ತಾವರಗೇರಾ: ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಗುತ್ತಿಗೆ ಆಧಾರಿತ ಸಿಬ್ಬಂದಿ ರೈತರ ಜತೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೆಲವು ರೈತರಿಗೆ ನೀಡಬೇಕಿದ್ದ ಸ್ಪಿಂಕ್ಲರ್ ಸೆಟ್‍ಗಳನ್ನು ಫಲಾನುಭವಿಗೆ ಕೊಡದೇ ಹೆಬ್ಬಟ್ಟು ಸಹಿ ಮೂಲಕ ಮತ್ತೊಬ್ಬರಿಗೆ ವಿತರಣೆ ಮಾಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಈ ಕುರಿತು ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಶನಿವಾರ ಅರ್ಹರಿಗೆ ಸಮರ್ಪಕ ಸಲಕರಣೆ ಸಿಗುತ್ತಿಲ್ಲ ಎಂದು ಆರೋಪಿಸಿ ರೈತರಾದ ಮುತ್ತಣ್ಣ ವಿಠಲಾಪೂರ, ಅಶೋಕ ಮತ್ತು ಓಬಳೆಪ್ಪ ಪ್ರತಿಭಟನೆ ನಡೆಸಿದರು.
ಸಮೀಪದ ವಿಠಲಾಪೂರ ಗ್ರಾಮದ ಮುತ್ತಣ್ಣ ಎಂಬ ರೈತ 2022ನೇ ಸಾಲಿನಲ್ಲಿ ತುಂತುರು ನೀರಾವರಿ ಕೃಷಿಗಾಗಿ ಸ್ಪಿಂಕ್ಲರ್ ಪಡೆಯಲು ಅರ್ಜಿ ಹಾಕಿ, ರಿಯಾಯಿತಿಯ ಹಣವನ್ನು ಸಹ ಪಾವತಿ ಮಾಡಿದ್ದಾರೆ. 2023 ಹಿಂಗಾರು ಅವಧಿ ಮುಗಿದರೂ ಸ್ಪಿಂಕ್ಲರ್ ಸೆಟ್ ಸಿಗದ ಕಾರಣ ಶನಿವಾರ ವಿಚಾರಣೆ ಮಾಡಿದಾಗ ಬೇರೆ ರೈತರಿಗೆ ನೀಡಿರುವುದು ಕಂಡು ಬಂದಿದೆ. ಇದೇ ರೀತಿ ಹೋಬಳಿ ವ್ಯಾಪ್ತಿಯ ಗ್ರಾಮಗಳ ರೈತರಿಗೆ ಹಲವು ಅನುಭವವಾಗಿದೆ ಎಂದು ಕನ್ನಾಳದ ಹೊಳೆಯಪ್ಪ, ವಿಠಲಾಪುರದ ನಿರುಪಾದಿ, ಬೀರಪ್ಪ ಆರೋಪಿಸಿದರು.
ರೈತ ಸಂಪರ್ಕ ಕೇಂದ್ರದಲ್ಲಿ ಅಧಿಕಾರಿಗಳು ಪರವಾಗಿ ಗುತ್ತಿಗೆ ಆಧಾರದ ಸಿಬ್ಬಂದಿ, ಕೃಷಿ ಸಲಕರಣೆಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಹೀಗೆ ಫಲಾನುಭವಿ ರೈತನಿಗೆ ನೀಡಬೇಕಿದ್ದ ಸ್ಪಿಂಕ್ಲರ್ ಸೆಟ್ ಬೇರೆಯವರಿಗೆ ವಿತರಣೆ ಮಾಡಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರೈತ ಕಳಕನಗೌಡ ಪಾಟೀಲ್ ಆಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಅಜ್ಮೀರ ಅಲಿ, ಘಟನೆ ಕುರಿತು ವಿವರಣೆ ಮತ್ತು ದಾಖಲಾತಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ತಾಲ್ಲೂಕು ತಾಂತ್ರಿಕ ಅಧಿಕಾರಿ ಭೇಟಿ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಪ್ರತಿಭಟನೆ ನಡೆಸಿದ ವಿಷಯ ತಿಳಿದ ತಾಲ್ಲೂಕು ಮಟ್ಟದ ತಾಂತ್ರಿಕ ಅಧಿಕಾರಿ ರಾಜಶೇಖರ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.
‘ಸ್ಥಳೀಯ ಕೃಷಿ ಅಧಿಕಾರಿ ಆಶಾ ರಾಠೋಡ ರಜೆ ಇದ್ದಾರೆ. ಹಾಗಾಗಿ ಸಮಸ್ಯೆಯಾಗಿದೆ. ರೈತರಿಗೆ ಸಮರ್ಪಕ ಕೃಷಿ ಸಲಕರಣೆ ವಿತರಣೆ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಸಹಾಯಕ ನಿರ್ದೇಶಕರು ಸೋಮವಾರ ಕೇಂದ್ರಕ್ಕೆ ಭೇಟಿ ನೀಡುವರು ಎಂದು ತಾಂತ್ರಿಕ ಅಧಿಕಾರಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.