ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಡೂರು ಗ್ರಾ.ಪಂ.ನಲ್ಲಿ ಭ್ರಷ್ಟಾಚಾರ ಆರೋಪ

ತನಿಖೆ ಕೈಗೊಳ್ಳುವತನಕ ಪ್ರತಿಭಟನೆ
Published 19 ಜೂನ್ 2024, 15:33 IST
Last Updated 19 ಜೂನ್ 2024, 15:33 IST
ಅಕ್ಷರ ಗಾತ್ರ

ಕಾರಟಗಿ: ‘ತಾಲ್ಲೂಕಿನ ಗುಂಡೂರು ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಸಮಗ್ರ ತನಿಖೆ ನಡೆಸಿ, ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ನಿರಂತರವಾಗಿರುತ್ತದೆ’ ಎಂದು ಕರ್ನಾಟಕ ಸ್ವಾಭಿಮಾನ ರಕ್ಷಣಾ ವೇದಿಕೆ ಸೇನೆ ಸಹಯೋಗದಲ್ಲಿ ಗ್ರಾ.ಪಂ. ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.

ಮೇ 21ರಂದು ಗ್ರಾಪಂನಲ್ಲಿ ನಡೆದ ಅವ್ಯವಹಾರದ ಕುರಿತು ತನಿಖೆ ನಡೆಸುವಂತೆ ಸದಸ್ಯರು ಕಾರಟಗಿ ತಾಪಂ ಇಒಗೆ ಮನವಿ ಸಲ್ಲಿಸಿದ್ದರು. ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಜೂನ್‌ 12ರಂದು ಕೊಪ್ಪಳ ಜಿಪಂ ಸಿಇಒ ರಾಹುಲ್‌ ರತ್ನಂ ಪಾಂಡೇಯಗೆ ಮನವಿ ಸಲ್ಲಿಸಿದ್ದರು.

ನರೇಗಾದಲ್ಲಿ ಸುಮಾರು ₹50ಲಕ್ಷ ವೆಚ್ಚದಲ್ಲಿ ಕೈಗೊಂಡ ಕಾಮಗಾರಿಗಳ ಹಣದ ವಿವರ ನೀಡುತ್ತಿಲ್ಲ. ಗ್ರಾಮದಲ್ಲಿ ಕರ ವಸೂಲಿ ಮಾಡಿದ ಹಣವನ್ನು ಬೇಕಾಬಿಟ್ಟಿಯಾಗಿ ಬಳಕೆ ಮಾಡಿದ್ದಾರೆ. ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಒ ಚೆಕ್‌ಗಳ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವಿವಿಧ ಆರೋಪಗಳ ಬಗ್ಗೆ ಗ್ರಾಪಂ ಉಪಾಧ್ಯಕ್ಷೆ, ಸದಸ್ಯರು ದೂರು ಸಲ್ಲಿಸಿದ್ದರು.

ಸಿಇಒ ಭ್ರಷ್ಟಾಚಾರ ತನಿಖೆಗೆ ಅಧಿಕಾರಿಗಳ ತಂಡ ರಚಿಸಿ, ತಕ್ಷಣ ವರದಿ ಒಪ್ಪಿಸುವಂತೆ ಸೂಚಿಸಿದ್ದರು.  ಆದರೆ ಈವರೆಗೆ ಯಾವುದೇ ಕ್ರಮ ಜರುಗಿಲ್ಲ. ಅನಿವಾರ್ಯವಾಗಿ ಗ್ರಾಪಂ ಸದಸ್ಯರೇ ಮತ್ತೆ ಹೋರಾಟದ ಹಾದಿ ತುಳಿದಿದ್ದಾರೆ. ಸ್ಥಳಕ್ಕೆ ತಾಪಂ ಸಹಾಯಕ ನಿರ್ದೇಶಕಿ ವೈ.ವನಜಾ ಭೇಟಿ ನೀಡಿ, ಮನವೊಲಿಕೆಯ ಯತ್ನ ವಿಫಲವಾಯಿತು. ತನಿಖೆ ನಡೆಸಿ ವರದಿ ಪಡೆದ ಬಳಿಕವೇ ನಾವು ಪ್ರತಿಭಟನೆ ಕೈ ಬಿಡುವುದಾಗಿ ಸದಸ್ಯರು ಪಟ್ಟು ಹಿಡಿದಿದ್ದಾರೆ.

ಗ್ರಾಪಂ ಉಪಾಧ್ಯಕ್ಷೆ ಸತ್ಯಾವತಿ ಸದಸ್ಯರಾದ ವೀರೇಶ ಮುಸಾಲಿ, ಎಂ. ಹಸೇನಸಾಬ್, ಎಂವಿ.ವಿ. ರಮೇಶ್, ಹುಸೇನಪ್ಪ, ಬಸವರಾಜ, ಚನ್ನಮ್ಮ, ಗೌರಮ್ಮ, ಹನುಮಮ್ಮ, ರಮೇಶ್ ಮೇಕೆ, ಆಂಜನೇಯ, ದೇವಮ್ಮ, ತೇಜಶ್ಕುಮಾರ, ನಾರಾಯಣಪ್ಪ, ಸರೋಜಮ್ಮ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ ರಾಜ್ಯ ಮಹಿಳಾ ಕಾರ್ಯದರ್ಶಿ ಎನ್. ಎಂ. ಸುವರ್ಣಮ್ಮ, ಜಿಲ್ಲಾಧ್ಯಕ್ಷ ಸಂತೋಷ್, ಜಿಲ್ಲಾಉಪಾಧ್ಯಕ್ಷ ಶರಣಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT