ಭಾನುವಾರ, ಜನವರಿ 19, 2020
27 °C
ಶುಗರ್ ಲೆಸ್ ಬಾರೆಹಣ್ಣಿಗೆ ಬಲು ಬೇಡಿಕೆ

ಬಾರೆ ಬೆಳೆದು ಲಾಭ ಕಂಡ ರೈತ

ಕೆ.ಶರಣಬಸವ ನವಲಹಳ್ಳಿ Updated:

ಅಕ್ಷರ ಗಾತ್ರ : | |

Prajavani

ತಾವರಗೇರಾ: ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದಾಗಿ ರೈತರು ವಾಣಿಜ್ಯ ಬೆಳೆ ಬೆಳೆಯಲು ಹಿಂದೇಟು ಹಾಕುವುದೇ ಹೆಚ್ಚು. ಆದರೆ ಇಲ್ಲೊಬ್ಬ ರೈತ ಶುಗರ್ ಲೆಸ್ ಬಾರೆಹಣ್ಣು ಬೆಳೆದು ಯಶಸ್ಸು ಕಂಡಿದ್ದಾರೆ.

ತಾವರಗೇರಾ ಸಮೀಪದ ಮೆಣೇದಾಳ ಗ್ರಾಮದ ರೈತ ಹನಮೇಶ ಉಡಮಕಲ್ ಅವರು ವಾರ್ಷಿಕ ಗುತ್ತಿಗೆ ಪಡೆದ ತಮ್ಮ ಆರು ಎಕರೆ ಜಮೀನಿನಲ್ಲಿ ಬಾರೆ ಹಣ್ಣು ಫಸಲಿನಿಂದ ₹ 7 ಲಕ್ಷ ಲಾಭ ಪಡೆದಿದ್ದಾರೆ.‌

ಅದೇ ಗ್ರಾಮದ ರಾಮರಾವ್ ರೆಡ್ಡಿ ಅವರ 2,400 ಬಾರೆ ಸಸಿಗಳನ್ನು ನಾಟಿ ಮಾಡಿದ 6 ಎಕರೆ ಜಮೀನನ್ನು ರೈತ ಹನಮೇಶ ಗುತ್ತಿಗೆ ಪಡೆದಿದ್ದಾರೆ. ಮಳೆಯ ಕೊರತೆಯಿಂದಾಗಿ ಕೊಳವೆ ಬಾವಿ ಬತ್ತಿದಾಗ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಿ ಬೆಳೆ ಉಳಿಸಿಕೊಂಡು ಉತ್ತಮ ಫಸಲು ಬೆಳೆದಿದ್ದಾರೆ.

‘ಸದ್ಯ ಕಟಾವಿಗೆ ಬಂದಿರುವ ಬಾರೆ ಹಣ್ಣಿನಿಂದ ₹ 7 ಲಕ್ಷ ಆದಾಯ ದೊರೆತಿದ್ದು, ಇನ್ನೂ 2-3 ತಿಂಗಳವರೆಗೆ ಹಣ್ಣಿನ ಫಸಲು ಬರಲಿದೆ. ಮತ್ತಷ್ಟು ಆದಾಯದ ನಿರೀಕ್ಷೆಯಲ್ಲಿದ್ದೇನೆ’ ಎಂದು ರೈತ ಹನಮೇಶ ಉಡಮಕಲ್ ಹೇಳಿದರು.

ಪ್ರತಿದಿನ 2 ಟನ್ ಫಸಲು: ಪ್ರತಿ ದಿನ ಎರಡರಿಂದ ಎರಡೂವರೆ ಟನ್ ಫಸಲು ಬರುತ್ತದೆ. ಅವುಗಳನ್ನು ಪ್ರತಿದಿನ 25 ರಿಂದ 30 ಜನರು ಕಟಾವು ಮಾಡುತ್ತಾರೆ. ನೆರವಾಗಿ ಅವುಗಳನ್ನು ಮಾರಾಟ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಒಂದು ಕೆ.ಜಿಗೆ ₹ 30-40 ಮಾರಾಟ ಮಾಡಲಾಗುತ್ತಿದ್ದು, ಜಮೀನಿನಲ್ಲಿ ₹ 30ಗೆ ಮಾರಾಟ ಮಾಡಲಾಗುತ್ತಿದೆ.

ಹೆಚ್ಚಿದ ಬೇಡಿಕೆ: ಇಲ್ಲಿ ಬೆಳದ ಬಾರೆ ಹಣ್ಣು ಶುಗರ್ ಲೆಸ್ ಆಗಿರುವುದರಿಂದ ಬಾರಿ ಬೇಡಿಕೆ ಇದ್ದು, ಹೈದರಾಬಾದ್, ಮುಂಬೈ, ಮಂಗಳೂರು, ಬೆಂಗಳೂರು ಸೇರಿದಂತೆ ಸಮೀಪದ ಕುಷ್ಟಗಿ, ತಾವರಗೇರಾ, ಕನಕಗಿರಿ, ಕಾರಟಗಿ, ಗಂಗಾವತಿಯ ಮಾರುಕಟ್ಟೆಗೆ ಸರಬರಾಜು ಮಾಡಲಾಗುತ್ತದೆ. ಅಲ್ಲದೇ ಕೆಲ ಗುತ್ತಿಗೆದಾರರು ಜಮೀನಿಗೆ ನೇರವಾಗಿ ಬಂದು ತೆಗೆದುಕೊಂಡು ಹೋಗುತ್ತಾರೆ.

ಮೂರು ವರ್ಷದ ಹಿಂದೆ ನಾಟಿ: ‘ಕಳೆದ ಮೂರು ವರ್ಷದ ಹಿಂದೆ ಬಾರೆಹಣ್ಣಿನ ಸಸಿ ನಾಟಿ ಮಾಡಿದ ನಂತರ ಕೀಟಬಾಧೆ, ಗಿಡ ರಕ್ಷಣೆಗೆ ಖರ್ಚು ಸಹ ಹೆಚ್ಚು. ಪ್ರತಿ ದಿನ ಗಿಡದ ಸುತ್ತಲಿನ ಕಸ ತೆಗೆಯಲು ಕೂಲಿ ಕಾರ್ಮಿಕರ ಅಗತ್ಯವಿದೆ. ಆಗಾಗ್ಗೆ ರಾಸಾಯನಿಕ ಗೊಬ್ಬರ, ಕೀಟ ನಾಶಕ ಸಿಂಪರಣೆ ಮಾಡಿ ಫಸಲು ಕಾಪಾಡಬೇಕು. ಇಲ್ಲದಿದ್ದರೆ ಬೆಳೆ ಕೈತಪ್ಪುವ ಸಾಧ್ಯತೆ ಇದೆ’ ಎಂದು ರೈತ ಹನಮೇಶ ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು