ಮಂಗಳವಾರ, ಜೂನ್ 22, 2021
22 °C
ದಂಡ, ಕಾನೂನು ಕ್ರಮದ ಭಯಕ್ಕೆ ಜನ ಸಂಚಾರ ವಿರಳ: ಗಂಗಾವತಿ ತಾಲ್ಲೂಕಿನಲ್ಲಿ ಸೋಂಕು ಹೆಚ್ಚಳ

ನಿಯಮ ಉಲ್ಲಂಘನೆ: 174 ವಾಹನ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕೊರೊನಾ ಲಾಕ್‌ಡೌನ್‌ ಕಾರಣ ನಗರದಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಜನರ ಮೇಲೆ ಲಾಠಿ ಪ್ರಯೋಗವಾಗಲಿ, ಬೆದರಿಸುವುದಾಗಲಿ ಮಂಗಳವಾರ ಎಲ್ಲಿಯೂ ಕಂಡು ಬರಲಿಲ್ಲ.

ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ. ಜನರ ಮೇಲೆ ಅನವಶ್ಯಕವಾಗಿ ಹಲ್ಲೆ ಮಾಡಬಾರದು ಎಂಬ ಮೇಲಧಿಕಾರಿಗಳ ಸೂಚನೆ ಕಾರಣ ಪೊಲೀಸರು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಂಡು ಅನಗತ್ಯ ಸಂಚಾರ ಮಾಡುವವರ ವಿರುದ್ಧ ಮತ್ತು ಸೂಕ್ತ ದಾಖಲೆಗಳಿಲ್ಲದ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಕಾರಣ ಆಮ್ಲಜನಕ ಕೊರತೆ ಇಲ್ಲದಿದ್ದರೂ, ವೆಂಟಿಲೇಟರ್ ಸಮಸ್ಯೆ ಇದೆ. ಜಿಲ್ಲಾ ಸರ್ಕಾರಿ ಆಸ್ಪತ್ರೆ, ಖಾಸಗಿ ಆಸ್ಪತ್ರೆಗಳ ಶೇ 50ರಷ್ಟು ಹಾಸಿಗೆ ಸೇರಿದಂತೆ ವಿವಿಧ ತಾಲ್ಲೂಕು ಆಸ್ಪತ್ರೆಗಳಲ್ಲಿ 650 ಹಾಸಿಗೆಗಳು ಇವೆ. ಸೋಂಕಿತರ ಸಂಖ್ಯೆ 1 ಸಾವಿರ ದಾಟಿದ್ದು, ಮಂಗಳವಾರ ಗವಿಮಠದ ವೃದ್ಧಾಶ್ರಮದಲ್ಲಿ 100 ಹಾಸಿಗೆ ಸಾಮರ್ಥ್ಯದ ಆರೈಕೆ ಕೇಂದ್ರ ತೆರೆಯಲಾಗಿದೆ.

ಅವಶ್ಯಕ ಔಷಧಿ, ಚಿಕಿತ್ಸೆ ಮತ್ತು ಸರ್ಕಾರಿ ಕಚೇರಿಗೆ ತೆರಳುವವರನ್ನು ಬಿಟ್ಟರೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬ್ಯಾಂಕ್‌ ಸೇರಿದಂತೆ ಇತರ ಅಗತ್ಯ ಸೇವೆಗಳಿಗೆ ಎಡ ತಾಕುತ್ತಿದ್ದಾರೆ. ಲಾಕ್‌ಡೌನ್‌ ಕಾರಣ ಬೆಳಿಗ್ಗೆ 6 ರಿಂದ 9 ಗಂಟೆಯವರೆಗೆ ಮಾತ್ರ ದಿನಸಿ, ತರಕಾರಿ, ಹಾಲು ಖರೀದಿಗೆ ಅವಕಾಶ ನೀಡಲಾಗಿತ್ತು. ಎಂದಿನಂತೆ ರಸ್ತೆಗಳಲ್ಲಿ ಜನ ಸಂಚಾರ ಬಹುತೇಕ ಸ್ಥಬ್ಧವಾಗಿತ್ತು.

ಲಾಕ್‌ಡೌನ್‌ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಪ್ರಮುಖ ರಸ್ತೆಗಳಲ್ಲಿ ಬ್ಯಾರೇಕೇಡ್‌ ಹಾಕಿ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಆಂಬುಲೆನ್ಸ್ ಮತ್ತು ಖಾಸಗಿ ವಾಹನಗಳು ಬೆರಳಣಿಕೆ ಸಂಖ್ಯೆಯಲ್ಲಿ ಓಡಾಡುತ್ತಿದ್ದವು. 18 ವರ್ಷದ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆ ನೀಡಲಾಗುವುದು ಎಂದು ಹೇಳಲಾಗಿತ್ತು. ಆದರೆ ಲಾಕ್‌ಡೌನ್‌ ಕಾರಣ ಕೇಂದ್ರದತ್ತ ಜನರು ಹೆಚ್ಚಿನ ಪ್ರಮಾಣದಲ್ಲಿ ಬರಲಿಲ್ಲ.

ದಂಡ, ವಾಹನ ಜಪ್ತಿ: 9 ಅಂತರ ಗಡಿ ಜಿಲ್ಲೆಗಳಲ್ಲಿ 24X7 ಮಾದರಿಯಲ್ಲಿ ಕಾವಲು ಕಾಯುತ್ತಿದ್ದು, 12 ಚೆಕ್‌ಪೋಸ್ಟ್‌ಗಳನ್ನು ಆರಂಭಿಸಲಾಗಿದೆ. ಗ್ರಾಮೀಣ ಪ್ರದೇಶಗಳಿಂದ ಮತ್ತು ಅಂತರ ಜಿಲ್ಲೆಯಿಂದ ಬರುವವರನ್ನು ಕಡ್ಡಾಯವಾಗಿ ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ವಿನಾಕಾರಣ ಸಂಚಾರ ಮಾಡಿದಲ್ಲಿ ಮತ್ತು ಕೋವಿಡ್‌ ನಿಯಮಾವಳಿ ಉಲ್ಲಂಘಿಸಿದಲ್ಲಿ ಕಠಿಣ ಕಾನೂನು ಕ್ರಮ, ವಾಹನ ಜಪ್ತಿ ಮಾಡಿಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ್ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ನಿಯಮ ಉಲ್ಲಂಘಿಸಿ ರಸ್ತೆಗೆ ಇಳಿದ 174 ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. 260 ಪ್ರಕರಣ ದಾಖಲಿಸಿ, ₹88,700 ದಂಡ ವಿಧಿಸಲಾಗಿದೆ. ಕರ್ನಾಟಕ ಸೋಂಕು ಪ್ರಸರಣಾ ತಡೆ ಕಾಯ್ದೆ ಅಡಿಯಲ್ಲಿ 2 ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಮಾಸ್ಕ್‌ ಇಲ್ಲದೆ ಸಂಚಾರ, ಪರಸ್ಪರ ಅಂತರ ಕಾಪಾಡಿಕೊಳ್ಳದವರ ವಿರುದ್ಧ 357 ಪ್ರಕರಣ ದಾಖಲಿಸಲಾಗಿದೆ. ಇದಕ್ಕೆ ₹35, 700 ದಂಡ ವಿಧಿಸಲಾಗಿದೆ.

ಗಂಗಾವತಿ (ಕನಕಗಿರಿ-ಕಾರಟಗಿ ಸೇರಿ) ತಾಲ್ಲೂಕಿನಾದ್ಯಂತ ಕೊರೊನಾ ಸೋಂಕಿನ 112 ಪ್ರಕರಣಗಳು ಪತ್ತೆಯಾಗಿವೆ. ಕೊಪ್ಪಳ-45, ಕುಷ್ಟಗಿ-28, ಯಲಬುರ್ಗಾ 39 ಹೊಸ ಪ್ರಕರಣಗಳು ಪತ್ತೆಯಾಗಿವೆ.

ಲಸಿಕಾ ಕೇಂದ್ರ ಸ್ಥಳಾಂತರಕ್ಕೆ ಒತ್ತಾಯ

ಗಂಗಾವತಿ: ಇಲ್ಲಿನ ಅಂಬೇಡ್ಕರ್ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ಕೊರೊನಾ ಲಸಿಕಾ ಕೊಠಡಿ ಚಿಕ್ಕದಾಗಿದೆ. ಆದ್ದರಿಂದ ಅದನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ಅವರಿಗೆ ವಾರ್ಡ್‌ ನಿವಾಸಿಗಳು ಮಂಗಳವಾರ ಮನವಿ ಸಲ್ಲಿಸಿದರು.

ಕೇಂದ್ರದಲ್ಲಿ ಪ್ರತಿದಿನ ನೂರಾರು ಜನ ಲಸಿಕೆ ಪಡೆಯುತ್ತಾರೆ. ಬೇರೆ ಬೇರೆ ವಾರ್ಡ್‌ಗಳವರೂ ಬರುತ್ತಾರೆ. ಆದರೆ, ಇಲ್ಲಿರುವ ಕೊಠಡಿ ಚಿಕ್ಕದಾಗಿದೆ. ಅಂತರ ಕಾಯ್ದುಕೊಳ್ಳಲು ತೊಂದರೆಯಾಗುತ್ತಿದೆ. ಹಾಗಾಗಿ ಸ್ಥಳಾಂತರ ಮಾಡಬೇಕು ಎಂದು ವಾರ್ಡ್‌ ನಿವಾಸಿಗಳು ಮನವಿ ಮಾಡಿದರು. ಪೌರಾಯುಕ್ತರು ನಿವಾಸಿಗಳ ಮನವಿಗೆ ಸ್ಪಂದಿಸಿ,‘ಕೇಂದ್ರವನ್ನು ಅಂಬೇಡ್ಕರ್ ನಗರದ ಕಿರಿಯ ಪ್ರಾಥಮಿಕ ಶಾಲೆಗೆ ಸ್ಥಳಾಂತರ ಮಾಡಲಾಗುವುದು’ ಎಂದರು. ವಾರ್ಡ್‌ ನಿವಾಸಿಗಳಾದ ಬಸವರಾಜ್ ಮ್ಯಾಗಳಮನಿ, ಪ್ರಭು, ವೀರೇಶ, ಗಿರಿಜಾ, ಶಿವಗಂಗಾ, ಸುರೇಶ, ಸುನೀಲ್, ಖಾಸಿಂ, ಸರಸ್ವತಿ ಹಾಗೂ ಸೋಮನಾಥ ಕಂಪ್ಲಿ ಇದ್ದರು.

 ‘ಮಾಸ್ಕ್‌ ಎಲ್ಲೆಂದರಲ್ಲಿ ಎಸೆಯಬೇಡಿ’

ಗಂಗಾವತಿ: ‘ಸಾರ್ವಜನಿಕರು ಬಳಸಿದ ಮಾಸ್ಕ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಅವುಗಳನ್ನು ಪ್ಲಾಸ್ಟಿಕ್ ರಹಿತ ಚೀಲದಲ್ಲಿ ಹಾಕಿ ತಮ್ಮ ಮನೆಯಲ್ಲಿಯೇ ಪ್ರತ್ಯೇಕವಾಗಿ ಇಟ್ಟುಕೊಳ್ಳಬೇಕು. ನಗರಸಭೆಯ ಕಸ ಸಂಗ್ರಹಣೆ ವಾಹನಗಳಿಗೆ ನೀಡಬೇಕು’ ಎಂದು ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿ ಮನವಿ ಮಾಡಿದ್ದಾರೆ.

‘ಕೋವಿಡ್ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಬಳಸಿದ ಮಾಸ್ಕ್‌ಗಳಲ್ಲಿ ಸೋಂಕು ಹರಡುವ ವೈರಸ್‌ಗಳಿರುತ್ತವೆ’ ಎಂದರು.

ಹಾಗಾಗಿ ಬಳಸಿದ ಮಾಸ್ಕ್‌ಗಳನ್ನು ನಗರಸಭೆಯಿಂದ ಎಸ್‌ಡಬ್ಲ್ಯೂಎಂ ಘಟಕಕ್ಕೆ ಸಾಗಿಸುವ ಮೂಲಕ ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಲು ನಿಯಮಾನುಸಾರ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ಮನೆ ಬಾಗಿಲಿಗೆ ತರಕಾರಿ ತಲುಪಿಸಿದ ಸದಸ್ಯ

ಕುಷ್ಟಗಿ: ಪುರಸಭೆ ಸದಸ್ಯರು ಜನರ ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ತರಕಾರಿ ಕಿಟ್‌ಗಳನ್ನು ವಿತರಿಸಿದರು.

ಮಾರುಕಟ್ಟೆಯಲ್ಲಿ ಎಲ್ಲ ರೀತಿಯ ತರಕಾರಿಗಳನ್ನು ಖರೀದಿಸಿ ಮಂಗಳವಾರ ಪಟ್ಟಣದ 8-9ನೇ ವಾರ್ಡ್‌ಗಳಲ್ಲಿರುವ ಸುಮಾರು 300ಕ್ಕೂ ಅಧಿಕ ಮನೆಗಳಿಗೆ ಸದಸ್ಯ ಸಯ್ಯದ್‌ ಮೈನುದ್ದೀನ್‌ ಮುಲ್ಲಾ ಮತ್ತಿತರರು ಸ್ವತಃ ವಾಹನದ ಮೂಲಕ ತರಕಾರಿ ಕಿಟ್‌ ಹಂಚಿಕೆ ಮಾಡಿದರು.

ಈ ಕುರಿತು ವಿವರಿಸಿದ ಸದಸ್ಯ ಮೈನುದ್ದೀನ್‌ ಮುಲ್ಲಾ,‘ಲಾಕ್‌ಡೌನ್‌ ಇರುವುದರಿಂದ ಜನರು ಕಷ್ಟದಲ್ಲಿದ್ದಾರೆ. ಬೆಳಿಗ್ಗೆ ಹತ್ತು ಗಂಟೆ ನಂತರ ಯಾವ ವಸ್ತುಗಳೂ ಸಿಗುವುದಿಲ್ಲ. ಇಂಥ ಕಠಿಣ ಪರಿಸ್ಥಿತಿಯಲ್ಲಿ ಸ್ವಲ್ಪ ಮಟ್ಟಿಗಾದರೂ ಅವರಿಗೆ ನೆರವಾಗಬೇಕು ಎಂಬ ಕಾರಣಕ್ಕೆ ಎರಡೂ ವಾರ್ಡ್‌ಗಳಲ್ಲಿ ತರಕಾರಿ ಕಿಟ್‌ಗಳನ್ನು ವಿತರಿಸಲಾಗಿದೆ’ ಎಂದರು.

ಈ ವಾರ್ಡ್‌ಗಳ ಅದೇ ಮನೆಗಳಿಗೆ ಗುರುವಾರ ಅಗತ್ಯ ದಿನಸಿ ವಸ್ತುಗಳನ್ನೂ ವಿತರಿಸಲಾಗುತ್ತದೆ. ಇದಕ್ಕೆ ತಮ್ಮ ಸ್ವಂತ ಹಣ ಖರ್ಚು ಮಾಡುತ್ತಿರುವುದಾಗಿ ತಿಳಿಸಿದರು.

ಜನರಿಗೆ ನೆರವಾಗುವ ಈ ಕೆಲಸಕ್ಕೆ ಪುರಸಭೆ ಇಬ್ಬರು ಸಿಬ್ಬಂದಿಯನ್ನು ನೀಡಿದೆ. ಒಬ್ಬ ಅಂಗನವಾಡಿ ಕಾರ್ಯಕರ್ತೆಯ ಸಹಕಾರ ಪಡೆಯಲಾಗಿದೆ. ಅಲ್ಲದೆ ಔಷಧ ಸೇರಿದಂತೆ ಯಾವುದೇ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಅನಿವಾರ್ಯತೆ ಉಂಟಾದರೆ ತಮ್ಮ ಮೊಬೈಲ್‌ (99024 74302) ಸಂಖ್ಯೆಗೆ ಸಂಪರ್ಕಿಸುವಂತೆಯೂ ಮನೆಯವರಿಗೆ ತಿಳಿಸಿದ್ದು ತಂಡದ ಸದಸ್ಯರು ಮನೆಗೆ ನೇರವಾಗಿ ವಸ್ತುಗಳನ್ನು ತಲುಪಿಸುತ್ತಾರೆ. ಹಾಗಾಗಿ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿದೆ. ಒಂದಷ್ಟು ತೊಂದರೆಯಾದರೂ ಜೀವ ಉಳಿಸಿಕೊಳ್ಳುವುದು ಮುಖ್ಯವಾಗಿದ್ದು, ಮನೆಯಿಂದ ಅನಗತ್ಯವಾಗಿ ಹೊರಗೆ ಬರದಂತೆ ಜನರಿಗೆ ತಿಳಿಸುತ್ತಿದ್ದೇವೆ. ಕೋವಿಡ್‌ ಗಂಭೀರತೆ ಕುರಿತು ಜಾಗೃತಿ ಮೂಡಿಸುತ್ತಿರುವುದಾಗಿ ಮುಲ್ಲಾ ಹೇಳಿದರು. ತರಕಾರಿ ಕಿಟ್ ವಿತರಣೆಯಲ್ಲಿ ಪುರಸಭೆ ಇತರೆ ಸದಸ್ಯರಾದ ಅಂಬಣ್ಣ ಭಜಂತ್ರಿ, ಮಹೆಬೂಬ್ ಕಮ್ಮಾರ, ರಾಮಣ್ಣ ಬಿನ್ನಾಳ, ಪ್ರಮುಖರಾದ ಶೌಕತ್ ಕಾಯಿಗಡ್ಡಿ, ಮಂಜುನಾಥ ಕಟ್ಟಿಮನಿ ಹಾಗೂ ಉಸ್ಮಾನ್‌ಸಾಬ್‌ ಕಲಬುರ್ಗಿ ಇದ್ದರು.

ಆಮದಿಗೆ ಜಿಎಸ್‌ಟಿ: ಎಸ್‌ಎಫ್‌ಐ ಆಕ್ಷೇಪ

ಕನಕಗಿರಿ: ‘ಆಮ್ಲಜನಕ ಸಾಂದ್ರಕಗಳ ಆಮದಿಗೆ ಕೇಂದ್ರ ಸರ್ಕಾರ ಶೇ 12 ರಷ್ಟು ಜಿಎಸ್‌ಟಿ ವಿಧಿಸಿರುವುದು ಜನ ವಿರೋಧಿ ಧೋರಣೆ’ ಎಂದು ಎಸ್ಎಫ್ಐ ರಾಜ್ಯ ಘಟಕದ ಅಧ್ಯಕ್ಷ ಅಮರೇಶ ಕಡಗದ, ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಸುಭಾನ ಹುಲಿಹೈದರ ದೂರಿದ್ದಾರೆ.ದೇಶದಲ್ಲಿ ಕೊರೊನಾ ಸೋಂಕಿತರಿಗೆ ಸಮರ್ಪಕವಾಗಿ ಆಮ್ಲಜನಕ ಸಿಗುತ್ತಿಲ್ಲ. ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇಂಥ ಸಮಯದಲ್ಲಿ ಜಿಎಸ್‌ಟಿ ವಿಧಿಸಿರುವುದು ಯಾವ ನ್ಯಾಯ ಎಂದು ಅವರು ಪ್ರಶ್ನಿಸಿದರು.ಕೋವಿಡ್ ಸಮಯದಲ್ಲಿ ಜನರ ರಕ್ಷಣೆ ಮಾಡಬೇಕಾದ ಕೇಂದ್ರ ಸರ್ಕಾರ ಜನ ಹಿತ ಹಾಗೂ ಮಾನವೀಯತೆ ಮರೆತಿದೆ ಎಂದು ಅವರು ಆರೋಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.