ಗುರುವಾರ , ಸೆಪ್ಟೆಂಬರ್ 24, 2020
27 °C
ಉದ್ಘಾಟನೆಗೆ ಸೀಮಿತವಾದ ಶಾಸಕರ ಅಧಿಕೃತ ಕಚೇರಿ, ಗೃಹ ಕಚೇರಿಗೆ ಜನರ ಅಲೆದಾಟ

ತೆರೆದಿಲ್ಲ ಕಚೇರಿ, ಬರಬೇಡವೋ ಅತಿಥಿ!

ನಾರಾಯಣರಾವ್‌ ಕುಲಕರ್ಣಿ Updated:

ಅಕ್ಷರ ಗಾತ್ರ : | |

Deccan Herald

 ಕುಷ್ಟಗಿ: ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿ ಬಳಿ ಇರುವ ಶಾಸಕರ ಅಧಿಕೃತ ಕಚೇರಿ ಒಮ್ಮೆಯೂ ಬಾಗಿಲು ತೆರೆದಿಲ್ಲ! ಜನರು ಏನೇ ಕೆಲಸ ಮಾಡಿಸಿಕೊಳ್ಳಬೇಕೆಂದರೂ ಶಾಸಕರ ಗೃಹಕಚೇರಿಗೇ ಹೋಗಬೇಕಾದ ಅನಿವಾರ್ಯ ಬಂದಿದೆ.

ಸಾರ್ವಜನಿಕರ ಕೆಲಸಗಳು ಬೇಗ ಆಗಬೇಕು, ಸಮಸ್ಯೆಗಳನ್ನು ಹೇಳಿಕೊಳ್ಳಲು ಒಂದು ಸ್ಥಳ ಬೇಕು ಎಂಬ ಕಾರಣಕ್ಕೆ ಶಾಸಕ ಅಮರೇಗೌಡ ಬಯ್ಯಾಪುರ ಅವರಿಗಾಗಿ ಅಧಿಕೃತ ಕಚೇರಿ ತೆರೆಯಲಾಗಿದೆ. ಇಲ್ಲಿ ಶಾಸಕರನ್ನು ನೇರವಾಗಿ ಭೇಟಿ ಮಾಡಬಹುದು ಎಂದು ಜನ ನಿರೀಕ್ಷಿಸಿದ್ದರು. ಆದರೆ, ಅದು ಇನ್ನೂ ಕೈಗೂಡಿಲ್ಲ.

ಪಟ್ಟಣದ ಪಶುಸಂಗೋಪನಾ ಇಲಾಖೆ ಆವರಣದ ಆಸ್ಪತ್ರೆಯ ಹಿಂದಿನ ಸುಸಜ್ಜಿತ ಕಟ್ಟಡದಲ್ಲಿ ಶಾಸಕರ ಕಚೇರಿಗೆ ಕೊಠಡಿಗಳನ್ನು ಮೀಸಲಿಡಲಾಗಿದೆ. ನೀರು, ವಿದ್ಯುತ್‌, ಪೀಠೋಪಕರಣ ಸೇರಿದಂತೆ ಎಲ್ಲ ಅಗತ್ಯ ಸೌಕರ್ಯಗಳನ್ನೂ ಒದಗಿಸಲಾಗಿದೆ. ಅಧಿಕಾರಿಗಳು, ಸಾರ್ವಜನಿಕರೊಂದಿಗೆ ಸಭೆ ನಡೆಸುವುದಕ್ಕೆ ಪ್ರತ್ಯೇಕ ಹವಾನಿಯಂತ್ರಿತ ಎರಡು ಕೊಠಡಿಗಳೂ ಇವೆ. ಎಲ್ಲವೂ ನಿಷ್ಪ್ರಯೋಜಕ ಎನ್ನುವಂತಾಗಿದೆ.

ಶಾಸಕರು ಕೈಗೆ ಸಿಗುತ್ತಿಲ್ಲ ಎಂಬ ಆಕ್ಷೇಪ ಹೆಚ್ಚಾದ ಕಾರಣ, ಸೆಪ್ಟೆಂಬರ್‌ 17ರಂದು ಶಾಸಕ ಅಮರೇಗೌಡ ಬಯ್ಯಾಪುರ ಅವರೇ ಈ ಕಚೇರಿಯಲ್ಲಿ ಪೂಜೆ ನೆರವೇರಿಸಿ, ಉದ್ಘಾಟನೆ ಶಾಸ್ತ್ರ ಮುಗಿಸಿದ್ದರು. ನಂತರ ಹೈದರಾಬಾದ್‌ ಕರ್ನಾಟಕ ವಿಮೋಚನಾ ದಿನದಂದು ರಾಷ್ಟ್ರಧ್ವಜಾರೋಹಣ ನೆರವೇರಿಸಿದ್ದರು. ಅಂದು ಮುಚ್ಚಿದ ಬಾಗಿಲು ಇಂದಿಗೂ ತೆರೆದಿಲ್ಲ. ಈ ವಿಷಯ ಗೊತ್ತಿಲ್ಲದ ಎಷ್ಟೋ ಮಂದಿ ಇಲ್ಲಿಗೆ ಬಂದು ನಿರಾಶರಾಗಿ ಮರಳಿದ್ದೂ ಇದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಬಯ್ಯಾಪುರ ಅವರು, ’ನನ್ನ ಗೃಹ ಕಚೇರಿ ಯಾವಾಗಲೂ ತೆರೆದಿರುತ್ತದೆ. ನಾನು ಕೇಂದ್ರ ಸ್ಥಳದಲ್ಲಿದ್ದಾಗ ಪ್ರತಿನಿತ್ಯ ಒಂದಲ್ಲ ಒಂದು ಹಳ್ಳಿಗೆ, ಶಾಲೆ, ಕಚೇರಿ, ಅಭಿವೃದ್ಧಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡುತ್ತಿರುತ್ತೇನೆ. ಬೆಳಿಗ್ಗೆ ಮನೆ ಬಿಟ್ಟರೆ ಪುನಃ ಸೇರುವುದು ರಾತ್ರಿಯೇ. ಎಲ್ಲಿಯೇ ಇದ್ದರೂ ಜನರ ಸಮಸ್ಯೆಗಳಿಗೆ ಸ್ಪಂದಿಸುವುದರಲ್ಲಿ ಎರಡು ಮಾತಿಲ್ಲ‘ ಎಂದರು.

*
ನನ್ನ ಗೃಹ ಕಚೇರಿ ಸದಾ ತೆರೆದಿರುತ್ತದೆ. ಜನ ಅಲ್ಲಿಗೇ ಬಂದು ಹೋಗುತ್ತಿದ್ದಾರೆ. ಅಧಿಕೃತ ಕಚೇರಿ ತೆರೆಯದ ಕಾರಣ ತೊಂದರೆಯಾಗಿದೆ ಎಂದು ಇಲ್ಲಿಯವರೆಗೂ ಒಬ್ಬರೂ ಹೇಳಿಲ್ಲ.
-ಅಮರೇಗೌಡ ಬಯ್ಯಾಪುರ, ಶಾಸಕ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.