ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪೂರ್ಣ ಲಾಕ್‌ಡೌನ್‌: ಜಿಲ್ಲೆ ಸ್ತಬ್ಧ

ಕೋವಿಡ್ ಮಾರ್ಗಸೂಚಿ ಉಲ್ಲಂಘನೆ; ₹ 22,300 ದಂಡ ವಿಧಿಸಿದ ಪೊಲೀಸರು
Last Updated 19 ಮೇ 2021, 3:52 IST
ಅಕ್ಷರ ಗಾತ್ರ

ಕೊಪ್ಪಳ: ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಐದು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್‌ ಅನ್ನು ಜಿಲ್ಲಾಡಳಿತ ಘೋಷಣೆ ಮಾಡಿದ್ದು, ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿತು. ಜನ, ವಾಹನ ಸಂಚಾರವಿಲ್ಲದೇ ನಗರ ಬಿಕೋ ಎನ್ನುವಂತೆ ಆಗಿತ್ತು.

ಹಾಲು, ತರಕಾರಿ, ದಿನಸಿ ಮಾರಾಟಕ್ಕೆ ಬೆಳಿಗ್ಗೆ 6ರಿಂದ 9ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಔಷಧ ಅಂಗಡಿ, ಆಸ್ಪತ್ರೆ, ಅಗತ್ಯ ಆರೋಗ್ಯ ಸೌಲಭ್ಯಗಳಿಗೆ ಮಾತ್ರ ಜನ ಹೊರಬರುವಂತೆ ಮಾಡಿದ್ದು, ಸಂಪೂರ್ಣ ಯಶಸ್ವಿಗೊಂಡಿದೆ. ಪ್ರಮುಖ ರಸ್ತೆ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ ಬಿಗಿಪೊಲೀಸ್‌ ಬಂದೋಬಸ್ತ್ ಮತ್ತು ತಪಾಸಣೆ ಮಾಡಲಾಗುತ್ತಿತ್ತು. ಪೊಲೀಸರ ಭಯದಿಂದ ಅನಗತ್ಯವಾಗಿ ಸಂಚರಿಸುವವರ ಸಂಖ್ಯೆ ಶೇ 95ರಷ್ಟು ಕಡಿಮೆಯಾಗಿತ್ತು.

ಜಿಲ್ಲೆಯನ್ನು ಪ್ರವೇಶಿಸುವ ಅಂತರ್‌ ಜಿಲ್ಲೆಯ 12 ಗಡಿಭಾಗಗಳಲ್ಲಿ ಚೆಕ್‌ ಪೋಸ್ಟ್ ಆರಂಭಿಸಲಾಗಿದೆ. ಮದುವೆ, ಅಂತ್ಯಕ್ರಿಯೆಗೆ ಪರವಾನಗಿ ಇರುವವರನ್ನು ಮಾತ್ರ ತೆರಳಲು ಅನುಕೂಲ ಮಾಡಿಕೊಡಲಾಗಿತ್ತು. ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಪೊಲೀಸರು ಸ್ಥಳದಲ್ಲಿಯೇ ದಂಡ ವಿಧಿಸಿದರು.

ಮಂಗಳವಾರ ಸಂಚಾರ ನಿಯಮ ಉಲ್ಲಂಘಿಸಿದ 195 ಪ್ರಕರಣ ದಾಖಲಾಗಿದ್ದು, 239 ವಾಹನಗಳನ್ನು ಜಪ್ತು ಮಾಡಲಾಗಿದೆ. ಸವಾರರ ವಿರುದ್ಧ 6 ಗಂಭೀರ ಪ್ರಕರಣ ದಾಖಲಿಸಲಾಗಿದೆ. 69,800 ದಂಡ ವಿಧಿಸಲಾಗಿದೆ. ಸೋಂಕು ತಡೆ ಕಾಯ್ದೆಯಲ್ಲಿ 1 ಪ್ರಕರಣ ದಾಖಲಾಗಿದೆ. ಮಾಸ್ಕ್, ಪರಸ್ಪರ ಅಂತರ ಕಾಪಾಡಿಕೊಳ್ಳದ 223 ಪ್ರಕರಣ ದಾಖಲಾಗಿದ್ದು, 22, 300 ದಂಡ ವಿಧಿಸಲಾಗಿದೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್ ನೇತೃತ್ವದಲ್ಲಿ ಡಿವೈಎಸ್‌ಪಿ ಗೀತಾ ಬೇನಾಳ, ನಗರ ಮತ್ತು ಗ್ರಾಮೀಣ ಪೊಲೀಸ್‌ ಠಾಣೆಗಳ ಸಿಪಿಐ, ಪಿಎಸ್‌ಐಗಳ ನೇತೃತ್ವದಲ್ಲಿ ವಿವಿಧೆಡೆ ತೆರಳಿ ಪರಿಶೀಲನೆ ನಡೆಸಲಾಯಿತು. ಈಚೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್‌ ಸಭೆಯಲ್ಲಿ ಗಂಭೀರವಾಗಿ ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ.

ಔಷಧ ಅಂಗಡಿಗಳಲ್ಲಿ ನಿಯಮ ಉಲ್ಲಂಘನೆ

ಕುಷ್ಟಗಿತಾಲ್ಲೂಕಿನಲ್ಲಿ ಸಂಪೂರ್ಣ ಲಾಕ್‌ಡೌನ್‌ ಎರಡನೇ ದಿನವೂ ಯಶಸ್ವಿಯಾಗಿದ್ದು, ಜನರು ಮನೆಯಲ್ಲಿಯೇ ಉಳಿಯುವ ಮೂಲಕ ಅಧಿಕಾರಿಗಳಿಗೆ ಸಹಕರಿಸಿದರು.

ಔಷಧ ಅಂಗಡಿಗಳು ಮಾತ್ರ ತೆರೆದಿದ್ದು ಬಹಳಷ್ಟು ಜನರು ಔಷಧ ಖರೀದಿಗೆ ಧಾವಂತ ತೋರಿದರು. ಆದರೆ ಔಷಧ ಖರೀದಿಗೆ ಬರುವ ಜನರು ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದಕ್ಕೆ ಯಾವುದೇ ವ್ಯವಸ್ಥೆ ಇರಲಿಲ್ಲ. ಬಹುತೇಕ ಅಂಗಡಿಗಳಲ್ಲಿ ಜನರು ಮುಗಿ ಬಿದ್ದಿದ್ದು ಕಂಡುಬಂದಿತು.

ಈ ಮಧ್ಯೆ ಕೋವಿಡ್‌ ಸೋಂಕು ಸರಪಳಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ಪೊಲೀಸರು ಪಟ್ಟಣದ ವಿವಿಧ ವಾರ್ಡುಗಳಲ್ಲಿ ಪಥ ಸಂಚಲನ ನಡೆಸಿದರು. ನೇತೃತ್ವ ವಹಿಸಿದ್ದ ಸಬ್‌ ಇನ್‌ಸ್ಪೆಕ್ಟರ್ ತಿಮ್ಮಣ್ಣ ನಾಯಕ, ಜನರು ಮನೆಯಲ್ಲಿಯೇ ಇರಬೇಕು, ಕೋವಿಡ್‌ ಸುರಕ್ಷತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಮಾಸ್ಕ್‌ ಹಾಕುವುದನ್ನು ಮರೆಯಬಾರದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT