ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ‘ಗವಿಸಿದ್ಧೇಶ್ವರ ಮಠ ಸಂಸ್ಖೃತಿಯ ಪ್ರತೀಕ’

ಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯಸ್ಮರಣೋತ್ಸವ: ವೆಂಕಟೇಶ್ ಕುಮಾರ್‌ ಸಂಗೀತ ಮೋಡಿ
Last Updated 17 ಮಾರ್ಚ್ 2023, 5:19 IST
ಅಕ್ಷರ ಗಾತ್ರ

ಕೊಪ್ಪಳ: ಲಿಂಗೈಕ್ಯ ಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಇಲ್ಲಿನ ಗವಿಮಠದ ಆವರಣದ ಕೆರೆಯ ದಡದಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕ್ರಮದ ವೇಳೆ ಬೀಸಿ ಬರುತ್ತಿದ್ದ ತಂಗಾಳಿಯ ಜೊತೆ ಪಂಡಿತ್‌ ಎಂ. ವೆಂಕಟೇಶ ಕುಮಾರ್ ಅವರ ಸಂಗೀತದ ಸೊಬಗು ಭಕ್ತರನ್ನು ಮಂತ್ರಮುಗ್ದರನ್ನಾಗಿಸಿತು.

ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿದ್ದ ಮಠದ ಆವರಣದಲ್ಲಿ ವೆಂಕಟೇಶ ಕುಮಾರ್ ಅವರು ಹಾಡಿದ 'ಶಿವಶಾಂತ ಶಿವಯೋಗಿ...’, ‘ಕಲ್ಯಾಣ ಬಸವಣ್ಣನೇ...’, ‘ತೊರೆದು ಜೀವಿಸಬಹುದೇ ನಿನ್ನ ಚರಣಗಳ...’ ಹಾಡುಗಳು ನೆರೆದವರ ಜನಮನ ಗೆದ್ದವು.

ಬಳಿಕ ಮಾತನಾಡಿದ ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ‘ಅಂತರಂಗದಲ್ಲಿ ಪರಮಾತ್ಮನನ್ನು ಅರಿಯುವ ಪ್ರಯತ್ನ ಮಾಡಬೇಕಾದರೆ ಶಿವಶಾಂತವೀರ ಸ್ವಾಮೀಜಿಯ ಚಿತ್ರವನ್ನು ನೋಡಬೇಕು. ಪ್ರಸ್ತುತ ದಿನಮಾನಗಳಲ್ಲಿ ಅರಿವಿನ ಹಾಗೂ ಜ್ಞಾನದ ಕಣ್ಣು ತೆಗೆದು ನೋಡುವ ಅಗತ್ಯವಿದೆ. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಮನುಷ್ಯ ಜನ್ಮದಲ್ಲಿ ಹುಟ್ಟಿದ ನಾವೆಲ್ಲರೂ ಪ್ರಕೃತಿಯಿಂದ ಕಲಿಯಬೇಕಾದ ಪಾಠ ಸಾಕಷ್ಟಿದೆ. ಜೀವನದಲ್ಲಿ ಅನೇಕರಿಗೆ ಅನೇಕ ಭಾಗ್ಯಗಳು ಲಭಿಸುತ್ತವೆ. ಪ್ರತಿಯೊಬ್ಬ ಮನುಷ್ಯ ಇರುವ ಭಾಗ್ಯವನ್ನು ಅನುಭವಿಸಬೇಕು. ಭಾಗ್ಯವಂತ ಬದುಕು ನಮ್ಮದಾಗಬೇಕು. ಕವಿರಾಜ ಮಾರ್ಗ ಸೇರಿದಂತೆ ಹಳೆಗನ್ನಡದ ಅನೇಕ ಕೃತಿಗಳಲ್ಲಿ ಕೊಪಾಣಚಲದ (ಕೊಪ್ಪಳ) ಉಲ್ಲೇಖವಿದೆ. ಆದ್ದರಿಂದ ಗವಿಮಠ ಸಂಸ್ಕೃತಿಯ ಪ್ರತೀಕ’ ಎಂದು ಬಣ್ಣಿಸಿದರು.

‘ಜೀವನದಲ್ಲಿ ಎಲ್ಲವನ್ನೂ ಹಣ ಕೊಟ್ಟು ಖರೀದಿ ಮಾಡಲು ಸಾಧ್ಯವಿಲ್ಲ. ಬೆಳದಿಂಗಳಿನಿಂದ ಸಿಗುವ ಆನಂದ, ವಸಂತ ಮಾಸದ ಖುಷಿ ಹೀಗೆ ಪ್ರಕೃತಿಯ ಸಿರಿಸಂಪತ್ತು ಅನುಭವಿಸಬೇಕೇ ಹೊರತು; ಖರೀದಿ ಮಾಡಲು ಆಗುವುದಿಲ್ಲ. ಹಳೆಗನ್ನಡ ಸಾಹಿತ್ಯದ ಕಾಲದಿಂದಲೂ ಕೊಪ್ಪಳ ಭಾಗ್ಯಗಳ ತವರು. ಕೊಪ್ಪಳದ ಜನತೆಗೆ ಇಂಥ ಭುವನದ ಭಾಗ್ಯ ಲಭಿಸಿದ್ದು ನೀವೆಲ್ಲರೂ ಅದೃಷ್ಟವಂತರು’ ಎಂದರು.

ಅನಗವಾಡಿ ಪೂರ್ಣಾನಂದಾಶ್ರಮದ ಅನಸೂಯಾ ಮಾತನಾಡಿ ‘ಪ್ರಕೃತಿಮಯವಾದ ದೇಹ ಇದಾಗಿದ್ದು, ಗುರುವಿಗೆ ಶರಣಾಗುವ ತನಕ ಜ್ಞಾನದ ಸ್ವರೂಪ ತಿಳಿಯುವುದಿಲ್ಲ’ ಎಂದರು. ಮಠಕ್ಕೆ ಬೆಳಿಗ್ಗೆಯಿಂದಲೇ ಸಾಕಷ್ಟು ಭಕ್ತರು ಭೇಟಿ ನೀಡಿ ದರ್ಶನ ಪಡೆದರು. ಹೊರ ಜಿಲ್ಲೆಗಳಿಂದಲೂ ಭಕ್ತರು ಬಂದಿದ್ದರು.

ಸ್ವಾಮೀಜಿ ಪಾದಯಾತ್ರೆ

ಗುರುವಾರ ಬೆಳಿಗ್ಗೆ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಳೆಮಲ್ಲೇಶ್ವರ ದೇವಸ್ಥಾನದಿಂದ ಅಶೋಕ್ ಸರ್ಕಲ್ ಹಾಗೂ ಗಡಿಯಾರ ಕಂಬದ ಮಾರ್ಗದ ಮೂಲಕ ಗವಿಮಠದ ತನಕ ಪಾದಯಾತ್ರೆ ನಡೆಸಿದರು. ಸ್ವಾಮೀಜಿ ಜೊತೆಗೆ ಮಠದ ಭಕ್ತರು, ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಹೆಜ್ಜೆ ಹಾಕಿದರು. ಬೆಳಿಗ್ಗೆಯಿಂದ ಸಂಜೆ ತನಕ ಗವಿಸಿದ್ದೇಶ್ವರ ಆಯುರ್ವೇದ ಕಾಲೇಜಿನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT