ಶನಿವಾರ, ನವೆಂಬರ್ 28, 2020
22 °C
ಮಾಲಾಶ್ರೀ ಸಂದೀಪ್‌ ಅಧ್ಯಕ್ಷೆ, ಸುಧಾ ಸೋಮನಾಥ ಉಪಾಧ್ಯಕ್ಷೆ

ಗಂಗಾವತಿ: ಕಾಂಗ್ರೆಸ್ ತೆಕ್ಕೆಗೆ ನಗರಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ಭಾರಿ ಕುತೂಹಲ ಕೆರಳಿಸಿದ್ದ ಇಲ್ಲಿನ ನಗರಸಭೆ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ ಜಾರಿದೆ. 31ನೇ ವಾರ್ಡ್‌ ಸದಸ್ಯೆ ಮಾಲಾಶ್ರೀ ಸಂದೀಪ್ ಅಧ್ಯಕ್ಷೆಯಾಗಿ ಹಾಗೂ ಕಾಂಗ್ರೆಸ್‌ ಬೆಂಬಲದೊಂದಿಗೆ ಸ್ಪರ್ಧಿಸಿದ್ದ ಬಿಜೆಪಿ ಸದಸ್ಯೆ (26‌ನೇ ವಾರ್ಡ್‌) ಸುಧಾ ಸೋಮನಾಥ ಉಪಾಧ್ಯಕ್ಷೆಯಾಗಿ ಸೋಮವಾರ ಆಯ್ಕೆಯಾದರು.

ನಗರಸಭೆಯ ಒಟ್ಟು 35 ಸ್ಥಾನಗಳಲ್ಲಿ ಕಾಂಗ್ರೆಸ್ 17, ಬಿಜೆಪಿ 14, ಜೆಡಿಎಸ್ 2, ಪಕ್ಷೇತರ ಇಬ್ಬರು ಸದಸ್ಯರು ಇದ್ದಾರೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದಿಲ್ಲ. ಕಾಂಗ್ರೆಸ್ ತನ್ನ 17 ಸದಸ್ಯರ ಜತೆ ಜೆಡಿಎಸ್‌ ಸದಸ್ಯ ಅಬ್ದುಲ್‌ ಜಬ್ಬಾರ್‌ ಹಾಗೂ ಸುಧಾ ಸೋಮನಾಥ ಬೆಂಬಲದಿಂದ ಅಧಿಕಾರದ ಚುಕ್ಕಾಣಿ ಹಿಡಿಯಿತು.

ಅಧ್ಯಕ್ಷ, ಉಪಾಧ್ಯಕ್ಷ ಎರಡು ಸ್ಥಾನ ಮಹಿಳೆಯರಿಗೆ ಮೀಸಲಾಗಿದ್ದವು. ಅಧ್ಯಕ್ಷ ಸ್ಥಾನ ಒಬಿಸಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿತ್ತು. ಕಳೆದ ಎರಡು ವರ್ಷಗಳಿಂದ ಚುನಾಯಿತ ಸದಸ್ಯರ ಆಡಳಿತ ಮಂಡಳಿಯಿಲ್ಲದೆ ಪೌರಾಯುಕ್ತರ ಅಧೀನದಲ್ಲಿ ನಗರಸಭೆ ಅಧಿಕಾರ ಇತ್ತು.

ಬಿಜೆಪಿ ಕನಸು ಭಗ್ನ: ಬಿಜೆಪಿಗೆ ಬಹುಮತವಿಲ್ಲದಿದ್ದರೂ ಕೊನೆಯ ಕ್ಷಣದಲ್ಲಿ ಪಕ್ಷೇತರ ಹಾಗೂ ಜೆಡಿಎಸ್‌, ಶಾಸಕ, ಸಂಸದರ ಬೆಂಬಲದೊಂದಿಗೆ ಅಧಿಕಾರ ಹಿಡಿಯಲು ಯೋಜನೆ ರೂಪಿಸಿತ್ತು. ಪಕ್ಷದ 14 ಸದಸ್ಯರ ಜೊತೆ ಒಬ್ಬ ಜೆಡಿಎಸ್‌, ಇಬ್ಬರು ಪಕ್ಷೇತರ ಸದಸ್ಯರ ಕೂಡಾ ಬೆಂಬಲ ನೀಡಿದ್ದರು. ಆದರೆ ಕೊನೆಯ ಕ್ಷಣದಲ್ಲಿ ತಮ್ಮ ಪಕ್ಷದ ಸದಸ್ಯೆ ವಿಪ್‌ ಉಲ್ಲಂಘಿಸಿ, ಕಾಂಗ್ರೆಸ್‌ ಪರ ಮತ ಚಲಾಯಿಸಿದ್ದು, ಹಾಗೂ ಪಕ್ಷೇತರ ಅಭ್ಯರ್ಥಿಯೊಬ್ಬರು ತಟಸ್ಥವಾಗಿದ್ದರಿಂದ ಬಹುಮತ ಬಾರದೇ ಅಧಿಕಾರ ಹಿಡಿಯುವ ಕನಸು ನನಸಾಗಲಿಲ್ಲ.

ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಜಯಶ್ರೀ ಸಿದ್ದಾಪುರ, ಉಪಾಧ್ಯಕ್ಷ ಸ್ಥಾನಕ್ಕೆ ಹೀರಾಬಾಯಿ ನಾಮಪತ್ರ ಸಲ್ಲಿಸಿದ್ದರು.

ಬಿಜೆಪಿ, ಜೆಡಿಎಸ್‌ ಸದಸ್ಯರ ಬೆಂಬಲ : ಕಾಂಗ್ರೆಸ್ಸಿನ 17 ಸದಸ್ಯರ ಜೊತೆ ಒಬ್ಬ ಜೆಡಿಎಸ್‌ ಸದಸ್ಯ ಹಾಗೂ ಬಿಜೆಪಿಯ ಸದಸ್ಯೆಯೊಬ್ಬರ ಮತ ಸೇರಿ 19 ಮತಗಳನ್ನು ಪಡೆದು ಮಾಲಾಶ್ರೀ ಸಂದೀಪ್ ಆಯ್ಕೆಯಾದರು. ಈ ಮುಂಚೆ ನಗರಸಭೆ ಸದಸ್ಯ ಹಾಗೂ ನಗರ ಘಟಕದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಾಮೀದ್‌ ಮನಿಯಾರ್ ಜೊತೆಗೆ ಬಂದ ಕಾಂಗ್ರೆಸ್ ಸದಸ್ಯರು ನಾಮಪತ್ರ ಸಲ್ಲಿಸಿ ತೆರಳಿದರು. ಕಾಂಗ್ರೆಸ್‌ನ ಹಿರಿಯ ಸದಸ್ಯರಾದ ಮನೋಹರಸ್ವಾಮಿ ಹಿರೇಮಠ, ಮೌಲಾಸಾಬ್‌, ಖಾಸೀಂಸಾಬ್‌ ಗದ್ವಾಲ್ ಇದ್ದರು. ಚುನಾವಣೆ ಅಧಿಕಾರಿಯಾಗಿ ಉಪ ವಿಭಾಗಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಕಾರ್ಯ ನಿರ್ವಹಿಸಿದರು. ನಾಮಪತ್ರಗಳನ್ನು ಪರಿಶೀಲಿಸಿ ಅಧ್ಯಕ್ಷರಾಗಿ ಕಾಂಗ್ರೆಸ್‌ ನ ಮಾಲಾಶ್ರಿ, ಉಪಾಧ್ಯಕ್ಷರಾಗಿ ಸುಧಾ ಸೋಮನಾಥ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು