ಶುಕ್ರವಾರ, ಆಗಸ್ಟ್ 12, 2022
27 °C
ದಲಿತ ಸಂಘರ್ಷ ಸಮಿತಿಯಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ

ಶೋಷಿತರ ಮೇಲೆ ದೌರ್ಜನ್ಯ: ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಪರಿಶಿಷ್ಟ ಜಾತಿಯವರ ಮೇಲೆ ದೌರ್ಜನ್ಯ ಮಾಡಿದವರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನದ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.

ಶೋಷಿತರ ಮೇಲೆ ದೌರ್ಜನ್ಯ ನಡೆಸುವವರಿಗೆ ಮರಣ ದಂಡನೆ ಯಂತಹ ಕಠಿಣ ಶಿಕ್ಷೆ ವಿಧಿಸಬೇಕು. ದೌರ್ಜನ್ಯಕ್ಕೆ ಜಿಲ್ಲೆಯ ಉನ್ನತ ಮಟ್ಟದ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಬೇಕು. ದೌರ್ಜನ್ಯಕ್ಕೆ ಒಳಗಾಗದ ಸಮುದಾಯದ ಜನರ ಕುಟುಂಬಕ್ಕೆ ಶೀಘ್ರ ಪರಿಹಾರ ಹಾಗೂ ಪುನರ್ ವಸತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ದಲಿತರ ಮೇಲಿನ ದೌರ್ಜನ್ಯ ನಿಗ್ರಹಕ್ಕೆ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿಯೂ ಪ್ರತ್ಯೇಕ ವಿಶೇಷ ನ್ಯಾಯಾಲಯ ರಚಿಸಿ, ತ್ವರಿತವಾಗಿ ಪ್ರಕರಣದ ವಿಚಾರಣೆ ಮುಗಿಸಲು ಸಂವಿಧಾನಾತ್ಮಕ ಕಾನೂನು ತಿದ್ದುಪಡಿಯಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಶೋಷಿತರ ಸಬಲೀಕರಣ ಮಾಡಲು ಪ್ರತಿ ಪರಿಶಿಷ್ಟ ಜಾತಿಯ ಕುಟುಂಬಕ್ಕೂ ಭೂಮಿ, ಉದ್ಯೋಗ ಹಾಗೂ ಶಿಕ್ಷಣ ನೀಡಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸಮುದಾಯದ ಜನರ ಮೇಲೆ ಬಹಿಷ್ಕಾರ ಹಾಕಿದ ಗ್ರಾಮಗಳಿಗೆ ಸರ್ಕಾರ ಮೂಲಸೌಕರ್ಯ ಹಾಗೂ ನೊಂದ ಕುಟುಂಬಗಳಿಗೆ ಸಾಲ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಸಿಂಧನೂರು ತಾಲ್ಲೂಕಿನ ತುರಿಹಾಳ ಪಿ.ಎಸ್.ಐ.ಯರ್ರೆಪ್ಪ ಅವರನ್ನು ಅಮಾನತ್ತು ಮಾಡಬೇಕು. ದೌರ್ಜನ್ಯ ಹಾಗೂ ಕೊಲೆ ನಡೆದ ಕುಟುಂಬಕ್ಕೆ ಶೀಘ್ರ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಬೇಕು. ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಪಿ ಮಾರುತಿಗೆ ಮನವಿ ಸಲ್ಲಿಸಲಾಯಿತು.

ದಸಂಸ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ್ಣ ಮಾದಿನೂರು, ಜ್ಞಾನಸುಂದರ್, ಮರಿಯಪ್ಪ ಯತ್ನಟ್ಟಿ, ರಾಮಣ್ಣ ಕಂದಾರಿ, ಬಸವರಾಜ್ ಬುದಗುಂಪಾ, ಫಕೀರಪ್ಪ ದೊಡ್ಡಮನಿ, ಶಿವಪ್ಪ ಕನಕಾಪುರ, ಮುದಿಯಪ್ಪ ಗಂಗಾವತಿ, ಶರಣು ಹೊಸಳ್ಳಿ, ಬಸವರಾಜ್ ಪೂಜಾರ್, ರಾಮಲಿಂಗಪ್ಪ ಕುಕನೂರು, ಮರಿಸ್ವಾಮಿ ಮದಲಗಟ್ಟಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.