ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕವಲೂರು: ದುರ್ಗಾದೇವಿ ರಥೋತ್ಸವ

Published 24 ಮೇ 2024, 4:07 IST
Last Updated 24 ಮೇ 2024, 4:07 IST
ಅಕ್ಷರ ಗಾತ್ರ

ಅಳವಂಡಿ: ಸಮೀಪದ ಕವಲೂರು ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ದೇಶಪ್ರೇಮ ಸಾರುವ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಗುರುವಾರ ಸಂಜೆ ಸಂಭ್ರಮದಿಂದ ನಡೆಯಿತು.

ಜಾತ್ರಾ ಮಹೋತ್ಸವ ಅಂಗವಾಗಿ ಬೆಳಿಗ್ಗೆಯಿಂದಲೇ ದೇವರಿಗೆ ವಿಶೇಷ ಪೂಜೆ ಕಾರ್ಯಕ್ರಮ ನಡೆದವು. ಭಕ್ತರು ದೇವರಿಗೆ ಕಾಯಿ ಕರ್ಪೂರ ನೈವೇದ್ಯ ಸಲ್ಲಿಸಿ ದರ್ಶನ ಪಡೆದರು. 

ಸಂಜೆಯಾಗುತ್ತಿದ್ದಂತೆ ಭಕ್ತರ ದಂಡು ದೇವಸ್ಥಾನದ ಆವರಣದತ್ತ ಆಗಮಿಸಿತು. ರಥೋತ್ಸವಕ್ಕೂ ಮೊದಲು ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಅಳವಂಡಿಯ ಮರುಳಾರಾಧ್ಯ ಶಿವಾಚಾರ್ಯರು, ಮೈನಹಳ್ಳಿ ಬಿಕನಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು ಹಾಗೂ ಗಣ್ಯರು ಧ್ವಜಾರೋಹಣ ನೆರವೇರಿಸಿದರು. 

ಇದಕ್ಕೂ ಮೊದಲು ಮಾತನಾಡಿ ಮರುಳಾರಾಧ್ಯ ಶಿವಾಚಾರ್ಯರು, ‘ಭಾರತೀಯ ಸಂಸ್ಕೃತಿಯಲ್ಲಿ ಜಾತ್ರೆಗೆ ಮಹತ್ವದ ಸ್ಥಾನವಿದೆ. ಜಾತ್ರೆಗಳಿಗೆ ಯಾವುದೇ ಜಾತಿ, ಧರ್ಮದ ಲೇಪವಿರುವುದಿಲ್ಲ. ಎಲ್ಲ ಧರ್ಮಿಯರು ಜಾತ್ರೆಯಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ. ಕವಲೂರಿನ ದುರ್ಗಾದೇವಿ ರಥೋತ್ಸವವು ದೇಶಪ್ರೇಮ ಹಾಗೂ ಭಾವೈಕ್ಯ ಸಾರುತ್ತಿದೆ. ದುರ್ಗಾದೇವಿ ರಥೋತ್ಸವದಲ್ಲಿ ಮೇಲೆ ಭಾರತಾಂಬೆಯ ತ್ರಿವರ್ಣ ಧ್ವಜ ಹಾರುತ್ತಿದೆ ಹಾಗಾಗಿ ಈ ಜಾತ್ರೆಗೆ ವಿಶೇಷವಾದ ಶಕ್ತಿಯಿದೆ’ ಎಂದರು.

ನಂತರ ಮೈನಹಳ್ಳಿ ಬಿಕನಳ್ಳಿಯ ಸಿದ್ದೇಶ್ವರ ಶಿವಾಚಾರ್ಯರು ಹಾಗೂ ಅಂತರರಾಷ್ಟ್ರೀಯ ಜಾನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಮಾತನಾಡಿದರು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಹಾಗೂ ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ, ಭಕ್ತರು ರಥೋತ್ಸವಕ್ಕೆ ಉತ್ತುತ್ತಿ ಹಾಗೂ ಬಾಳೆಹಣ್ಣು ಸಮರ್ಪಿಸಿ ಭಕ್ತಿ ಹರಕೆ ತೀರಿಸಿದರು. ರಥೋತ್ಸವದ ಮುಂದೆ ಡೊಳ್ಳಿನ ಮೇಳ ಹಾಗೂ ವಿವಿಧ ವಾದ್ಯ ಮೇಳಗಳು ಗಮನ ಸೆಳೆದವು. ರಥೋತ್ಸವವು ಪಾದಗಟ್ಟಿವರೆಗೂ ತಲುಪಿ ನಂತರ ವಾಪಸಾಯಿತು. ರಥೋತ್ಸವ ಯಶಸ್ವಿಯಾಗಿ ಮರಳಿ ಸ್ಥಳಕ್ಕೆ ಬಂದು ನಿಂತಾಗ ಭಕ್ತರು ಚಪ್ಪಾಳೆ ತಟ್ಟಿ ಹರ್ಷವನ್ನು ವ್ಯಕ್ತಪಡಿಸಿದರು. ರಥೋತ್ಸವದಲ್ಲಿ ಪಿಎಸ್ಐ ಅಬ್ಬಾಸ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಒದಗಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT