ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ದಿನಸಿ ತುಟ್ಟಿ, ತರಕಾರಿ ಸಸ್ತಾ

ಹೂ, ಹಣ್ಣು ಬೆಳೆಗಾರರಿಗೆ ತಪ್ಪದ ತೊಂದರೆ; ಬಡ ಕುಟುಂಬಗಳಿಗೆ ಜೀವನ ನಿರ್ವಹಣೆಯ ಸಂಕಷ್ಟ
Last Updated 2 ಮೇ 2021, 19:30 IST
ಅಕ್ಷರ ಗಾತ್ರ

ಕೊಪ್ಪಳ: ಎರಡನೇ ಅಲೆ ವೇಗವಾಗಿ ಹಬ್ಬುತ್ತಿರುವ ಕಾರಣ ಸರ್ಕಾರ 14 ದಿನ ಲಾಕ್‌ಡೌನ್‌ ಮಾಡಿದ್ದು, ಕೆಲವು ಅಗತ್ಯ ವಸ್ತುಗಳ ಮಾರಾಟಕ್ಕೆ ಅನುಕೂಲ ಮಾಡಿಕೊಟ್ಟಿದೆ. ಆದರೆ, ಲಾಕ್‌ಡೌನ್‌ನ್ನೇ ವರವಾಗಿಸಿಕೊಂಡ ಕೆಲ ವ್ಯಾಪಾರಿಗಳು ಅನಗತ್ಯವಾಗಿ ದರ ಹೆಚ್ಚು ಮಾಡಿರುವುದು ಜನರಿಗೆ ಮತ್ತಷ್ಟು ಸಂಕಷ್ಟ ತಂದಿದೆ.

ಯಾವುದೇ ದಿನಸಿ ಸೇರಿದಂತೆ ವಸ್ತುಗಳ ದರವನ್ನು ಹೆಚ್ಚಳ ಮಾಡಿ, ಮಾರದಂತೆ ಸರ್ಕಾರ ಸೂಚನೆ ನೀಡಿದ್ದರೂ ದಲ್ಲಾಳಿಗಳು, ವ್ಯಾಪಾರಸ್ಥರು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರುತ್ತಿದ್ದಾರೆ. ರೀಟೇಲ್‌ ವ್ಯಾಪಾರಸ್ಥರು ಜನರ ಮೇಲೆ ಅನಿವಾರ್ಯವಾಗಿ ದರ ಏರಿಕೆ ಬಿಸಿ ಮೂಡಿಸಿದ್ದಾರೆ.

ಇದರಿಂದ ನಿತ್ಯ ಜನರು ಮತ್ತು ವ್ಯಾಪಾರಿಗಳ ನಡುವೆ ವಾಗ್ವಾದ ನಡೆಯುತ್ತಿದ್ದು, ‘ಬೇಕಾದರೆ ತೆಗೆದುಕೊಳ್ಳಿ, ಇಲ್ಲದಿದ್ದರೆ ನಮ್ಮಲ್ಲಿ ಸ್ಟಾಕ್‌ ಇಲ್ಲ' ಎಂದು ಉತ್ತರ ನೀಡಿ ಮರಳಿ ಕಳುಹಿಸುತ್ತಾರೆ. ಗ್ರಾಹಕರು ಅನಿವಾರ್ಯವಾಗಿ ವ್ಯಾಪಾರಸ್ಥರು ಹೇಳಿದ ದರಕ್ಕೆ ಖರೀದಿ ಮಾಡಲೇಬೇಕಿದೆ.

ಅಗತ್ಯ ವಸ್ತುಗಳ ಬೆಲೆ ನಿರಂತರ ಏರಿಕೆ ಆಗುತ್ತಿರುವುದು ಜನಸಾಮಾನ್ಯರ ಮತ್ತು ಕಡು ಬಡತನದ ಕುಟುಂಬಗಳಲ್ಲಿ ಜೀವನ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ.

ಹೆಸರು ₹ 100, ಅಲಸಂದಿ ₹ 70, ಜೋಳ ₹ 45, ತೊಗರಿ ಬೇಳೆ ₹ 110, ಶೇಂಗಾ ಕಾಳು ₹ 110, ಗೋಧಿ ಹಿಟ್ಟು ₹55, ಉದ್ದಿನ ಬೇಳೆ₹ 100ಕಡಲೆಹಿಟ್ಟು ₹ 100 ರಂತೆ ಪ್ರತಿ ಕೆ.ಜಿಗೆ ಹೆಚ್ಚಳವಾಗಿದೆ. ಪೆಟ್ರೋಲ್ ₹ 94.81, ಡೀಸೆಲ್‍ ₹ 86.94, ವಾಹನ ಬಳಕೆ ಗ್ಯಾಸ್‍ ₹ 45.16 ಪ್ರತಿ ಲೀಟರ್‌ ಮಾರಾಟವಾಗುತ್ತಿದೆ.

ತರಕಾರಿ ಕಡಿಮೆ: ಕೃಷಿಕರು ಕೊಯ್ಲಿಗೆ ಬಂದ ತರಕಾರಿ ಬೆಳೆಯನ್ನು ಅಂದಂದೇ ಕೊಯ್ಲು ಮಾಡಿ ಮಾರುಕಟ್ಟೆಗೆ ತರಬೇಕಿದೆ. ಆದರೆ ಮಾರಾಟಕ್ಕೆ ವಿವಿಧ ತೊಂದರೆ ಕೂಡಾ ಇವೆ. ಬೆಳಿಗ್ಗೆ 6ರಿಂದ 10ರವರೆಗೆ ಲಾಕ್‌ಡೌನ್‌ ಮಾರ್ಗಸೂಚಿ ಅನ್ವಯ ಎಪಿಎಂಸಿ ಯಾರ್ಡ್‌ಗಳಲ್ಲಿ ಮಾರಾಟ ಮಾಡಬೇಕಾಗುತ್ತದೆ. ಆದರೆ, ಸಮಯದ ಅಭಾವದಿಂದ ಮಾರಾಟವಾಗದೇ ಹಾಗೆ ರಸ್ತೆಗೆ ಚೆಲ್ಲಿ ಹೋಗುತ್ತಿರುವುದು, ಸಿಕ್ಕ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ.

