ಮಂಗಳವಾರ, ಜನವರಿ 18, 2022
15 °C

ಕೊಪ್ಪಳ: ಅಪಾಯಕಾರಿ ಹಾದಿಯಲ್ಲಿ ಬೆಟ್ಟ ಏರುವ ಭಕ್ತರು

ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಹನುಮಮಾಲೆ ಮೂಲಕ ನಾಡಿನಾದ್ಯಂತ ಜನಪ್ರಿಯಗೊಂಡಿರುವ ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಪರ್ವತದ ಅಂಜನೇಯ ದರ್ಶನಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದು, ಭಕ್ತರ ಸುರಕ್ಷತೆಯ ಸಮಸ್ಯೆ ಎದುರಾಗಿದೆ.

ಅಂಜನಾದ್ರಿ ಏರಲು 524 ಮೆಟ್ಟಿಲುಗಳು ಇದ್ದು, ಹೋಗಿ, ಬರಲು ಒಂದೇ ಮಾರ್ಗ ಇರುವುದರಿಂದ ಅಪಾಯ ಸಂಭವಿಸುವ, ಕಾಲ್ತುಳಿತ ಉಂಟಾಗುವ ಭಯವಿದೆ. ಪ್ರತಿ ಶನಿವಾರ ಹನುಮಪ್ಪ ವಾರವಾಗಿರುವುದರಿಂದ 10 ಸಾವಿರಕ್ಕೂ ಅಧಿಕ ಭಕ್ತರು ದರ್ಶನಕ್ಕೆ ಬರುತ್ತಾರೆ. ಅಲ್ಲದೆ ಹುಣ್ಣಿಮೆ, ಅಮವಾಸ್ಯೆಯಂದು ಈ ಸಂಖ್ಯೆ ದುಪ್ಪಟ್ಟಾಗುತ್ತದೆ. 

ವಾರ್ಷಿಕ ಹನುಮಮಾಲಾ ವಿಸರ್ಜನೆ ಕಾರ್ಯಕ್ರಮದಲ್ಲಿ ನೇರವಾಗಿ 50 ಸಾವಿರ ಜನರು ಪಾಲ್ಗೊಳ್ಳುತ್ತಿರುವುದರಿಂದ ಬೆಟ್ಟದಲ್ಲಿ ನಿಂತುಕೊಳ್ಳಲು ಆಗದಷ್ಟು ಜನ ಸೇರುತ್ತಾರೆ. ಕಾಲ್ನಡಿಗೆ ಮೂಲಕ ಬರುವ ಭಕ್ತರು, ಮೆಟ್ಟಿಲುಗಳನ್ನು ಬಳಸದೇ ಸಿಕ್ಕ, ಸಿಕ್ಕ ಕಲ್ಲುಬಂಡೆಗಳನ್ನು ಏರುವುದು, ಬಂಡೆಯ ಮಧ್ಯೆ ಇರುವ ಮಾರ್ಗದಲ್ಲಿ ನಡೆಯುವುದು ಭಯ ಹುಟ್ಟಿಸುವಂತಿರುತ್ತದೆ.

ರಾಮಾಯಣ ಕಾಲದ ಕಿಷ್ಕಿಂಧೆ, ಹನುಮ ಜನಿಸಿದ ನಾಡು ಎಂದು ಉತ್ತರ ಭಾರತದಲ್ಲಿ ಪ್ರಸಿದ್ಧಿ ಪಡೆದ ಈ ಪುಣ್ಯಕ್ಷೇತ್ರಕ್ಕೆ ಲಕ್ಷಾಂತರ ಜನ ಭೇಟಿ ನೀಡುತ್ತಾರೆ. ಸಾವಿರಾರು ಸಂಖ್ಯೆಯ ವಿದೇಶಿಗರೂ ಇಲ್ಲಿನ ಸೌಂದರ್ಯ ಸವಿಯಲು ಬರುತ್ತಾರೆ.

ಮೆಟ್ಟಿಲು ಬಳಸದ ಕೆಲವು ಸಾಹಸ ಪ್ರವೃತ್ತಿಯ ಯುವಕರು ದುರ್ಗಮ ಮತ್ತು ಅಪಾಯಕಾರಿ ಬಂಡೆಗಳನ್ನು ಏರುತ್ತ ಹೋಗುತ್ತಾರೆ. ಬೆಟ್ಟದ ಕೆಳಗೆ ಭದ್ರತೆಗೆ ಪೊಲೀಸರು ಇದ್ದರೂ ಅವರ ಕಣ್ಣು ತಪ್ಪಿಸಿ ಬೆಟ್ಟ ಏರುತ್ತಾರೆ. ಜಾರುಬಂಡೆಗಳಿಂದ ಹೆಚ್ಚಿನ ಅಪಾಯ ಸಂಭವಿಸುವ ಸಾಧ್ಯತೆ ಇದೆ. ದರ್ಶನಕ್ಕೆ ಬರುವ ಭಕ್ತರು ಅಡ್ಡದಾರಿ ಹಿಡಿದು ಗುಡ್ಡ ಏರುವ ಸಾಹಸ ಮಾಡುತ್ತಿದ್ದಾರೆ. ಪ್ರತಿ ಶನಿವಾರ ಇಂತಹ ದುಸ್ಸಾಹಸ ಮಾಡುವುದು ಕಂಡು ಬರುತ್ತಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್‌ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಜಿಲ್ಲಾಡಳಿತ ನಿಗಾ ವಹಿಸಿ ವಿಶೇಷ ದಿನಗಳಂದು ಹೋಗುವ ಮತ್ತು ಬರುವ ಮಾರ್ಗಗಳನ್ನು ಗುರುತಿಸಿ ದರ್ಶನಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸ್ಥಳೀಯರು ಹೇಳುತ್ತಾರೆ.

ಅಂಜನಾದ್ರಿ ಸಮಗ್ರ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ಯಾನ್‌ ರೂಪಿಸುವುದಾಗಿ ಸರ್ಕಾರ ಹೇಳುತ್ತಿದೆ. ಬೆಟ್ಟದ ಕೆಳಗೆ ಪಾರ್ಕಿಂಗ್, ಶೌಚಾಲಯ ನಿರ್ಮಾಣ ಮಾಡಲಾಗಿದೆ. ಪ್ರವಾಸೋದ್ಯಮಕ್ಕೆ ಅನುಕೂಲಕರವಾದ ಅನೇಕ ಸಂಗತಿಗಳು ಇಲ್ಲಿ ಇದ್ದರೂ ಇದುವರೆಗೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ತೂಗುಸೇತುವೆ, ಗಾಜಿನ ಸೇತುವೆ, ರಾಕ್‌ ಕ್ಲೈಂಬಿಂಗ್ ಕಲ್ಪಿಸುವುದಾಗಿ ಹೇಳುತ್ತಾರೆ. ಯಾವುದಕ್ಕೂ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.