ಮಂಗಳವಾರ, ಸೆಪ್ಟೆಂಬರ್ 28, 2021
23 °C
ಮಕ್ಕಳ ಪಾಲನಾ ಸಂಸ್ಥೆಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಭೇಟಿ: ಪರಿಶೀಲನೆ

ದಮನಿತರ ಶಿಕ್ಷಣಕ್ಕೆ ಪ್ರೋತ್ಸಾಹ: ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಡಿ ಕಳೆದ 10 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಚಿಕ್ಕಬೀಡನಾಳದ ಬಾಂಧವಿ, ವಿಸ್ತಾರ ಸಂಸ್ಥೆಗೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್  ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ವಿಸ್ತಾರ ಟ್ರಸ್ಟ್‌ನ ವಿವಿಧ ಕಾರ್ಯಚಟುವಟಿಕೆಗಳಡಿಯಲ್ಲಿ ಬಾಂಧವಿ ಮಕ್ಕಳ ಪಾಲನಾ ಸಂಸ್ಥೆ 12 ರಿಂದ 18 ವಯೋಮಾನದ ಸಂಕಷ್ಟದಲ್ಲಿರುವ ಕುಟುಂಬದ ಹೆಣ್ಣು ಮಕ್ಕಳ (ದೇವದಾಸಿ, ಪಜಾ, ಆರ್ಥಿಕ ಸಂಕಷ್ಟದಲ್ಲಿರುವ ಮಕ್ಕಳ) ಪುರ್ನವಸತಿಗಾಗಿ ಕಾರ್ಯನಿರ್ವಹಿಸುತ್ತಿದೆ. ಶಿಕ್ಷಣ ಇಲಾಖೆಯ ಮಾನ್ಯತೆ ಪಡೆದು 1 ರಿಂದ 5ನೇ ತರಗತಿಯವರೆಗೆ ಸಮಗ್ರ ಶಿಕ್ಷಣ ಶಾಲೆ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತೆ ಪಡೆದು ವಿಸ್ತಾರ ರಂಗ ಶಾಲೆ ಎಂಬ ಕಾರ್ಯಕ್ರಮವನ್ನು ಉತ್ತಮವಾಗಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.

ಸಂಸ್ಥೆಯ ಸಂಯೋಜಕಿ ಆಶಾ ಮಾತನಾಡಿ, ವಿಸ್ತಾರ್ ಸಂಸ್ಥೆಯು ಕಳೆದ 32 ವರ್ಷಗಳಿಂದ ಮಹಿಳೆಯರ, ಮಕ್ಕಳ ಮತ್ತು ಸಮಾಜದ ಅಂಚಿನಲ್ಲಿರುವ ಸಮುದಾಯದ ಹಕ್ಕುಗಳ ಪುನರ್ ಸ್ಥಾಪನೆಗಾಗಿ ನಿರಂತರ ಕೆಲಸಕಾರ್ಯಗಳನ್ನು ಮಾಡುತ್ತಾ ಬಂದಿದೆ. 2005 ರಲ್ಲಿ ದೇವದಾಸಿ ಮಹಿಳೆಯರ ಹೆಣ್ಣುಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ ಬಾಂಧವಿ ಎಂಬ ಮಕ್ಕಳ ಪಾಲನಾ ಕೇಂದ್ರವನ್ನು ನಡೆಸುತ್ತಾ ಬಂದಿದೆ. ಇಲ್ಲಿ ಸಂಕಷ್ಟದಲ್ಲಿರುವ ಹೆಣ್ಣು ಮಕ್ಕಳಿಗೆ ಶೈಕ್ಷಣಿಕ ವಿಷಯಗಳ ಜೊತೆಗೆ, ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇದು ಹೆಣ್ಣುಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ 100 ಮಂದಿ ಹೆಣ್ಣುಮಕ್ಕಳು ಉಚಿತ ಶಿಕ್ಷಣ, ಕೌಶಲ ಅಭಿವೃದ್ಧಿ, ನಾಯಕತ್ವ ಬೆಳವಣಿಗೆ, ವ್ಯಕ್ತಿವಿಕಸನ ಬೆಳವಣಿಗೆ ಹಲವಾರು ಪಠ್ಯೇತರ ಚಟುವಟಿಕೆ ಹಮಿಕೊಳ್ಳಲಾಗಿದೆ. ಹಾಗೂ ಕಲೆ, ಸಾಹಿತ್ಯ, ರಂಗಭೂಮಿ ಮತ್ತು ಪರಿಸರ ಸಂರಕ್ಷಣೆ ಕುರಿತು ಮಕ್ಕಳು ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶಗಳಿದ್ದು, ಕಳೆದ 15 ವರ್ಷಗಳಲ್ಲಿ ಸುಮಾರು 131 ಹೆಣ್ಣು ಮಕ್ಕಳು 10ನೇ ತರಗತಿಯನ್ನು ಮುಗಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಪ್ರಯತ್ನದಲ್ಲಿ ಬಹಳ ಮಟ್ಟಿಗೆ ಯಶಸ್ವಿಯಾಗಿದ್ದಾರೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 21 ಮಂದಿ ಮಕ್ಕಳು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ. ಇದರ ಜೊತೆಗೆ ವಿಸ್ತಾರ್ ಸಂಸ್ಥೆಯು ಯಲಬುರ್ಗಾ ಮತ್ತು ಕುಕನೂರು ತಾಲ್ಲೂಕಿನ ಸುಮಾರು 35 ಹಳ್ಳಿಗಳಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ಸಮುದಾಯದ ಸಹಭಾಗಿತ್ವದಲ್ಲಿ ಮಕ್ಕಳ ಕ್ಲಬ್‌ಗಳನ್ನು ರಚಿಸಿ ಇದರ ಮೂಲಕ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ವಿಸ್ತಾರ್ ಸಂಸ್ಥೆಯು, ವಿಸ್ತಾರ್ ರಂಗಶಾಲೆ ಯಡಿಯಲ್ಲಿ ಕಲೆ ಮತ್ತು ರಂಗಭೂಮಿಯ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ವಿವರಿಸಿದರು.

ನಂತರ ಜಿಲ್ಲಾಧಿಕಾರಿಗಳು ಸರ್ಕಾರಿ ಬಾಲಕರ–ಬಾಲಕಿಯರ ಬಾಲಮಂದಿರಗಳ ಕಟ್ಟಡ ನಿರ್ಮಾಣಕ್ಕಾಗಿ ಗುರುತಿಸಲಾದ ಟಣಕನಕಲ್ ಬಳಿಯ ಸರ್ಕಾರಿ ನಿವೇಶನವನ್ನು ಪರಿಶೀಲಿಸಿ ಕೊಪ್ಪಳ ತಹಶೀಲ್ದಾರ್ ಅವರಿಗೆ ಈ ಕುರಿತು ಜಮೀನಿನ ನೀಲ ನಕ್ಷೆಯೊಂದಿಗೆ ಮಾಹಿತಿ ಸಲ್ಲಿಸುವಂತೆ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಅಕ್ಕಮಹಾದೇವಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರೋಹಿಣಿ ಕೊಟಗಾರ, ಅಂಗವಿಕಲರ ಕಲ್ಯಾಣಾಧಿಕಾರಿ ಶ್ರೀದೇವಿ, ಯೂನಿಸೆಫ್‌ನ ಹರೀಶ್ ಜೋಗಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.