ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪ್ಪನ ದಿನ ವಿಶೇಷ| ತಂದೆಯ ನೆನಪಿನಲ್ಲಿ ದೇಗುಲ ಕಟ್ಟಿದ ಮಕ್ಕಳು

ತಂದೆಯಂದಿರ ದಿನ ಇಂದು; ಕೂಕನಪಳ್ಳಿ ಗ್ರಾಮದ ‘ಅಪ್ಪನ ಗುಡಿ’ಯಲ್ಲಿ ನಿತ್ಯ ಪೂಜೆ
ಫಾಲೋ ಮಾಡಿ
Comments

ಕೊಪ್ಪಳ: ನಾನು ನೋಡಿದ ಮೊದಲ ವೀರ, ಬಾಳು ಕಲಿಸಿದ ಸಲಹೆಗಾರ, ಬೆರಗು ಮೂಡಿಸೊ ಜಾದುಗಾರ ಅಪ್ಪಾ.

ಹೀಗೆ ಪ್ರೀತಿಯಿಂದ ಅಪ್ಪನನ್ನು ನೆನಪಿಸಿಕೊಳ್ಳುವ ಮಕ್ಕಳು ಹಲವರು ಇದ್ದಾರೆ. ಅಂಥವರಲ್ಲಿ ಒಬ್ಬರು ಅಪ್ಪನಿಗೆಂದೇ ಕೊಪ್ಪಳ ತಾಲ್ಲೂಕಿನ ಬೂದಗುಂಪಾ ಸಮೀಪದ ಕೂಕನಪಳ್ಳಿ ಗ್ರಾಮದಲ್ಲಿ ದೇವಸ್ಥಾನ ನಿರ್ಮಿಸಿದ್ದಾರೆ.

ಕೂಕನಪಳ್ಳಿ ಗ್ರಾಮದಲ್ಲಿ ದೇವಸ್ಥಾನದ ಪೂಜಾರಿಯಾಗಿದ್ದ ತಂದೆ ತಿಮ್ಮಣ್ಣ ಪೂಜಾರ ಅವರ ಮೂರ್ತಿಯನ್ನು ಹಿರಿಯ ಮಗ ಕೃಷ್ಣಪ್ಪ ಪೂಜಾರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದಾರೆ. ಅವರಿಗೆ ಸಹೋದರರಾದ ಬೆಟ್ಟದಪ್ಪ ಪೂಜಾರ, ಹನುಮಂತಪ್ಪ ಪೂಜಾರ ಮತ್ತು ನಾಗರಾಜ ಪೂಜಾರ ನೆರವಾಗಿದ್ದಾರೆ.

2005ರಲ್ಲಿ ನಿಧನರಾದ ತಂದೆಯವರ ಆಸೆಯಂತೆ ಸ್ವಂತ ಹೊಲದಲ್ಲಿ ಮಕ್ಕಳು ಅಂತ್ಯಕ್ರಿಯೆ ನೆರವೇರಿಸಿದರು. ಅದೇ ಸ್ಥಳದಲ್ಲಿ ದೇವಸ್ಥಾನ ಕಟ್ಟಿದರು. ಅಲ್ಲಿ ನಿತ್ಯ ಗಂಟೆಯ ಸದ್ದು ಕೇಳುತ್ತದೆ. ಮಂಗಳಾರತಿಯೂ ನಡೆಯುತ್ತದೆ.

ತಂದೆಯ ಮೂರ್ತಿಗೆ ನಮಸ್ಕಾರ ಮಾಡಿಯೇ ಮಕ್ಕಳು ನಿತ್ಯದ ಕೆಲಸ ಆರಂಭಿಸುತ್ತಾರೆ. ಪ್ರತಿ ವರ್ಷ ಪಿತೃಪಕ್ಷದ ದಿನದಂದು ಗ್ರಾಮದ ಜನರಿಗೆ ಊಟ ಹಾಕಿಸುತ್ತಾರೆ.

‘₹2.5 ಲಕ್ಷ ವೆಚ್ಚದಲ್ಲಿ ಸ್ವಂತ ಖರ್ಚಿನಲ್ಲಿ ದೇವಸ್ಥಾನ ನಿರ್ಮಿಸಿ, ಎರಡೂವರೆ ಅಡಿ ಎತ್ತರದ ಅಪ್ಪನ ಮೂರ್ತಿ ಪ್ರತಿಷ್ಠಾಪಿಸಿದ್ದೇವೆ. ನಿತ್ಯ ದೇವಸ್ಥಾನ ಸ್ವಚ್ಛಗೊಳಿಸಿ, ಮೂರ್ತಿಯನ್ನು ಅಲಂಕರಿಸಿ ಪೂಜೆ ಮಾಡುತ್ತೇವೆ. ದೇವಸ್ಥಾನ ನೋಡಲು ಕೂಕನಪಳ್ಳಿ ಗ್ರಾಮದವರಲ್ಲದೇ ಬೇರೆ ಊರಿನವರು ಬರುತ್ತಾರೆ’ ಎಂದು ಮಕ್ಕಳು ತಿಳಿಸಿದರು.

‘ಈಗಿನ ಮಕ್ಕಳು ಪೋಷಕರನ್ನು ಸರಿಯಾಗಿ ನೋಡಿಕೊಳ್ಳದೇ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ಪೂಜಾರ ಸಹೋದರರು ಅಪ್ಪನ ನೆನಪಿನಲ್ಲಿ ದೇವಸ್ಥಾನ ಕಟ್ಟಿ, ಪೂಜೆ ಮಾಡುತ್ತಿರುವುದು ನೋಡಿ ಖುಷಿಯಾಗುತ್ತದೆ. ಅವರ ನಡೆ ಮಾದರಿ’ ಎಂದು ಗ್ರಾಮಸ್ಥ ಗುರುರಾಜ ಆರಾಳ್ ಹೇಳಿದರು.

‘ಅಪ್ಪನ ಆಶೀರ್ವಾದವೇ ಬಲ‘

‘ನಮ್ಮ ಬದುಕಿಗೆ ಬೇಕಾದ ಎಲ್ಲವನ್ನೂ ಕೊಟ್ಟ ಅಪ್ಪನ ನೆನಪಿನಲ್ಲಿ ಪ್ರೀತಿಯಿಂದ ದೇವಾಲಯ ಕಟ್ಟಿದ್ದೇವೆ. ಅಪ್ಪ ಬದುಕಿದ್ದಾಗ ದೇವರ ಕಾರ್ಯ ಮಾಡುತ್ತ ಎಲ್ಲರ ಒಳಿತನ್ನು ಬಯಸಿದರು. ಅವರ ನೆನಪು ಸದಾ ನಮ್ಮೊಂದಿಗೆ ಇರಲಿ ಎಂಬ ಕಾರಣಕ್ಕೆ ದೇವಸ್ಥಾನ ಕಟ್ಟಿದ್ದೇವೆ. ಅಪ್ಪನ ಆಶೀರ್ವಾದವೇ ನಮಗೆ ಬಲ’ ಎಂದು ಹಿರಿಯ ಮಗ ಕೃಷ್ಣಪ್ಪ ಪೂಜಾರ ಮತ್ತು ಸಹೋದರರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT