ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿಯೇ ಮಾದರಿ ಭವನ

ನವೀಕೃತ ಗುರುಭವನ ಉದ್ಘಾಟನೆ: ಶಾಸಕ ಅಮರೇಗೌಡ ಹೇಳಿಕೆ
Last Updated 6 ಜುಲೈ 2021, 3:24 IST
ಅಕ್ಷರ ಗಾತ್ರ

ಕುಷ್ಟಗಿ: ‘ದುಸ್ಥಿತಿಗೀಡಾಗಿದ್ದ ಇಲ್ಲಿಯ ‘ಗುರುಭವನ’ವನ್ನು ಸರ್ಕಾರದ ನೆರವಿಲ್ಲದೆ ನವೀಕರಣಗೊಳಿಸುವ ಮೂಲಕ ಪುನಃ ಸುಸ್ಥಿತಿಗೆ ತರುವ ನಿಟ್ಟಿನಲ್ಲಿ ಸ್ವಯಂ ಪ್ರೇರಣೆಯಿಂದ ಕಾಳಜಿ ವಹಿಸಿದ ಶಿಕ್ಷಕರು ಮತ್ತು ಪತ್ತಿನ ಸಹಕಾರ ಸಂಘದ ಪ್ರಯತ್ನ ಜಿಲ್ಲೆಯಲ್ಲಿಯೇ ಮಾದರಿಯಾಗಿದೆ’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಪ್ರಾಥಮಿಕ ಶಾಲೆ ಶಿಕ್ಷಕರ ಪತ್ತಿನ ಸಹಕಾರ ಸಂಘ ಮತ್ತು ಸಮಾನ ಮನಸ್ಕ ಶಿಕ್ಷಕರು ಸೇರಿ ನವೀಕರಣಗೊಳಿಸಿರುವ ಗುರುಭವನದ ಪ್ರಾರಂಭೋತ್ಸವವನ್ನು ಸಾಂಕೇತಿಕವಾಗಿ ನೆರವೇರಿಸಿ ಮಾತನಾಡಿದರು.

ಇಡೀ ಜಿಲ್ಲೆಯಲ್ಲಿ ಗುರುಭವನಗಳು ಅವ್ಯವಸ್ಥೆಯಿಂದ ಕೂಡಿದ್ದರೆ ಅಪವಾದ ಎಂಬಂತೆ ಈ ತಾಲ್ಲೂಕಿನ ಕಟ್ಟಡ ಮಾತ್ರ ಮತ್ತೆ ಕಳೆಗಟ್ಟಿರುವುದರ ಹಿಂದೆ ಶಿಕ್ಷಕರು ಮತ್ತು ಇಲಾಖೆ ಕಳಕಳಿ ಎದ್ದು ಕಾಣುತ್ತಿದೆ. ಜಿಲ್ಲೆಯಲ್ಲಿ ಇದೊಂದೇ ಉತ್ತಮ ಗುರುಭವನ ಎಂಬುದು ಈ ತಾಲ್ಲೂಕಿನ ಹೆಮ್ಮೆಯ ಸಂಗತಿ ಎಂಬುದು ತಿಳಿಯಿತು ಎಂದು ಗುರುಭವನ ವಿಷಯದ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾದ ವಿಶೇಷ ವರದಿಯನ್ನು ಉಲ್ಲೇಖಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಣ ಕ್ಷೇತ್ರದ ಬೆಳವಣಿಗೆ ಮತ್ತು ಶಿಕ್ಷಕರ ಪಾತ್ರದ ಕುರಿತು ಅನಿಸಿಕೆ ಹಂಚಿಕೊಂಡ ಬಯ್ಯಾಪುರ, ತಾಲ್ಲೂಕಿನಲ್ಲಿ ಶೈಕ್ಷಣಿಕ ಕ್ರಾಂತಿ ಆಗಬೇಕೆಂಬ ಜನರ ಆಶೋತ್ತರ ಈಡೇರಿಸುವ ನಿಟ್ಟಿನಲ್ಲಿ ಶಿಕ್ಷಕರು ಚಿಂತನೆ ನಡೆಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಸುಗಮ ಮತ್ತು ಪಾರದರ್ಶಕ ರೀತಿಯಲ್ಲಿ ನಡೆಸಬೇಕು. ಕೋವಿಡ್‌ ನಿಯಮಗಳನ್ನು ಚಾಚೂತಪ್ಪದೆ ಅನುಸರಿಸುವಂತಾಗಲು ಅಗತ್ಯ ಮುಂಜಾಗ್ರತೆ ವಹಿಸಬೇಕು. ಉತ್ತಮ ಫಲಿತಾಂಶ ಬರುವುದಕ್ಕೆ ಪೂರಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ ಸಲ್ಲಿಸಿದ ಮನವಿಗೆ ಪ್ರತಿಕ್ರಿಯಿಸಿದ ಶಾಸಕ,‘ ಗುರುಭವನದಕ್ಕೆ ಅಗತ್ಯವಾಗಿರುವ ಮೂಲಸೌಕರ್ಯ ಕಲ್ಪಿಸಲು ಸರ್ಕಾರದಿಂದ ₹10 ಲಕ್ಷ ಅನುದಾನ ಮಂಜೂರು ಮಾಡಿಸುವ ಭರವಸೆ ನೀಡಿದರು.

ಕಾರ್ಯಕ್ರಮದ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಚನ್ನಬಸಪ್ಪ ಹಾಗೂ ಇತರರು ಮಾತನಾಡಿದರು.

ಬಿಆರ್‌ಸಿ ಸಮನ್ವಯಾಧಿಕಾರಿ ಶ್ರೀಶೈಲ ಸೋಮನಕಟ್ಟಿ, ಧರ್ಮಕುಮಾರ ಕಂಬಳಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಅಹ್ಮದ್‌ ಹುಸೇನ್, ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಣ ಪೂಜಾರ, ಪ್ರಾಥಮಿಕ ಶಾಲೆಗಳ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಲಕ್ಕಲಕಟ್ಟಿ, ಹನುಮಂತಪ್ಪ ವಾಲ್ಮೀಕಿ ಸೇರಿದಂತೆ ಇಲಾಖೆ ಸಿಬ್ಬಂದಿ ಹಾಗೂ ಶಿಕ್ಷಕರು ಇದ್ದರು.

ಶಿಕ್ಷಕ ಜೀವನಸಾಬ್ ವಾಲೀಕಾರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT