ಮಂಗಳವಾರ, ಸೆಪ್ಟೆಂಬರ್ 21, 2021
27 °C
ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿಕೆ

ಆರೋಗ್ಯ ಕೇಂದ್ರಗಳ ಅಭಿವೃದ್ಧಿಗೆ ಆದ್ಯತೆ‌; ಹಾಲಪ್ಪ ಆಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ‘ಜಿಲ್ಲೆಯಲ್ಲಿ ಕೋವಿಡ್‌ 3ನೇ ಅಲೆ ಎದುರಿಸಲು ಜಿಲ್ಲಾಡಳಿತ ಆಮ್ಲಜನಕ ಕೊರತೆ ಆಗದಂತೆ ಜಾಗೃತಿ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿದರು.

ನಗರದ ಉಪವಿಭಾಗ ಆಸ್ಪತ್ರೆಯಲ್ಲಿ ಶನಿವಾರ ನಡೆದ ಕೋವಿಡ್ 3ನೇ ಅಲೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಂಗಾವತಿ ಉಪವಿಭಾಗ ಆಸ್ಪತ್ರೆ ಎಲ್ಲ ರೀತಿಯಲ್ಲಿ ಸುಸಜ್ಜಿತವಾಗಿದೆ. ತಾಲ್ಲೂಕಿನ ಕೆಲ ಪ್ರಾಥಮಿಕ ಉಪಕೇಂದ್ರಗಳು ನೂನ್ಯತೆಗಳಿಂದ ಕೂಡಿವೆ. ಅವುಗಳನ್ನು ಅಭಿವೃದ್ಧಿ‌ ಪಡಿಸಬೇಕು. ಆಗ ಸಾರ್ವಜನಿಕರಿಗೆ ತುರ್ತು ವೇಳೆಯಲ್ಲಿ ಚಿಕಿತ್ಸೆ ದೊರೆಯುತ್ತದೆ ಎಂದರು.

ಕೋವಿಡ್ ಸಂಭಾವ್ಯ 3ನೇ ಅಲೆಯಲ್ಲಿ ಮಕ್ಕಳ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯಲ್ಲಿ 200 ಹಾಸಿಗೆಗಳ ಸೌಲಭ್ಯ ಕಲ್ಪಿಸಿದ್ದು, ವೈದ್ಯರು ಮಕ್ಕಳ ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಲು ಸೂಚಿಸಿದರು.

ನನಗೆ ಮಂತ್ರಿ ಪದವಿಯ ಹಂಗಿಲ್ಲ. ಮೊದಲು ಜನರ ಕಾಯಕ ಮುಖ್ಯ. ಪಕ್ಷದ ಹಿರಿಯರ ಇಚ್ಛೆಯಿಂದ ಮಂತ್ರಿ ಪದವಿ ದೊರೆತಿದ್ದು, ನೀಡಿದ ಖಾತೆಗಳಿಗೆ ಸಂಪೂರ್ಣ ನ್ಯಾಯ ಒದಗಿಸುತ್ತೇನೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಟಿ.ಲಿಂಗರಾಜು ಮಾತನಾಡಿ,‘ಕೋವಿಡ್ ಸಂಭಾವ್ಯ 3ನೇ ಅಲೆಗಾಗಿ ಜಿಲ್ಲಾಸ್ಪತ್ರೆಯಲ್ಲಿ ಯುವಕರು ಮತ್ತು ಹಿರಿಯರಿಗೆ ಸೇರಿ 300 ಹಾಸಿಗೆಗಳನ್ನು ಕಾಯ್ದಿರಿಸುವ ಮೂಲಕ ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ 100 ಕ್ಕೂ ಹೆಚ್ಚು ವೈದ್ಯರನ್ನು, ತಾಲ್ಲೂಕು ಆಸ್ಪತ್ರೆಗಳಿಗೆ ನಿಯೋಜಿಸಿದ್ದು, ಕೋವಿಡ್ ವೇಳೆಯಲ್ಲಿ ವೈದ್ಯರ ಕೊರತೆ ನೀಗಲಿದೆ’ ಎಂದು ಹೇಳಿದರು.

₹15 ಕೋಟಿ ವೆಚ್ಚದಲ್ಲಿ ತಾಲ್ಲೂಕು ಉಪವಿಭಾಗ ಆಸ್ಪತ್ರೆಗೆ ಸಿಬ್ಬಂದಿ ವಸತಿ ನಿಲಯ, ರಕ್ತ ಭಂಡಾರ, ವೈದ್ಯಕೀಯ ಸಲಕರಣೆ ನೀಡಬೇಕು ಎಂದು ವೈದ್ಯಾಧಿಕಾರಿ ಡಾ.ಈಶ್ವರ್ ಸವಡಿ‌ ಶಾಸಕರ ಮೂಲಕ ಸಚಿವರಿಗೆ ಮನವಿ ಪತ್ರ ನೀಡಿದರು.

ತಾಲ್ಲೂಕಿಗೆ ಮೊದಲ ಬಾರಿ ಆಗಮಿಸಿದ ಸಚಿವರಿಗೆ ಕನ್ನಡ‌ಪರ ಸಂಘಟನೆ, ಬೀದಿ ಬದಿ ವ್ಯಾಪಾರಸ್ಥರ ಸಂಘ, ರೈತ ಸಂಘ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು.

ಸಂಸದ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿ, ಕನಕಗಿರಿ ಶಾಸಕ ಬಸವರಾಜ ದಢೇಸೂಗೂರು, ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಸಿಇಒ ಫೌಜೀಯಾ ತರುನ್ನಮ್, ಪೌರಾಯುಕ್ತ ಅರವಿಂದ ಜಮಖಂಡಿ, ಎಸ್ಪಿ ಟಿ. ಶ್ರೀಧರ್ ಹಾಗೂ ತಹಶೀಲ್ದಾರ್ ಯು.ನಾಗರಾಜ ಇದ್ದರು.

ಶಾಸಕರ ಮನೆಗೆ ಭೇಟಿ: ಶಾಸಕ ಪರಣ್ಣ ಮುನವಳ್ಳಿ ಅವರ ನಿವಾಸಕ್ಕೆ ಭೇಟಿ ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹಾಲಪ್ಪ ಆಚಾರ,‘ಗಂಗಾವತಿ ತಾಲ್ಲೂಕಿನಲ್ಲಿ ಜನರ ಬೇಡಿಕೆಗೆ ಅನುಗುಣವಾಗಿ ಕಲ್ಲು, ಮರಳು, ಜಲ್ಲಿ ಕಲ್ಲು ಪೂರೈಕೆ ಆಗುತ್ತಿಲ್ಲ. ಆದ್ದರಿಂದ ಮರಳು‌ ಮಾಫಿಯಾ ಹಾಗೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ’ ಎಂದರು.

ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕಾನೂನು ನೀತಿ, ನಿಬಂಧನೆಗಳ ಮೂಲಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಅಗತ್ಯಕ್ಕೆ ತಕ್ಕಂತೆ ಮೂಲ ವಸ್ತುಗಳು ಪೂರೈಕೆ ಆದರೆ ಯಾವ ಅಕ್ರಮಗಳೂ ನಡೆಯುವುದಿಲ್ಲ. ಈ ಕುರಿತು ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸಲಾಗುತ್ತದೆ ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ಆಮ್ಲಜನಕ ಕೊರತೆ ಆಗದಂತೆ, ಕೊಪ್ಪಳ, ಯಲಬುರ್ಗಾ,ಕುಷ್ಟಗಿ, ಗಂಗಾವತಿ, ಕನಕಗಿರಿ ತಾಲ್ಲೂಕಿನಲ್ಲಿ ಆಮ್ಲಜನಕ ಉತ್ಪಾದನ ಘಟಕಗಳ ಸ್ಥಾಪನೆಗೆ ಸಿದ್ದತೆ ನಡೆದಿದೆ. ಮಕ್ಕಳ ಚಿಕಿತ್ಸೆಗಾಗಿ ಆಸ್ಪತ್ರೆಗಳಲ್ಲಿ ವಿಶೇಷವಾಗಿ ಮಕ್ಕಳಿಗೂ ಮತ್ತು ಯುವಕರು ಬಳಕೆ ಆಗುವಂತೆ ವೆಂಟಿಲೇಟರ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.