ವಿಪರೀತ ಬಿಸಿಲಿನಲ್ಲಿ ಹೊತ್ತು ಮಾರುವುದು ಸಣ್ಣ ವ್ಯಾಪಾರಿಗಳಿಗೆ ತೊಂದರೆ, ವಾಹನದ ಮೂಲಕ ಮನೆ, ಮನೆಗೆ ತಂದು ಕೊಟ್ಟರೂ ಪೆಟ್ರೋಲ್‌, ಡೀಸೆಲ್ ಬೆಲೆ ಏರಿಕೆಯಿಂದ ನಷ್ಟ ಉಂಟಾಗುತ್ತಿದೆ. ತಪ್ಪಲು ಪಲ್ಯ ಒಂದು ಸಿವುಡು ಕೊತ್ತಂಬರಿ ಗಿಡಕ್ಕೆ ಮೊದಲು ₹ 10ಕ್ಕೆ ಕೊಡುತ್ತಿದ್ದರು. ಈಗ 2-3 ಸಿವುಡುಗಳನ್ನು ನೀಡುತ್ತಾರೆ. ಬಹುತೇಕ ಈರುಳ್ಳಿ ತಪ್ಪಲು, ಮೂಲಂಗಿ, ಮೆಂತೆ, ರಾಜಗೀರ,₹ 5ಕ್ಕೆ ದೊರೆಯುತ್ತಿದೆ. ಲಿಂಬೆ ಹಣ್ಣು ಮಾತ್ರ₹ 5ಕ್ಕೆ ಒಂದರಂತೆ ಬೆಲೆ ಏರಿಕೆಯಾಗಿದೆ. ಮೊದಲು₹10ಕ್ಕೆ ಐದು ಲಿಂಬೆ ಹಣ್ಣು ದೊರೆಯುತ್ತಿತ್ತು.

ದವಸ ಧಾನ್ಯ, ದಿನಸಿ, ಹಣ್ಣು ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಭಾರಿ ಪ್ರಮಾಣದ ಏರಿಳಿತ ಕಾಣಿಸಿಕೊಂಡಿದೆ. ಮಧ್ಯಮ ಮತ್ತು ಬಡ ಕುಟುಂಬಸ್ಥರು ಕುಟುಂಬ ನಿರ್ವಹಣೆಗೆ ಪರದಾಡುವಂತಾಗಿದೆ.

‘ಲಾಕ್‍ಡೌನ್‍ ಸಂದರ್ಭದಲ್ಲಿ ಮಾರುಕಟ್ಟೆ ಸಮಸ್ಯೆಯಿಂದ ಸ್ವಲ್ಪ ಮಟ್ಟಿನ ಬೆಲೆ ಏರಿಕೆ ಬಿಸಿ ಮುಟ್ಟಿತ್ತು. ಲಾಕ್‍ಡೌನ್‍ ಸಡಿಲಿಕೆ ನಂತರದ ದಿನಗಳಲ್ಲಿ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ಒಂದು ವಾರ ಬೆಲೆ ಹೆಚ್ಚಳ ಕಂಡು ಬಂದರೆ, ಮತ್ತೊಂದು ವಾರ ಬೆಲೆ ಇಳಿಕೆ ಆಗುತ್ತಿದ್ದು. ಹೀಗಾಗಿ ಬೆಲೆ ಏರಿಕೆ ಬಿಸಿ ಇಲ್ಲ’ ಎಂದು ತರಕಾರಿ ವ್ಯಾಪಾರಿಹುಲಗಪ್ಪ ಹೇಳುತ್ತಾರೆ.

‘ದಿನಸಿ (ಕಿರಾಣಿ) ವಸ್ತುಗಳ ಬೆಲೆಯಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಅಂತಹ ಯಾವುದೇ ಬೆಲೆ ಏರಿಕೆ ಬಿಸಿ ತಟ್ಟಿಲ್ಲ. ಆದರೆ, ಅಡುಗೆಗೆ ಬಳಸುವ ವಿವಿಧ ಬಗೆಯ ಅಡುಗೆ ಎಣ್ಣೆಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೆ ಸಾಗಿದೆ. ಇದರಿಂದ ವ್ಯಾಪಾರಸ್ಥರಿಗೆ ತೊಂದರೆ ಆಗುವ ಜೊತೆಗೆ ಗ್ರಾಹಕರು ಸಂಕಷ್ಟ ಎದುರಿಸುವಂತಾಗಿದೆ’ ಎಂದು ಕಿರಾಣಿ ವ್ಯಾಪಾರಿಕಾಂತಿಲಾಲ್ ಜೈನ್ ಹೇಳುತ್ತಾರೆ.

ಅಟೋಮೊಬೈಲ್, ಗ್ಯಾರೇಜ್, ಹೊಟೇಲ್, ಖಾನಾವಳಿ, ಕ್ಷೌರದ ಅಂಗಡಿ ವ್ಯಾಪಾರ ಬಹುತೇಕ ಸಂಕಷ್ಟದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT