ಸೋಮವಾರ, ಜನವರಿ 27, 2020
18 °C
ಶಿಷ್ಯರಾದ ಈಶಪ್ಪ, ದ್ರಾಕ್ಷಾಯಿಣಮ್ಮ ದಂಪತಿಗಳಿಂದ ಚಾಲನೆ

ಗವಿಸಿದ್ಧೇಶ್ವರನ ಅದ್ಧೂರಿ ತೆಪ್ಪೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗವಿಸಿದ್ಧೇಶ್ವರ ಸ್ವಾಮಿಯ ತೆಪ್ಪೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು.

ಸಂಜೆ 7.50ಕ್ಕೆ ಆರಂಭವಾದ ತೆಪ್ಪೋತ್ಸವಕ್ಕೆ ಗವಿಮಠದ ಶಿಷ್ಯರಾದ ಈಶಪ್ಪ ಮತ್ತು ದ್ರಾಕ್ಷಾಯಿಣಮ್ಮ ದಂಪತಿ ಚಾಲನೆ ನೀಡಿದರು.

’ಪಾಹಿಮಾಂ ಗವಿಯ ಸಿದ್ದ ಗವಿಯ ಸಿದ್ದ ಪಾಹಿಮಾಂ... ‘ಎಂದು ಚೀಕೆನಕೊಪ್ಪದ ಶರಣರ ತಂಡ ಕೆರೆಯ ಮಧ್ಯಭಾಗದ ಮಂಟಪದಲ್ಲಿ ಸುಶ್ರಾವ್ಯವಾಗಿ ಭಕ್ತಿ ಗಾಯನ ನಡೆಸುತ್ತಿದ್ದಂತೆಯೇ ವಿದ್ಯುತ್‌ ದೀಪಾಲಂಕೃತ, ಗವಿಸಿದ್ದೇಶ್ವರನ ಉತ್ಸವ ಮೂರ್ತಿಯನ್ನು ಹೊತ್ತ ತೆಪ್ಪ ಮಠದ ಕೆರೆಯಲ್ಲಿ ಸಾಗಿತು. ಅಲಂಕೃತ ಮಂಟಪದ ಮುಂಭಾಗ ಇಬ್ಬರು ಭಕ್ತರು ಚಾಮರ ಬೀಸಿದರು.

ಕೆರೆಯ ನೀರಿನ ಅಲೆಯೊಂದಿಗೆ ಭಕ್ತಿಗಾನದ ಅಲೆ, ಜನರ ಜಯಘೋಷ, ಉದ್ಗಾರ ಮಿಳಿತವಾಯಿತು. ಕೆರೆಯ ಬಾತುಕೋಳಿಗಳು ತೆಪ್ಪದ ಚಲನೆಯ ಜತೆಗೇ ಮಂದಗತಿಯಲ್ಲಿ ಈಜಾಡಿದವು. ಮಠದ ಬಂಡೆಯ ಮೇಲೆ ಸಾವಿರಾರು ಕಣ್ಣುಗಳ ಜೊತೆ, ಮೊಬೈಲ್‌ ಕ್ಯಾಮೆರಾಗಳೂ ಅಪೂರ್ವ ದೃಶ್ಯವನ್ನು ಸೆರೆಹಿಡಿದವು.

ನಿಧಾನಗತಿಯಲ್ಲಿ ಕೆರೆಯಲ್ಲಿ ಎರಡು ಸುತ್ತು ಸಂಚರಿಸಿದ ತೆಪ್ಪ ರಾತ್ರಿ 8.30ಕ್ಕೆ ಮೂಲ ಸ್ಥಳಕ್ಕೆ ಬಂದು ನಿಂತಿತು. ಪೀಠಾಧಿಪತಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ನೇತೃತ್ವ ವಹಿಸಿದ್ದರು.

ತೇಪ್ಪೋತ್ಸವಕ್ಕೂ ಮುನ್ನ ಗವಿಶ್ರೀ ಮಾತನಾಡಿ, ಇನ್ನೊಬ್ಬರ ಬಗ್ಗೆ ಮಾತನಾಡಬೇಡಿ. ಆಗ ಮಾತ್ರ ತೆಪ್ಪದ ಮೇಲಿನ ಉತ್ಸವ ಆಗುತ್ತದೆ. ಅದು ತೆಪ್ಪೋತ್ಸವ ಆಗುತ್ತದೆ. ಆಡಿದವರ ಮಾತು, ಮಾಡಿದವರ ಬಾಯಲ್ಲಿ ಎಂಬಂತೆ. ಇನ್ನೊಬ್ಬರ ಬಗ್ಗೆ ಮಾತನಾಡಿದರೇ ನಮಗೆ ಒಳ್ಳೆಯದಾಗುವುದಿಲ್ಲ. ಪಾಪ ಮಾಡಿದಂತೆ ಆಗುತ್ತದೆ. ಹಾಗಾಗಿ ಒಳ್ಳೆಯ ಕಾರ್ಯಗಳನ್ನು ಮಾಡಬೇಕು. ಇದನ್ನು ಎಲ್ಲರೂ ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.

ಕಲಾವಿದರಾದ ಸಂಗೀತಾ, ಅರ್ಜುನ್ ಇಟಗಿ, ಮಹನ್ಯಾ ಪಾಟೀಲ್ ಸುಮಧುರ ಕಂಠದಿಂದ ಸಂಗೀತ ಕಾರ್ಯಕ್ರಮಕ್ಕೆ ಬೆಟ್ಟದ ಮೇಲಿದ್ದ ಎಲ್ಲರೂ ತಲೆದೂಗಿದರು. ಹಾಸ್ಯ ಕಲಾವಿದ ಜೀವನ್‌ಸಾಬ್ ಬಿನ್ನಾಳ್‌‌ ನಗೆ ಚಟಾಕಿಗಳನ್ನು ಹಾರಿಸಿದರು. ಗವಿಸಿದ್ಧೇಶ್ವರ ಸಂಗೀತ ಪಾಠಶಾಲೆಯ ವಿದ್ಯಾರ್ಥಿಗಳ ಸಂಗೀತದ ಜುಗಲ್‌ಬಂಧಿಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆದು, ತೆಪ್ಪೋತ್ಸವಕ್ಕೆ ಸಿಕ್ಕಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು