ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನವಿದ್ದರೂ ಗಾಂಧಿ ಭವನಕ್ಕೆ ನಿವೇಶನದ ಕೊರತೆ

ಜಿಲ್ಲೆಯಲ್ಲಿ ನೆನಗುದಿಗೆ ಬಿದ್ದ ಸರ್ಕಾರಿ ಭವನಗಳ ನಿರ್ಮಾಣ ಕಾಮಗಾರಿ
Last Updated 3 ಜೂನ್ 2019, 19:30 IST
ಅಕ್ಷರ ಗಾತ್ರ

ಕೊಪ್ಪಳ: ರಾಜ್ಯದ 12 ಜಿಲ್ಲಾ ಕೇಂದ್ರಗಳಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಸರ್ಕಾರ ₹ 3 ಕೋಟಿ ಅನುದಾನ ನೀಡಿ ಆದೇಶಹೊರಡಿಸಿ 3 ವರ್ಷವಾದರೂ ಯಾವುದೇ ಕಾಮಗಾರಿ ಆರಂಭವಾಗದೆ ನನೆಗುದಿಗೆ ಬಿದ್ದಿದೆ.

ಗಾಂಧಿ ತತ್ವ ಮತ್ತು ಜೀವನ ಸಂದೇಶದಪ್ರಚಾರಕ್ಕೆ ಗಾಂಧಿ ಭವನವನ್ನು ಎಲ್ಲ ಜಿಲ್ಲೆಗಳಲ್ಲಿ ಒಂದೇ ರೀತಿ ನಿರ್ಮಾಣಮಾಡುವಂತೆ ನೀಲ ನಕ್ಷೆ ತಯಾರಿಸಲಾಗಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಕಾಮಗಾರಿ ಬಹುತೇಕ ಪೂರ್ಣಗೊಂಡು ಉದ್ಘಾಟನೆಗೆ ಸಿದ್ಧವಾಗಿದ್ದರೆ, ಜಿಲ್ಲೆಯಲ್ಲಿ ಮಾತ್ರ ಇನ್ನೂ ನಿವೇಶನ ಹುಡುಕಾಡುವುದರಲ್ಲಿಯೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಾಲಹರಣ ಮಾಡುತ್ತಿದ್ದಾರೆ.

ಅತ್ಯಂತ ಸುಂದರವಾದ ಭವನವನ್ನು ಒಂದು ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಬೇಕು ಎಂದು ಸರ್ಕಾರ ಸೂಚಿಸಿದೆ. ಬೃಹತ್ ಸಭಾಂಗಣ, ಪ್ರದರ್ಶನ ಕೊಠಡಿಗಳು, ಪಾರ್ಕಿಂಗ್ ವ್ಯವಸ್ಥೆ, ನೈಸರ್ಗಿಕವಾಗಿ ಗಾಳಿ, ಬೆಳಕು, ಮಳೆ ನೀರು ಕೊಯ್ಲು, ಸೋಲಾರ್ ವ್ಯವಸ್ಥೆಯನ್ನು ಒಳಗೊಂಡ ಗಾಂಧಿ ಭವನ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಅಲ್ಲದೆ ₹2.80 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಆದರೆ ನಗರದಲ್ಲಿ ಸೂಕ್ತ ನಿವೇಶನ ಸಿಗದೇ ವಿಳಂಬವಾಗುತ್ತಿದೆ ಎಂಬುವುದು ಅಧಿಕಾರಿಗಳ ವಾದ.

ಕಾಮಗಾರಿ ಯಾರಿಗೆ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಭವನ ನಿರ್ಮಾಣ ಕಾಮಗಾರಿ ಉಸ್ತುವಾರಿಯನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತಕ್ಕೆ (ಕೆಆರ್‌ಡಿಐಎಲ್)ಗೆ ವಹಿಸಿದೆ. ಈ ಸಂಸ್ಥೆ ನಗರದಲ್ಲಿ ನಿವೇಶನವನ್ನು ಗುರುತಿಸಿತ್ತು. ಆದರೆ ಅದು 26x44 ಮೀಟರ್ ಪ್ರದೇಶ ಇರಬೇಕು ಎಂದು ಸೂಚಿಸಲಾಗಿದೆ. ಇಲ್ಲಿಯ ನಿವೇಶನದಲ್ಲಿ 0.6 ಮೀಟರ್ ಕೊರತೆಯಿರುವುದರಿಂದ ಮೂಲನಕ್ಷೆ ಬದಲಿಸಿ ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದು ಕೆಆರ್‌ಡಿಐಎಲ್ ಆಯುಕ್ತರಿಗೆ ಪತ್ರ ಬರೆಯಲಾಗಿದೆ.

ಸರ್ಕಾರದ ನಿರ್ದೇಶನದಂತೆ ಏಕರೂಪ ಕಟ್ಟಡವನ್ನು ನಿರ್ಮಿಸಬೇಕು. ಇದರಲ್ಲಿ ಯಾವುದೇ ರಾಜಿಯಿಲ್ಲ. ಪಕ್ಕದಲ್ಲಿ ಇರುವ ನಿವೇಶನದವರಿಂದ ಖರೀದಿಸಿ ಸೂಚಿಸಿದ ಪ್ರದೇಶದಲ್ಲಿಯೇ ನಿರ್ಮಾಣ ಮಾಡಬೇಕು ಎಂದು ಆದೇಶ ಹೊರಡಿಸಲಾಗಿದೆ. ಪಕ್ಕದಲ್ಲಿ ಅಂತಹ ಯಾವುದೇ ಸೂಕ್ತ ನಿವೇಶನ ಲಭ್ಯವಿಲ್ಲದ ಕಾರಣ ಭವನ ನಿರ್ಮಾಣ ನನೆಗುದಿಗೆ ಬಿದ್ದಿದೆ.

ಈ ಕುರಿತು ವಾರ್ತಾ ಇಲಾಖೆ ಮತ್ತು ಸಂಬಂಧಿಸಿದ ಇಲಾಖೆಗೆ ಪತ್ರ ವ್ಯವಹಾರ ಮಾತ್ರ ನಡೆಯುತ್ತಿದ್ದು, ಜಿಲ್ಲೆಯ ಒಂದು ಸಾರ್ವಜನಿಕ ಆಸ್ತಿಯನ್ನು ತಮ್ಮ ಇಚ್ಛಾಶಕ್ತಿ ಪ್ರದರ್ಶಿಸಿ ನಿರ್ಮಾಣ ಮಾಡಬೇಕು ಎಂಬುವುದು ಸ್ಥಳೀಯರ ಆಗ್ರಹವಾಗಿದೆ.

ಜಿಲ್ಲೆಯಲ್ಲಿ ಈಗಾಗಲೇ ವಿಜ್ಞಾನ ಭವನ, ಜಿಲ್ಲಾ ರಂಗಮಂದಿರ ಕಾಮಗಾರಿ ಕುಂಟುತ್ತಾ ಸಾಗಿದೆ. ಜಿಲ್ಲಾ ಸಾಹಿತ್ಯ ಭವನ ಇದ್ದರೂ ನಿರ್ವಹಣೆ ಕೊರತೆಯಿಂದ ಕಾರ್ಯಕ್ರಮಗಳು ನಡೆಯುವುದು ಕಡಿಮೆ. ಇದರಿಂದ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ ಉಳಿಸುವಂತಹ ಕಾರ್ಯ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಇದೆ ಎಂದು ಹೋರಾಟಗಾರರು ಕಳವಳ ವ್ಯಕ್ತಪಡಿಸುತ್ತಾರೆ.

'ಗಾಂಧಿ ಭವನ ನಿರ್ಮಾಣ ಮಾಡಬೇಕು ಎಂಬುವುದು ನನ್ನ ಕನಸಾಗಿತ್ತು. ನಿವೇಶನ ಕೊರತೆ ಮತ್ತು ಇತರ ತಾಂತ್ರಿಕ ತೊಂದರೆಯಿಂದ ವಿಳಂಬವಾಗಿದೆ' ಎನ್ನುತ್ತಾರೆ ನಾಲ್ಕು ದಿನಗಳ ಹಿಂದೆ ನಿವೃತ್ತರಾದ ಕೆಆರ್‌ಡಿಐಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಎಂ.ಕೊರಬು.

ಈಗ ಕೆಆರ್‌ಡಿಐಎಲ್ ನೂತನ ಎಂಜಿನಿಯರ್ ಅಧಿಕಾರ ವಹಿಸಿಕೊಳ್ಳಲಿದ್ದು, ಅತ್ಯಂತ ಮಹತ್ವದ ಸಾರ್ವಜನಿಕ ಆಸ್ತಿಯಾದ ಗಾಂಧಿ ಭವನ ಕಟ್ಟಡ ನಿರ್ಮಾಣಕ್ಕೆ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುವುದನ್ನು ಕಾಯ್ದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT