ಕುಷ್ಟಗಿ: ಕೃಷಿ, ತೋಟಗಾರಿಕೆ ಲಾಭದಾಯಕವಾಗಬೇಕಿದ್ದರೆ ರೈತರು ಬೆಳೆಗಳಲ್ಲಿ ವೈವಿಧ್ಯತೆ ಅನುಸರಿಸಬೇಕು ಮತ್ತು ಉಪ ಕಸುಬುಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಾಲ್ಲೂಕಿನ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಎಸ್.ಎಸ್.ಪಾಟೀಲ ಹೇಳಿದರು.
ಆರ್ಥಿಕ ಸಾಕ್ಷರತೆ ಮತ್ತು ರೈತರಿಗೆ ಬ್ಯಾಂಕ್ ಹಾಗೂ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ತಾಲ್ಲೂಕಿನ ಗುಮಗೇರಾ ಗ್ರಾಮದಲ್ಲಿ ಮಂಗಳವಾರ ನಡೆದ ರೈತರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಮಾಹಿತಿ ನೀಡಿದ ಅವರು, ‘ಕೃಷಿ ಕ್ಷೇತ್ರದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿವೆ. ಹಣ್ಣು, ತರಕಾರಿ, ವೈಜ್ಞಾನಿಕ ರೀತಿಯಲ್ಲಿ ಹೈನುಗಾರಿಕೆ, ಕುರಿ, ಮೇಕೆ, ಕೋಳಿ ಸಾಕಾಣಿಕೆ, ಎರೆಹುಳು ಗೊಬ್ಬರ ತಯಾರಿಕೆ ಇತರೆ ಉಪ ಕಸಬುಗಳನ್ನು ಆರ್ಥಿಕ ಬೆಳವಣಿಗೆಗೆ ಪೂರಕವಾಗುತ್ತವೆ’ ಎಂದರು.
‘ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ ದೊರೆಯುತ್ತದೆ. ಅದೇ ರೀತಿ ರೈತರು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಅದರಿಂದ ಬ್ಯಾಂಕುಗಳು ಇತರೆ ರೈತರಿಗೆ ಸಾಲ ಸೌಲಭ್ಯ ನೀಡುವುದಕ್ಕೆ ಸಾಧ್ಯವಾಗುತ್ತದೆ’ ಎಂದರು.
ಗ್ರಾಮದ ರೈತರು, ನರೇಗಾ ಮತ್ತಿತರ ಕೂಲಿಕಾರರು, ಮಹಿಳೆಯರು ಸಭೆಯಲ್ಲಿದ್ದರು.
ಶಿರಗುಂಪಿ ಗ್ರಾಮದಲ್ಲಿ ನಡೆದ ಆರ್ಥಿಕ ಸಾಕ್ಷರತಾ ಮಾಹಿತಿ ಕಾರ್ಯಾಗಾರದಲ್ಲಿ ಸ್ವಸಹಾಯ ಗುಂಪುಗಳ ಮಹಿಳೆಯರಿಗೆ ಆರ್ಥಿಕ ಉಳಿತಾಯ, ಆದಾಯದ ಮಿತಿಯೊಳಗೆ ಖರ್ಚುಗಳನ್ನು ಪೂರೈಸುವುದು ಸೇರಿದಂತೆ ಮಾಹಿತಿ ನೀಡಲಾಯಿತು. ಸಂಜೀವಿನಿ ಸ್ವಸಹಾಯ ಗುಂಪಿನ ಮೇಲ್ವಿಚಾರಕ ಕೆ.ವಿಜಯಕುಮಾರ, ಭಾರತಿ ಇತರರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.