೊಬ್ಬರ ಕೊಡುವುದಿಲ್ಲ. ಫೆಡರೇಷನ್‌ ಮೂಲಕ ಖಾಸಗಿ ಅಂಗಡಿಗಳಲ್ಲಿ ತರಿಸಿಕೊಳ್ಳಲು ಅವಕಾಶವಿದೆ. ಜಿಲ್ಲೆಯಲ್ಲಿ 8,000 ಮೆಟ್ರಿಕ್‌ ಟನ್‌ ಯೂರಿಯಾ ಗೊಬ್ಬರ ದಾಸ್ತಾನು ಇದೆ. ಪ್ರತಿ ಚೀಲದ ಮೇಲೆ ₹266 ಇದ್ದು, ಇಷ್ಟೇ ಹಣ ಕೊಟ್ಟು ಖರೀದಿಸಬೇಕು. ಎಲ್ಲಿ ಎಷ್ಟು ಗೊಬ್ಬರವಿದೆ ಎನ್ನುವುದು ಆನ್‌ಲೈನ್‌ ಮೂಲಕ ಗೊತ್ತಾಗುತ್ತದೆ. ಹೆಚ್ಚು ಬೆಲೆಗೆ ಮಾರಿದರೆ, ಕೃಷಿ ಜಾಗೃತ ದಳದ ಅಧಿಕಾರಿಗಳಿಗೆ ದೂರು ಕೊಡಿ.

 * ಮಂಜುನಾಥ, ತಾವರಗೇರಾ‌: ಬಿತ್ತನೆ ಬೀಜ ಸಿಗುತ್ತಿಲ್ಲ. ಎಲ್ಲಿ ಪಡೆಯಬೇಕು?

ಉತ್ತರ: ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಗುತ್ತದೆ. ಮೆಕ್ಕೆಜೋಳ, ಸಜ್ಜೆ ದಾಸ್ತಾನು ಇದೆ. ಸೂರ್ಯಕಾಂತಿ ಈಗಾಗಲೇ ವಿತರಣೆಯಾಗಿದೆ. ಮಳೆ ಕಡಿಮೆಯಾಗಿರುವ ಕಾರಣ ಈಗಿನ ಸಮಯಕ್ಕೆ ಸಿರಿಧಾನ್ಯ ಉತ್ತಮ. 

 * ಶರಣಪ್ಪ, ಅಳವಂಡಿ: ಜಿಲ್ಲೆಯಲ್ಲಿ ರೈತ ಉತ್ಪಾದಕರ ಸಂಘಗಳು (ಎಫ್‌ಪಿಒ) ಎಷ್ಟಿವೆ? ಇವುಗಳ ಪ್ರಚಾರಕ್ಕೆ ಏನು ಕ್ರಮ ಕೈಗೊಳ್ಳಲಾಗಿದೆ. ಎಫ್‌ಪಿಒಗೆ ಸರ್ಕಾರದಿಂದ ಸಿಗುವ ಸೌಲಭ್ಯ ಏನು? 

ಉತ್ತರ: ಅಮೃತ ಮತ್ತು ನಬಾರ್ಡ್‌ ಈ ಎರಡು ಯೋಜನೆಗಳ ಮೂಲಕ ಎಫ್‌ಪಿಒ ಆರಂಭಿಸಲು ಅವಕಾಶವಿದೆ. ಜಿಲ್ಲೆಯಲ್ಲಿ ಬೇರೆ ಇಲಾಖೆಗಳ ಸಹಯೋಗದಲ್ಲಿ 10 ಮತ್ತು ನಬಾರ್ಡ್‌ ಸಹಭಾಗಿತ್ವದಲ್ಲಿ 2 ಎಫ್‌ಪಿಒಗಳು ಇವೆ. ಸಂಘದ ಚಟುವಟಿಕೆ, ನಿರ್ವಹಣೆ, ಪ್ರವಾಸ, ತರಬೇತಿಗೆ ಮೂರು ವರ್ಷಗಳ ಅವಧಿಯಲ್ಲಿ ₹30 ಲಕ್ಷದ ತನಕ ಸರ್ಕಾರದಿಂದ ಕೊಡಲು ಅವಕಾಶವಿದೆ.

* ಕೋಟೆಶ್‌, ಬೆಟಗೇರಿ: ರೈತರು ಟ್ರಾಕ್ಟರ್ ಮೂಲಕ ಉಳಿಮೆ ಮಾಡಿದರೆ ಡೀಸೆಲ್ ಹಣ ಸರ್ಕಾರ ಕೊಡುವುದೇ?

ಉತ್ತರ: ಸರ್ಕಾರದ ರೈತ ಶಕ್ತಿ ಯೋಜನೆ ಮೂಲಕ 5 ಎಕರೆವರೆಗೂ ಡೀಸೆಲ್‌ಗೆ ಸಹಾಯಧನ ನೀಡಬಹುದು. ಒಂದು ಎಕರೆಗೆ ₹250ರಂತೆ ಗರಿಷ್ಠ ₹1500 ಕೊಡಲು ಅವಕಾಶವಿದೆ. ಜಿಲ್ಲೆಯಲ್ಲಿ 1.5 ಲಕ್ಷ ಜನ ಇದಕ್ಕಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಎಫ್‌ಐಡಿ ನೋಂದಣಿ ಮಾಡಿಸಿಕೊಳ್ಳಬೇಕು.

 * ಕಂಟ್ಯಪ್ಪ, ಕನಕಗಿರಿ: ಹತ್ತಿ ಬೆಳೆದಿದ್ದು ಕರಿ ಜಿಗಿ ಜಾಸ್ತಿಯಾಗಿದೆ. ಏನು ಮಾಡಬೇಕು?

ಉತ್ತರ: ನಮ್ಮ ಕೃಷಿ ಅಧಿಕಾರಿ ನಿಮ್ಮ ಹೊಲಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸುತ್ತಾರೆ. ಇದಕ್ಕೆ ಔಷಧ ಸಿಂಪಡಿಸುವ ಮೂಲಕ ಸುಲಭವಾಗಿ ಪರಿಹರಿಸಿಕೊಳ್ಳಬಹುದು.

 * ವಿಶ್ವನಾಥ, ಹನುಮಸಾಗರ: 2021ರಲ್ಲಿ ಬೆಳೆ ವಿಮೆ ಮಾಡಿದವರಿಗೆ ಹಣ ಬಂದಿದೆ ಎಂದು ಬಹಳಷ್ಟು ಜನ ಹೇಳುತ್ತಿದ್ದಾರೆ. ಇದು ನಿಜವೇ?

ಉತ್ತರ: ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 33,351 ರೈತರಿಗೆ ₹29 ಕೋಟಿ ಬಂದಿದೆ. ಉಳಿದ ಹಣ ಈ ವಾರದಲ್ಲಿ ಬರುವ ನಿರೀಕ್ಷೆಯಿದೆ. ಯಾರಿಗೆ ಬಂದಿಲ್ಲವೊ ಅವರು ನೇರವಾಗಿ ನಮ್ಮ ಅಧಿಕಾರಿಯನ್ನು ಸಂಪರ್ಕಿಸಿದರೆ ಆನ್‌ಲೈನ್‌ ಮೂಲಕ ಸ್ಥಿತಿಗತಿ ತಿಳಿಸಿಕೊಡುತ್ತಾರೆ.

 * ಶರಣಪ್ಪ ಜವಳಿ, ಬೆಣಕಲ್‌: ಕೃಷಿ ಇಲಾಖೆಯಿಂದ ಎರೆಹುಳು ತೊಟ್ಟಿ ಮಾಡಿದ್ದೇನೆ. ಕೆಲವರಿಗೆ ಹಣ ಬಂದಿದ್ದು, ಇನ್ನೂ ಕೆಲವರಿಗೆ ಬಂದಿಲ್ಲ. ಯಾಕೆ ಈ ವ್ಯತ್ಯಾಸ?

ಉತ್ತರ: ಕೇಂದ್ರ ಸರ್ಕಾರ ಮಾರ್ಚ್‌ನಲ್ಲಿ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರ ಪ್ರಕಾರ ಹೊಸ ತಂತ್ರಾಂಶದ ಮೂಲಕ ದಾಖಲೆಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಇದರಿಂದಾಗಿ ಕೆಲವರಿಗೆ ಇನ್ನು ಹಣ ತಲುಪಿಲ್ಲ. ಜಿಲ್ಲೆಯಲ್ಲಿ 4,500 ಎರೆಹುಳು ತೊಟ್ಟಿಗಳನ್ನು ರೈತರ ಮೂಲಕ ಕಟ್ಟಿಸಿದ್ದೇವೆ. ₹3.5 ಕೋಟಿ ಈಗಾಗಲೇ ಪಾವತಿಯಾಗಿದ್ದು, ₹4.5 ಕೋಟಿ ಪಾವತಿಯಾಗಬೇಕಿದೆ. 

* ಮೈಲಾರಪ್ಪ, ತಳವಗೇರಿ: ಪಿ.ಎಂ. ಕಿಸಾನ್‌ ಹೊಸ ಕಾರ್ಡ್‌ ಮಾಡಿಸುವುದು ಹೇಗೆ?

ಉತ್ತರ: 2019ರ ಫೆಬ್ರುವರಿಗೂ ಮೊದಲು ಕಾರ್ಡ್‌ ಮಾಡಿಸಲು ಅವಕಾಶವಿತ್ತು. ಮಾಲೀಕರು ಮೃತಪಟ್ಟಿದ್ದರೆ. ಅದರ ದಾಖಲೆ ಈಗ ಅಪ್‌ಡೇಟ್‌ ಮಾಡಬಹುದು. ಸದ್ಯಕ್ಕೆ ಹೊಸ ಕಾರ್ಡ್‌ ಮಾಡಿಸಲು ಅವಕಾಶವಿಲ್ಲ.

 * ಯಮನೂರಪ್ಪ, ಹನುಮಸಾಗರ: ಮಳೆಗಾಲದ ಪೂರ್ವದಲ್ಲಿಯೇ ಬಿತ್ತನೆ ಬೀಜ ಕಳುಹಿಸಿದರೆ ಅನುಕೂಲವಲ್ಲವೇ?.

ಉತ್ತರ: ಪ್ರತಿ ವರ್ಷ ಜೂನ್‌ ಮೊದಲ ವಾರದಲ್ಲಿ ಬಿತ್ತನೆ ಬೀಜ ದಾಸ್ತಾನು ಮಾಡಲಾಗುತಿತ್ತು. ಈ ವರ್ಷ ಮಳೆಗಾಲ ಪೂರ್ವದಲ್ಲಿಯೇ ಬೀಜ ದಾಸ್ತಾನು ಮಾಡಲಾಗುತ್ತದೆ. 6,500 ಕ್ವಿಂಟಲ್‌ ಬಿತ್ತನೆ ಬೀಜ ವಿತರಣೆಯಾಗಿದೆ.

 * ಮುತ್ತಣ್ಣ ಭಜಂತ್ರಿ, ಬೆಣಕಲ್‌, ಕುಕನೂರು: ಪಿಎಂ ಕಿಸಾನ್‌ 7 ಕಂತು ಮಾತ್ರ ಹಣ ಜಮೆಯಾಗಿದೆ. ಉಳಿದ ಕಂತಿನ ಹಣ ಬಂದಿಲ್ಲ.

ಉತ್ತರ: ಉಳಿದ ಕಂತುಗಳ ಹಣ ಪಡೆಯಲು ದಾಖಲೆಗಳ ಪುನರ್‌ ಪರಿಶೀಲನೆ ಆಗಬೇಕು. ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ.

 * ಸಂಜೀವ ರೆಡ್ಡಿ ಅಳವಂಡಿ: ಬೆಳೆ ಸಮೀಕ್ಷೆ ತಪ್ಪಾಗಿ ಬರುತ್ತಿದೆ?

ಉತ್ತರ: ನಿಮ್ಮ ಬೆಳೆ ಸಮೀಕ್ಷೆಯನ್ನು ನೀವೇ ನೇರವಾಗಿ ಮಾಡಬಹುದು. ಮಾಹಿತಿಯನ್ನು ರೈತರೇ ನೇರವಾಗಿ ಆ್ಯಪ್‌ ಮೂಲಕ ಹಾಕಲು ಅವಕಾಶವಿದೆ. ನೀವೇ ನೀಡುವ ಮಾಹಿತಿ ತಪ್ಪಾಗುವುದಿಲ್ಲ.

 * ಗುರುರಾಜ, ಶ್ಯಾಡಲಗೇರಿ, ಗಜೇಂದ್ರಗಡ, ಚನ್ನಬಸವ ಕರಡಿ: ಕೃಷಿ ಇಲಾಖೆಯಿಂದ ಇರುವ ಯೋಜನೆಗಳ ಮಾಹಿತಿ ತಿಳಿಸಿ?

ಉತ್ತರ: ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದರೆ ಎಲ್ಲಾ ಮಾಹಿತಿ ಸಿಗುತ್ತದೆ. ಯಾರೇ ಕೃಷಿ ಆರಂಭಿಸುತ್ತಿದ್ದರೂ ಅವರು ರೈತ ಮಿತ್ರ ವೆಬ್‌ಸೈಟ್‌ ಮೂಲಕ ರೈತರಿಗೆ ಇರುವ ಸರ್ಕಾರದ ಯೋಜನೆಗಳನ್ನು ತಿಳಿದುಕೊಳ್ಳಬಹುದು.

ಫೋನ್ ಇನ್ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿಗಳಾದ ಪ್ರಕಾಶ ಚವಡಿ, ಮೊಹಮ್ಮದ್‌ ಹಸನ್‌ ಹಾಗೂ ಶ್ರೀದೇವಿ ಇದ್ದರು.

 

‘ಎಫ್‌ಪಿಒಗಳ ಮೂಲಕ ಬೆಳೆವಿಮೆ ನೀಡಿ’

ಎಫ್‌ಪಿಒಗಳ ಮೂಲಕ ರಸಗೊಬ್ಬರ ಪೂರೈಕೆ ಹಾಗೂ ಬೆಳೆವಿಮೆ ನೀಡಬೇಕು ಎಂದು ಕೋಟೆಕ್ಯಾಂಪ್‌ನ ಭತ್ತದ ನಾಡು ರೈತ ಉತ್ಪಾದಕ ಕಂಪನಿ ನಿರ್ವಹಣಾ ನಿರ್ದೇಶಕ ಸತ್ಯನಾರಾಯಣ ಕೇಳಿದರು.

ಈ ಪ್ರಶ್ನೆಗೆ ಉಪನಿರ್ದೇಶಕ ಸಹದೇವ ಪ್ರತಿಕ್ರಿಯಿಸಿ ‘ಉತ್ಪಾದಕರಿಗೆ ಹಾಗೂ ಡೀಲರ್‌ಗಳಿಗೆ ಶೀಘ್ರದಲ್ಲಿಯೇ ಸಭೆ ಕರೆಯಲಾಗುವುದು. ಎಫ್‌ಪಿಒಗಳಿಗೆ ರಸಗೊಬ್ಬರ ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಬೆಳೆ ವಿಮೆ ವಿಚಾರವನ್ನು ಕೇಂದ್ರ ಕಚೇರಿಗೆ ತಲುಪಿಸಲಾಗುವುದು‘ ಎಂದರು.

ಬೇರೆ ಇಲಾಖೆಯ ಪ್ರಶ್ನೆಗೂ ಸ್ಪಂದನೆ

ಹನುಮಸಾಗರ ಸಮೀಪದಲ್ಲಿ ವಾಸವಿದ್ದರೂ ನಾನಿರುವ ಊರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ವ್ಯಾಪ್ತಿಗೆ ಬರುತ್ತದೆ. ಹಸು, ಕುರಿ ಹಾಗೂ ಆಡಿ ಸಾಕಾಣಿಕೆ ಮಾಡುತ್ತಿದ್ದೇನೆ. ಸರ್ಕಾರದ ವತಿಯಿಂದ ಶೆಡ್‌ ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ. ದಯವಿಟ್ಟು ದಾರಿ ತೋರಿಸಿ ಎಂದು ಪ್ರಕಾಶ ಎನ್ನುವವರು ಕರೆ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸದಾಶಿವ ಅವರು ’ಕೊಪ್ಪಳ ಜಿಲ್ಲಾ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕರಿಗೆ ನಿಮ್ಮ ಸಮಸ್ಯೆಯನ್ನು ಗಮನಕ್ಕೆ ತರಲಾಗುವುದು. ಅವರು ನಿಮಗೆ ಸಹಾಯ ಮಾಡುತ್ತಾರೆ‘ ಎಂದರು.

 

ಕೃಷಿ ಸಂಬಂಧಿತ ಮಾಹಿತಿಗಾಗಿ

ಕೃಷಿ ಜಂಟಿ ನಿರ್ದೇಶಕ ಸದಾಶಿವ ವಿ.8277932100

ಉಪ ಕೃಷಿ ನಿರ್ದೇಶಕರು ಸಹದೇವ: 9449966331

ಕೃಷಿ ಜಾಗೃತ ದಳದ ಅಧಿಕಾರಿ ಕುಮಾರಸ್ವಾಮಿ 9845810363, ನಿಂಗಪ್ಪ: 8277932117

ಅರುಣ್ ರಶೀದ್‌, ಕೃಷಿ ವಿಷಯ ತಜ್ಞರು: 8277932160

ಸಹಾಯಕ ಕೃಷಿ ನಿರ್ದೇಶಕರು

ಅಜ್ಮೀರ್‌ ಅಲಿ ಕೊಪ್ಪಳ 8277932116

ಸಂತೋಷ ಪಟ್ಟದಕಲ್ಲು ಗಂಗಾವತಿ 8618742613

ತಿಪ್ಪೇಸ್ವಾಮಿ ಆರ್‌. ಕುಷ್ಟಗಿ  8277932109

ಪ್ರಾಣೇಶ ಹಾದಿಮನಿ ಯಲಬುರ್ಗಾ 8722891908

* ನಾಗರಾಜ ಭೋವಿ, ಕುಷ್ಟಗಿ

ಕೃಷಿ ಹೊಂಡ ಮತ್ತು ಬದು ನಿರ್ಮಾಣಕ್ಕೆ ಯಂತ್ರ ಬಳಸಿ ಕಾಮಗಾರಿ ಮಾಡಲಾಗಿದೆ. ದೂರು ಕೊಟ್ಟರೂ ಕ್ರಮ ಏಕಿಲ್ಲ?

ಈ ಕುರಿತು ನೀವು ಸಲ್ಲಿಸಿದ ದೂರಿನ ಮೇರೆಗೆ ತನಿಖೆ ಮಾಡಲಾಗಿದೆ. ಇದಕ್ಕಾಗಿ ತಂಡ ರಚನೆ ಮಾಡಲಾಗಿತ್ತು. ಆ ತಂಡ ನೀಡಿದ ವರದಿಯನ್ನು ಕೇಂದ್ರ ಕಚೇರಿಗೆ ಕಳುಹಿಸಲಾಗಿದೆ. ನಮ್ಮ ಹಂತದಲ್ಲಿ ಏನು ಕ್ರಮ ಕೈಗೊಳ್ಳಬೇಕಿತ್ತು, ಅದನ್ನು ಮಾಡಿದ್ದೇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು