ಅಂಜನಾದ್ರಿ: ಮಾಲಾಧಾರಿಗಳ ಸಂಭ್ರಮ- ಮೊಳಗಿದ ‘ಜೈ ಶ್ರೀರಾಮ್’ ಘೋಷಣೆ

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಸೋಮವಾರ ನಡೆದ ಹನುಮಮಾಲೆ ವಿಸರ್ಜನೆ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ಅಂಜನಾದ್ರಿ ಬೆಟ್ಟ ಸಂಪೂರ್ಣವಾಗಿ ಕೇಸರಿಮಯವಾಗಿತ್ತು. ಭಗವಾಧ್ವಜಗಳು ರಾರಾಜಿಸಿದವು.
ಮಾಲೆ ವಿಸರ್ಜನೆ ವೇಳೆ ಭಕ್ತರು, ‘ಜೈ ಶ್ರೀರಾಮ್’ ಎಂದು ಘೋಷಣೆ ಮೊಳಗಿಸಿ
ದರು. ರಾಮನಾಮ ಹಾಡಿ ಸಂಭ್ರಮಿಸಿದರು. ಸಂಕೀರ್ತನೆ ಯಾತ್ರೆ ಕೈಗೊಂಡು ಆಂಜನೇಯನ ದರ್ಶನ ಪಡೆದರು.
ವಿವಿಧ ಜಿಲ್ಲೆಗಳೇ ಅಲ್ಲದೇ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಿಂದಲೂ ಮಾಲಾಧಾರಿಗಳು ಪಾಲ್ಗೊಂಡಿದ್ದರು. ಬಹುತೇಕ ಮಂದಿ ದಿ.ಪುನೀತ್ ರಾಜಕುಮಾರ್ ಅವರ ಚಿತ್ರ, ಇನ್ನೂ ಕೆಲವರು ವೀರ ಸಾರ್ವಕರ್ ಭಾವಚಿತ್ರ ಪ್ರದರ್ಶಿಸಿದರು.
ಜನಸಂದಣಿ ನಿಯಂತ್ರಿಸಲು ಭಾನುವಾರ ರಾತ್ರಿ 11ರಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಗದಗ, ಬಳ್ಳಾರಿ, ಹೊಸಪೇಟೆ ಮತ್ತು ಕೊಪ್ಪಳ ಜಿಲ್ಲೆಗಳಿಂದ ಭಕ್ತರು ಪಾದಯಾತ್ರೆಯಲ್ಲಿ ಬಂದರು. ಅವರಿಗಾಗಿ ಕೆಲ ಸಂಘಟನೆಯವರು ಅಲ್ಲಲ್ಲಿ ಕುಡಿಯುವ ನೀರು ಹಾಗೂ ಊಟದ ವ್ಯವಸ್ಥೆ ಮಾಡಿದ್ದರು. ಬೆಟ್ಟದ ಹಿಂಭಾಗ ಊಟದ ವ್ಯವಸ್ಥೆ ಮಾಡಲಾಗಿತ್ತು. ಮುಜರಾಯಿ ಖಾತೆ ಸಚಿವ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಸಂಸದ ಸಂಗಣ್ಣ ಕರಡಿ, ಮಾಲಾಧಾರಿಯಾಗಿದ್ದ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಪೂಜೆ ಸಲ್ಲಿಸಿದರು.
ಮಾಲೆ ಹಾಕಿದ ಜಾಫರ್ ಸೈಯದ್
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ನರಸಲಗಿ ಗ್ರಾಮದ ಇಮಾಮ್ ಜಾಫರ್ ಚಪ್ಪರಬಂದ್ ಅವರು ಮಾಲೆ ಧರಿಸಿ ಪಾಲ್ಗೊಂಡರು. ‘ನನ್ನ ಕುಟುಂಬದವರು ಮೊದಲಿನಿಂದಲೂ ಹನುಮಂತನ ಭಕ್ತರು. 1994ರಲ್ಲಿ 48 ದಿನ ಅಯ್ಯಪ್ಪಸ್ವಾಮಿ ಮಾಲೆ ಹಾಕಿ, ಶಬರಿಮಲೆಗೆ ತೆರಳಿದ್ದೆ. ಇದು ನನಗೆ ಖುಷಿ ಕೊಟ್ಟಿದೆ’ ಎಂದು ಅವರು ಪ್ರತಿಕ್ರಿಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.