ಕೊಪ್ಪಳ: ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶಾಂತಿ ಕದಡದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ಪೊಲೀಸರು ಹಲವು ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯಾದ್ಯಂತ ಒಟ್ಟು 3,236 ಸಿಸಿಟಿವಿ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇರಿಸಿದ್ದಾರೆ.
ಒಟ್ಟು ನಾಲ್ಕು ಜನ ಡಿವೈಎಸ್‌ಪಿಗಳು, 16 ಜನ ಪೊಲೀಸ್ ಇನ್‌ಸ್ಟೆಕ್ಟರ್, ಸಿಪಿಐಗಳು, 32 ಜನ ಪಿಎಸ್‌ಐ, 75 ಜನ ಎಎಸ್‌ಐ, ಹೆಡ್ ಕಾನ್‌ಸ್ಟೆಬಲ್ ಹಾಗೂ ಪೊಲೀಸ್ ಕಾನ್‌ಸ್ಟೆಬಲ್‌ಗಳು ಸೇರಿ 410, ನಾಲ್ಕು ಕೆಎಸ್‌ಆರ್‌ಪಿ, ಎರಡು ಡಿಎಆರ್ ಮತ್ತು 500 ಜನ ಹೋಂಗಾರ್ಡ್‌ಗಳನ್ನು ನಿಯೋಜಿಸಲಾಗಿದೆ.
ಕಳೆದ ವರ್ಷ ಗಂಗಾವತಿಯಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ಜಾಮೀಯಾ ಮಸೀದಿ ಬಾಗಿಲಿಗೆ ಆರತಿ ಬೆಳಗಿ, ಹಿಂದೂ ದೇವರ ಹೆಸರಲ್ಲಿ ಘೋಷಣೆ ಕೂಗಲಾಗಿತ್ತು. ಪ್ರಕರಣ ದಾಖಲಾಗಿ ಮೂವರು ಪೊಲೀಸರು ಅಮಾನತಾಗಿದ್ದರು.
ಆದ್ದರಿಂದ ಈ ಬಾರಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ತಿಳಿಸಿದ್ದಾರೆ.
ಮೂವರು ರೂಢಿಗತ ಅಪರಾಧಿಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದ್ದು, 951 ಜನ ರೌಡಿಗಳಿದ್ದು, ಅವರಿಂದ ₹1 ಲಕ್ಷ ಮೊತ್ತದ ಸುರಕ್ಷತಾ ಬಾಂಡ್ ಬರೆಯಿಸಿಕೊಳ್ಳಲಾಗಿದೆ. ಗಸ್ತು ಬಲಪಡಿಸಲು ಹೆಚ್ಚುವರಿಯಾಗಿ 20 ವಾಹನಗಳು, ಗಣಪತಿ ವಿಸರ್ಜನಾ ದಿನಗಳನ್ನು ದ್ರೋಣ್‌ನಿಂದ ನಿಗಾ ಸೇರಿದಂತೆ ಇನ್ನಿತರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜಿಲ್ಲೆಯಾದ್ಯಂತ ಪ್ರತಿವರ್ಷ ಸಾಮಾನ್ಯವಾಗಿ 1400 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತಿತ್ತು. ಈ ಬಾರಿ ಇದರ ಸಂಖ್ಯೆ 1500 ದಾಟಲಿದೆ.
ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ 237 ಮತ್ತು ಬೀಟ್ ಮಟ್ಟದಲ್ಲಿ 428 ಶಾಂತಿ ಸಭೆಗಳನ್ನು ಜಿಲ್ಲೆಯಾದ್ಯಂತ ನಡೆಸಲಾಗಿದೆ. ಮುಖ್ಯವಾದ ಮಾಹಿತಿಯಿದ್ದರೆ 112 ಸಹಾಯವಾಣಿಗೆ ಕರೆ ಮಾಡಿ.
ಡಾ. ರಾಮ್ ಎಲ್. ಅರಸಿದ್ಧಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