ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಆರ್‌ಟಿಪಿಸಿಆರ್ ಲ್ಯಾಬ್‌ ಆರಂಭ

ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಚಾಲನೆ
Last Updated 5 ಜೂನ್ 2020, 14:15 IST
ಅಕ್ಷರ ಗಾತ್ರ

ಕೊಪ್ಪಳ: ಕೋವಿಡ್‌ ಸೋಂಕಿತರ ಆರೋಗ್ಯ ತಪಾಸಣೆ ಮಾಡಲು ಆರ್‌ಟಿಪಿಸಿಆರ್ ಲ್ಯಾಬ್‌ ತುಂಬಾ ಅನುಕೂಲವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ನಗರದ ಗಂಗಾವತಿ ರಸ್ತೆಯಲ್ಲಿನ ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಕಿಮ್ಸ್) ಯಲ್ಲಿ ಶುಕ್ರವಾರ ವೈರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಯೋಗಾಲಯಕ್ಕೆ ಎಸ್.ಡಿ.ಆರ್.ಎಫ್ ನಿಧಿಯಲ್ಲಿ ಸಿವಿಲ್ ಕಾಮಗಾರಿಗೆ ₹ 23.70 ಲಕ್ಷ ಅನುದಾನ ಒದಗಿಸಲಾಗಿದೆ. ಅಲ್ಲದೆ ಪ್ರಯೋಗಾಲಯದ ಉಪಕರಣಗಳ ಖರೀದಿಗೆ ₹ 111.93 ಲಕ್ಷ ಹಣ ಬಿಡುಗಡೆ ಮಾಡಲಾಗಿದೆ. ಟ್ರೂನಾಟ್ ಉಪಕರಣದಲ್ಲಿ ಪ್ರತಿ ಶಿಫ್ಟ್‌ನಲ್ಲಿ 20 ರಿಂದ 25 ಜನ ಕಾರ್ಯ ನಿರ್ವಹಿಸಲಿದ್ದು, ಪ್ರತಿ ದಿನ 40 ರಿಂದ 50 ಪರೀಕ್ಷೆಗಳನ್ನು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಆರ್‌.ಟಿ.ಪಿ.ಸಿ.ಆರ್ ಉಪಕರಣದಲ್ಲಿ ಪ್ರತಿ ಶಿಫ್ಟ್‌ಗೆ 70 ರಿಂದ 75 ಜನ ಕಾರ್ಯ ನಿರ್ವಹಿಸಲಿದ್ದು, ಪ್ರತಿದಿನ 140-145 ಪರೀಕ್ಷೆಗಳನ್ನು ಮಾಡಲಾಗುವುದು. ಸ್ಕ್ರೀನಿಂಗ್ ಪರೀಕ್ಷೆ, ಆರ್‌.ಟಿ.ಪಿ.ಸಿ.ಆರ್ ಪರೀಕ್ಷೆಗಳನ್ನು ಪರಿಣತ ಸಂಶೋಧನಾ ವಿಜ್ಞಾನಿಗಳು, ಸಂಶೋಧನಾ ಸಹಾಯಕರು, ಪ್ರಯೋಗಶಾಲಾ ತಜ್ಞರು ಮಾಡುತ್ತಾರೆ ಎಂದರು.

‘ಆರಂಭದಲ್ಲಿ ಪ್ರಾಯೋಗಿಕವಾಗಿ 55 ಪರೀಕ್ಷೆಗಳನ್ನು ಮಾಡಿದ್ದು, ಎಲ್ಲಾ 55 ಪರೀಕ್ಷೆಗಳು ನೆಗೆಟಿವ್ ಬಂದಿವೆ. ಕೊರೊನಾ ಸೋಂಕು ಹೆಚ್ಚಾಗುತ್ತಿದ್ದರೂ ಯಾರೂ ಗಾಬರಿ ಪಡಬೇಕಾಗಿಲ್ಲ. ಏಕೆಂದರೆ ಇದರಿಂದ ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಮತ್ತು ವಯಸ್ಸಾದವರು ಮರಣ ಹೊಂದುತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಮರಣ ಪ್ರಮಾಣ ಬಹಳ ಕಡಿಮೆ ಇದೆ. ಕೆಲವೊಬ್ಬರಿಗೆ ಯಾವುದೇ ಕೊರೊನಾ ಲಕ್ಷಣಗಳು ಕಂಡುಬರದಿದ್ದರೂ ಅವರಿಗೆ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ಬಂದಿರುವುದು ಕಂಡು ಬಂದಿದೆ. ಅವರೆಲ್ಲ ಬಹುತೇಕ ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ‘ ಎಂದರು.

ಲಾಕ್‌ಡೌನ್‌ ವೇಳೆ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ ಸರ್ಕಾರ ₹ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೆಜ್ ಘೋಷಣೆ ಮಾಡಿದೆ. ರಾಜ್ಯ ಸರ್ಕಾರದಿಂದಲೂ ಕೂಡ ಸಂಕಷ್ಟದಲ್ಲಿರುವ ವರ್ಗಗಳಿಗೆ ಪರಿಹಾರ ನೀಡಲಾಗುತ್ತಿದೆ. ಮೆಕ್ಕೆಜೋಳ ಬೆಳೆ ಹಾನಿಗೆ ಸಂಬಂಧಿಸಿದಂತೆ ₹ 500 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಘೊಷಿಸಿದೆ. ರೈತರು ತಮ್ಮ ಬ್ಯಾಂಕ್ ಖಾತೆಗೆ ಚಾಲ್ತಿಯಲ್ಲಿರುವ ಆಧಾರ್ ಕಾರ್ಡ್ ಜೋಡಣೆ ಮಾಡಬೇಕು. ಕೆಲವೊಂದು ರೈತರು ಖಾತೆಯ ಸರಿಯಾದ ಮಾಹಿತಿ ನೀಡದ ಕಾರಣದಿಂದ ರೈತರ ಖಾತೆಗೆ ಹಾಕಿದ ಪರಿಹಾರದ ಹಣ ಬೇರೆ ಬೇರೆ ಖಾತೆಗೆ ಸಂದಾಯವಾಗಿರುವ ದೂರುಗಳು ಕೇಳಿಬಂದಿವೆ. ಕೂಡಲೇ ಇದನ್ನು ಸರಿಪಡಿಸಲಾಗುವುದು ಎಂದರು.

ಕೃಷಿ ಇಲಾಖೆಯಲ್ಲಿ ಅನುವುಗಾರರನ್ನು ಯಾವುದೇ ಕಾರಣಕ್ಕೂ ಕೆಲಸದಿಂದ ತೆಗೆಯುವುದಿಲ್ಲ. ಹೀಗಾಗಿ ಅವರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. 2015-16 ನೇ ಸಾಲಿನ ವಿಮೆಗಾಗಿ ಅಧಿಕಾರಿಗಳ ಸಭೆ ಕರೆದು, ಪರಿಪೂರ್ಣವಾಗಿ ಬಗೆಹರಿಸುವ ಬಗ್ಗೆ ಸೂಚನೆ ನೀಡಲಾಗಿದೆ ಎಂದರು.

ಸಂಸದ ಸಂಗಣ್ಣ ಕರಡಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿಶ್ವನಾಥ ರೆಡ್ಡಿ, ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ, ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಜಿ.ಸಂಗೀತಾ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನಾ ಶೇಖ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಲಿಂಗರಾಜ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಬಿ.ದಾನರೆಡ್ಡಿ, ಕಿಮ್ಸ್ ನಿರ್ದೇಶಕ ಡಾ. ವಿಜಯನಾಥ ಇಟಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT