ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | ಬಾಲಕಿಯರ ಕಾಲೇಜಿಗೆ ಪುಂಡರ ಹಾವಳಿ

ಜಿಲ್ಲಾ ಕೇಂದ್ರದ ಪದವಿಪೂರ್ವ ಕಾಲೇಜುಗಳಿಗೆ ಹೊರ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳು
Published 6 ಜುಲೈ 2024, 6:54 IST
Last Updated 6 ಜುಲೈ 2024, 6:54 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಬಂದು ಇಲ್ಲಿನ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಿತ್ಯ ಸಾವಿರಾರು ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ಆದರೆ ಈ ಕಾಲೇಜಿಗೆ ಪುಂಡರ ಹಾವಳಿ ವ್ಯಾಪಕವಾಗಿದೆ.

ಈ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಪಿಯುಸಿ ಎರಡೂ ವರ್ಷ ಸೇರಿ 1,477 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದು, ಇವರ ಸಂಖ್ಯೆ ಮತ್ತಷ್ಟು ಜಾಸ್ತಿಯಾಗಲಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಮಂಗಳೂರು, ಕಿನ್ನಾಳ ಮಾರ್ಗದಲ್ಲಿ ಬಸ್‌ಗಳ ಕೊರತೆಯಿದೆ. ಇರುವ ಬಸ್‌ಗಳಲ್ಲಿ ಜಾಗ ಸಾಲದ ಕಾರಣ ಬಾಗಿಲಿಗೆ ಜೋತು ಬಿದ್ದು ಪ್ರಾಣ ಪಣಕ್ಕೊಡ್ಡಿ ಸಂಚರಿಸಬೇಕಾದ ಅನಿವಾರ್ಯತೆಯಿದೆ.

ಈ ಕಾಲೇಜು ನಗರದ ಮಧ್ಯಭಾಗದಲ್ಲಿದ್ದು ಸುತ್ತಲೂ ಎತ್ತರದ ಕಾಂಪೌಂಡ್‌ ಇಲ್ಲದ ಕಾರಣ ಪುಂಡರ ಹಾವಳಿ ಹೆಚ್ಚಾಗಿದೆ. ತರಗತಿ ಹಿಂಭಾಗದಲ್ಲಿರುವ ಕಾಂಪೌಂಡ್‌ ಸುಲಭವಾಗಿ ಹತ್ತಲು ಕಲ್ಲುಗಳನ್ನು ಜೋಡಿಸಿಡಲಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯುವುದು, ತರಗತಿ ಗಾಜುಗಳಿಗೆ ಕಲ್ಲು ಹೊಡೆಯುವುದು, ಶೌಚ ಮಾಡಲಾಗುತ್ತಿದ್ದು, ಇದರಿಂದ ಬಾಲಕಿಯರು ಕಿರಿಕಿರಿ ಎದುರಿಸುವಂತಾಗಿದ್ದು, ಕಾಲೇಜಿನ ಹಿಂಭಾಗದಲ್ಲಿ ಅನೈರ್ಮಲ್ಯ ತಾಂಡವಾಡುತ್ತಿದೆ.

‘ಸಾವಿರಾರು ವಿದ್ಯಾರ್ಥಿಗಳಿದ್ದರೂ ಶೌಚಾಲಯ ಸಮಸ್ಯೆಯಿತ್ತು. ಈಗಾಗಲೇ ₹21 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಶೌಚಾಲಯ ನಿರ್ಮಿಸಲಾಗುತ್ತಿದೆ. ಎತ್ತರದ ಕಾಂಪೌಡ್‌ ಕೊರತೆಯಿದ್ದು ಈ ಸಮಸ್ಯೆ ನೀಗಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಪುಂಡರ ಹಾವಳಿ ತಡೆಯಲು ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಲ್ಲಿಕಾರ್ಜುನ ಪೂಜಾರ ಹೇಳಿದರು.

ನಗರದಲ್ಲಿರುವ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ 383 ವಿದ್ಯಾರ್ಥಿಗಳಿದ್ದು, ಮೂವರು ಅತಿಥಿ ಉಪನ್ಯಾಸಕರಿದ್ದಾರೆ. ಪ್ರಭಾರ ಪ್ರಾಚಾರ್ಯರೇ ಹೊಣೆ ನಿರ್ವಹಣೆ ಮಾಡುತ್ತಿದ್ದಾರೆ. ಈ ಕಾಲೇಜಿನಲ್ಲಿ ಆರ್‌.ಒ. ಪ್ಲ್ಯಾಂಟ್‌ ಕೊರತೆಯಿದ್ದು, ನಗರಸಭೆಯಿಂದ ಪೂರೈಕೆಯಾಗುವ ನೀರೇ ಕುಡಿಯುಲು ಆಧಾರವಾಗಿದೆ. ಈ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ ಕಳಪೆ ಸಾಧನೆ ಮಾಡಿದ್ದು ಪಿಯುಸಿ ಪ್ರಥಮ ವರ್ಷದ ಪ್ರವೇಶಾತಿ ಪ್ರಮಾಣವೂ ಸಹಜವಾಗಿ ಕುಸಿದಿದೆ.

‘ಕಾಲೇಜಿಗೆ ಯಾವ ಮೂಲಸೌಕರ್ಯಗಳು ಬೇಕು ಎಂದು ಇಲಾಖೆಯಿಂದ ಪ್ರತಿವರ್ಷವೂ ಕೇಳಲಾಗುತ್ತದೆ. ನಾವೂ ಅಗತ್ಯ ಸೌಲಭ್ಯಗಳ ಪಟ್ಟಿ ಕಳುಹಿಸುತ್ತೇವೆ. ಇಷ್ಟಕ್ಕೆ ಪ್ರಗತಿ ಕಾರ್ಯ ಮುಗಿದು ಹೋಗುತ್ತದೆ. ಅವುಗಳಲ್ಲಿ ಬಹುತೇಕ ಈಡೇರುವುದೇ ಇಲ್ಲ’ ಎಂದು ಕಾಲೇಜಿನ ಉಪನ್ಯಾಸಕರೊಬ್ಬರು ಬೇಸರ ವ್ಯಕ್ತಪಡಿಸಿದರು.  

ಭಾಗ್ಯನಗರದಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನದಲ್ಲಿ ಎರಡೂ ವರ್ಷ ಸೇರಿ 247 ವಿದ್ಯಾರ್ಥಿಗಳಿದ್ದಾರೆ. ಒಬ್ಬರು ಮಾತ್ರ ಅತಿಥಿ ಉಪನ್ಯಾಸಕರಿದ್ದಾರೆ. ಪ್ರೌಢಶಾಲೆಯ ಆವರಣದಲ್ಲಿಯೇ ಪಿ.ಯು. ಕಾಲೇಜುಗಳು ಕೂಡ ಇದ್ದು ಒಂದೇ ಕಾಂಪೌಂಡಿನಲ್ಲಿ ಒಟ್ಟು 800ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಈ ಎಲ್ಲ ಮಕ್ಕಳಿಗೆ ಸಿಬ್ಬಂದಿಗೆ ಆರ್‌.ಒ. ಪ್ಲ್ಯಾಂಟ್‌ ಅಗತ್ಯವಿದೆ.

ಬಾಲಕಿಯರ ಕಾಲೇಜಿನ ಗಾಜುಗಳು ಒಡೆದಿರುವುದು
ಬಾಲಕಿಯರ ಕಾಲೇಜಿನ ಗಾಜುಗಳು ಒಡೆದಿರುವುದು
ಕೊಪ್ಪಳದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬಿರುಕು ಬಿಟ್ಟಿರುವ ನೆಲದ ಹಾಸು
ಕೊಪ್ಪಳದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬಿರುಕು ಬಿಟ್ಟಿರುವ ನೆಲದ ಹಾಸು
ಜಗದೀಶ್ ಜಿ.ಎಚ್‌.
ಜಗದೀಶ್ ಜಿ.ಎಚ್‌.

ಇರಕಲ್ಲಗಡ ಕಾಲೇಜಿಗೆ ಬೇಕಿದೆ ಹೊಸ ಕೊಠಡಿಗಳು ಪ್ರತಿವರ್ಷವೂ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಕೊಪ್ಪಳ ತಾಲ್ಲೂಕಿನ ಇರಕಲ್ಲಗಡದ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆರಂಭಿಸಲು ಹೊಸ ಕೊಠಡಿಗಳ ಅಗತ್ಯವಿದೆ. ಈ ಕಾಲೇಜಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುತ್ತಿದ್ದು ಕಲಾ ಮತ್ತು ವಾಣಿಜ್ಯ ವಿಭಾಗಗಳಿಂದ 371 ವಿದ್ಯಾರ್ಥಿಗಳಿದ್ದಾರೆ. ತರಗತಿಗಳ ಕೊರತೆಯಿಂದಾಗಿ ವಿಜ್ಞಾನ ವಿಭಾಗ ಆರಂಭಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಇರಕಲ್ಲಗಡ ಮತ್ತು ಸುತ್ತಮುತ್ತಲಿನ ಊರುಗಳ ವಿದ್ಯಾರ್ಥಿಗಳು ಜಿಲ್ಲಾಕೇಂದ್ರಕ್ಕೆ ಎಡತಾಕಬೇಕಾಗಿದೆ.  ನಾಲ್ಕು ಜನ ಕಾಯಂ ಒಬ್ಬರು ನಿಯೋಜಿತ ಮತ್ತು ಇಬ್ಬರು ಅತಿಥಿ ಉಪನ್ಯಾಸಕರನ್ನು ಹೊಂದಿರುವ  ಈ ಕಾಲೇಜು ಈ ವರ್ಷದ ಪಿಯುಸಿ ಫಲಿತಾಂಶದಲ್ಲಿ ಶೇ. 98ರಷ್ಟು ಮತ್ತು ಕಳೆದ ವರ್ಷ ಶೇ. 94ರಷ್ಟು ಪಡೆದುಕೊಂಡಿದೆ. 

‘ಈ ವರ್ಷದಲ್ಲೇ ಎಲ್ಲ ಸಮಸ್ಯೆಗಳಿಗೆ ಗರಿಷ್ಠ ಪರಿಹಾರ’ ಕೊಪ್ಪಳ: ‘ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಕೊರತೆಯಿರುವ ಕೊಠಡಿಗಳ ಬಗ್ಗೆ ಮಾಹಿತಿಯಿದೆ. ವಿವೇಕ ಯೋಜನೆಯಡಿ ಈಗಾಗಲೇ 40 ಕೊಠಡಿಗಳು ಮಂಜೂರಾಗಿದ್ದು ಟೆಂಡರ್‌ ಹಂತದಲ್ಲಿವೆ‘ ಎಂದು ಡಿಡಿಪಿಯು ಜಗದೀಶ್‌ ಎಚ್‌.ಎಸ್‌. ಪ್ರತಿಕ್ರಿಯಿಸಿದರು. ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ‘ಕಾಲೇಜು ಕ್ಯಾಂಪಸ್‌’ ಸರಣಿ ವರದಿಗೆ ಪ್ರತಿಕ್ರಿಯೆ ನೀಡಿರುವ ಅವರು ‘ಕೊರತೆಯಿರುವ ಕಡೆ ಶೌಚಾಲಯಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಹಲವು ಕಾಲೇಜುಗಳ ಪ್ರಾಚಾರ್ಯರು ವಿಜ್ಞಾನ ವಿಭಾಗ ನೀಡುವಂತೆ ಪ್ರಸ್ತಾವ ಸಲ್ಲಿಸಿದ್ದು ಅದನ್ನು ಮೇಲಧಿಕಾರಿಗಳಿಗೆ ಕಳುಹಿಸಲಾಗಿದೆ. ಪಿ.ಯು. ಹಂತದ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ವಿಶೇಷ ಆದ್ಯತೆ ಮತ್ತು ಅನುದಾನ ನೀಡುತ್ತಿದ್ದು ಈ ವರ್ಷದಲ್ಲಿಯೇ ಸಮಸ್ಯೆಗಳಿಗೆ ಗರಿಷ್ಠ ಪರಿಹಾರ ಸಿಗುತ್ತದೆ’ ಎಂದು ಹೇಳಿದರು. ಜಿಲ್ಲೆಯಲ್ಲಿ 46 ಸರ್ಕಾರಿ ಪಿಯು ಕಾಲೇಜುಗಳಿದ್ದು ಮಂಜೂರು ಹುದ್ದೆ 371 ಇವೆ. 215 ಜನ ಕಾಯಂ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಉಳಿದೆಡೆ ಅತಿಥಿಗಳೇ ಆಧಾರವಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT