ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಿಹೈದರ ಘರ್ಷಣೆ: ಮತ್ತಿಬ್ಬರ ಬಂಧನ, ಬಂಧಿತರ ಒಟ್ಟು ಸಂಖ್ಯೆ 24ಕ್ಕೆ ಏರಿಕೆ

Last Updated 14 ಆಗಸ್ಟ್ 2022, 13:59 IST
ಅಕ್ಷರ ಗಾತ್ರ

ಕನಕಗಿರಿ (ಕೊಪ್ಪಳ): ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ಈಚೆಗೆ ನಡೆದ ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ತಡರಾತ್ರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರ ಒಟ್ಟು ಸಂಖ್ಯೆ 24ಕ್ಕೆ ಏರಿಕೆಯಾಗಿದೆ.

ಘರ್ಷಣೆಯಲ್ಲಿ ಮೃತಪಟ್ಟ ಪಾಷವಲಿ ಮಾಳಿಗದ್ದಿ ಹಾಗೂ ಯಂಕಪ್ಪ ತಳವಾರ ಕೊಲೆ ಪ್ರಕರಣದ ಎರಡೂ ಕಡೆಯ ಆರೋಪಿಗಳನ್ನು ಬಂಧಿಸಲಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕನಕಗಿರಿ ಠಾಣೆಯ ಪೊಲೀಸ್‌ ಸಿಬ್ಬಂದಿ ಗವಿಸಿದ್ದಯ್ಯ ದೂರು ದಾಖಲಿಸಿದ್ದಾರೆ. ಘರ್ಷಣೆಗೆ ಸಂಬಂಧಿಸಿ ದಾಖಲಾದ ಮೂರನೇ ಎಫ್‌ಐಆರ್‌ ಇದಾಗಿದೆ.

‘ಹುಲಿಹೈದರ ಗ್ರಾಮದಲ್ಲಿ ಶಾಂತಿ ಕಾಪಾಡಿಕೊಳ್ಳಿ ಎಂದು ಹೇಳಲು ಹೋದಾಗ ಅಲ್ಲಿನ 150ರಿಂದ 200 ಜನ ಅವಾಚ್ಯ ಪದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ. ಅಂಗಿ ಹಿಡಿದು ಎಳೆದಾಡಿದ್ದಾರೆ’ ಎಂದು ಗವಿಸಿದ್ದಯ್ಯ ದೂರಿನಲ್ಲಿ ತಿಳಿಸಿದ್ದಾರೆ.

ಸಾಂತ್ವಾನ ಹೇಳಿದ ತಂಗಡಗಿ: ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಭಾನುವಾರ ಯಂಕಪ್ಪ ಅವರ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವಾನ ಹೇಳಿದರು.

ಪಟ್ಟಣದದಲ್ಲಿ ನೆಲೆಸಿರುವ ಪಾಷವಲಿ ಪತ್ನಿ ಹಾಗೂ ಕರಡೋಣದ ಮಗಳ ಮನೆಯಲ್ಲಿರುವ ಯಂಕಪ್ಪ ಅವರ ಪತ್ನಿ ಹಂಪಮ್ಮ ತಳವಾರ ಅವರಿಗೆ ವೈಯಕ್ತಿಕವಾಗಿ ತಲಾ ₹25 ಸಾವಿರ ನೆರವು ನೀಡಿದರು.

‘ಪತಿ ಅಂತ್ಯಕ್ರಿಯೆಗೆ ಬಂದವರನ್ನು ಪೊಲೀಸರು ಬಂಧಿಸಿದ್ದಾರೆ, ಮನೆಯಲ್ಲಿ ಮೈದುನ, ಮಕ್ಕಳು, ಸೊಸೆಯಂದಿರು ಯಾರು ಇಲ್ಲ. ಹುಲಿಹೈದರ ಮನೆ ಖಾಲಿಯಾಗಿದೆ‘ ಎಂದು ಹಂಪಮ್ಮ ಕಣ್ಣೀರಾದರು.

ಹಲ್ಲೆ ಕ್ರಮಕ್ಕೆ ಮನವಿ: ಘರ್ಷಣೆಯಲ್ಲಿ ಗಾಯಗೊಂಡ ಧರ್ಮಣ್ಣ ಅವರ ಸಂಬಂಧಿ ಹುಸೇನಪ್ಪ ಹಲ್ಲೆ ಮಾಡಿದವರ ವಿರುದ್ದ ಕ್ರಮ ಜರುಗಿಸುವಂತೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಈಗಾಗಲೇ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳು ದೂರುದಾರರಿಗೆ ಹಿಂಬರಹ ನೀಡಿದ್ದಾರೆ.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ವೀರೇಶ ಸಮಗಂಡಿ, ಅಮರೇಶ ಗೋನಾಳ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಪಟ್ಟಣ ಪಂಚಾಯಿತಿ ಸದಸ್ಯರಾದ ರಾಜಾಸಾಬ ನಂದಾಪುರ, ಸಂಗಪ್ಪ ಸಜ್ಜನ್, ಅನಿಲಕುಮಾರ ಬಿಜ್ಜಳ, ಶರಣೆಗೌಡ ಪಾಟೀಲ, ಕಂಠಿ ನಾಯಕ, ಪ್ರಮುಖರಾದ ಹೊನ್ನೂರುಸಾಬ ಮೇಸ್ತ್ರಿ, ರಾಮನಗೌಡ ಬುನ್ನಟ್ಟಿ, ರವಿ ಪಾಟೀಲ ಇತರರು ಇದ್ದರು.


‍‘ಹೆಣದ ಮೇಲೆ ರಾಜಕಾರಣ ಮಾಡಲ್ಲ‘

ಕನಕಗಿರಿ: ‘ಹೆಣದ ಮೇಲೆ ರಾಜಕಾರಣ ಮಾಡುವ ಜಾಯಮಾನ ನನ್ನದಲ್ಲ. ಇಂಥ ಘಟನೆಗಳು ಎಲ್ಲಿಯೂ ನಡೆಯಬಾರದು. ಇದರಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು. ಅಮಾಯಕರನ್ನು ಬಂಧಿಸಬಾರದು, ಪೊಲೀಸ್ ಅಧಿಕಾರಿಗಳು ಶಾಂತಿ ಸಭೆ ನಡೆಸಿ ಗ್ರಾಮವನ್ನು ಸಹಜ ಸ್ಥಿತಿಗೆ ತರಬೇಕು’ ಎಂದು ಶಿವರಾಜ ತಂಗಡಗಿ ಆಗ್ರಹಿಸಿದರು.

‘ಮೃತಪಟ್ಟ ಹಾಗೂ ಗಾಯಗೊಂಡ ವ್ಯಕ್ತಿಗಳ ಕುಟುಂಬದವರಿಗೆ ಸರ್ಕಾರ ಪರಿಹಾರ ನೀಡಬೇಕು’ ಎಂದರು.
ಹುಲಿಹೈದರ ಘಟನೆಗೆ ಸಂಬಂಧಿಸಿದಂತೆ ಒಟ್ಟು 24 ಜನ ಆರೋಪಿಗಳನ್ನು ಬಂಧಿಸಲಾಗಿದೆ. ತಲೆ ಮರೆಸಿಕೊಂಡಿರುವ ಇನ್ನಷ್ಟು ಜನ ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.
-ಅರುಣಾಂಗ್ಷು ಗಿರಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT