ಕನಕಗಿರಿ: ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ 1ನೇ ವಾರ್ಡ್‌ನ ಸದಸ್ಯೆ ಹುಸೇನಬೀ ಶಾಮೀದಸಾಬ ಚಳ್ಳಮರದ ಹಾಗೂ ಉಪಾಧ್ಯಕ್ಷರಾಗಿ ಐದನೇ ವಾರ್ಡ್ ಸದಸ್ಯ ಕಂಠಿರಂಗಪ್ಪ ಹನುಮಂತಪ್ಪ ನಾಯಕ ಅವಿರೋಧವಾಗಿ ಮಂಗಳವಾರ ಆಯ್ಕೆಯಾದರು.
ಹಿಂದುಳಿದ ವರ್ಗ ‘ಅ’ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚಳ್ಳಮರದ ಹಾಗೂ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಉಪಾಧ್ಯಕ್ಷ ಹುದ್ದೆಗೆ ನಾಯಕ ಅವರು ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆಗಿರುವ ತಹಶೀಲ್ದಾರ್
ವಿಶ್ವನಾಥ ಮುರುಡಿ ಅವರು ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಚುನಾವಣಾ ಪ್ರಕಿಯೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಪಟ್ಟಣ ಪಂಚಾಯಿತಿಯ 17 ಸದಸ್ಯರು ಭಾಗವಹಿಸಿದ್ದರು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಸಚಿವ ತಂಗಡಗಿ, ತಹಶೀಲ್ದಾರ್ ಮುರುಡಿ ಹಾಗೂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗ್ಡೆ ಶುಭ ಕೋರಿದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಬೆಂಬಲಿಗರು ಪಟಾಕಿ ಸಿಡಿಸಿ ಸಂತಸ ವ್ಯಕ್ತಪಡಿಸಿದರು.
ಇಬ್ಬರಿಗೆ ಅಧಿಕಾರ ಹಂಚಿಕೆ: ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಎರಡು ಬಣದಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಎರಡೂ ಬಣದವರ ಮಾತುಗಳನ್ನು ಕೇಳಿಸಿಕೊಂಡಿದ್ದ ತಂಗಡಗಿ ಅವರು ತಮ್ಮದೆ ಸೂತ್ರ ಹಣೆದು ಎರಡು ಬಣದಿಂದ ಬಂಡಾಯಕ್ಕೆ ಅವಕಾಶ ಇಲ್ಲದಂತೆ ನೋಡಿಕೊಂಡರು.ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರು ಹಾಗೂ ಸದಸ್ಯರ ಅಭಿಪ್ರಾಯ ಸಂಗ್ರಹಿಸಿದ ಅವರು 13 ತಿಂಗಳ ಕಾಲ ಚಳ್ಳಮರದ ಹಾಗೂ ಉಳಿದ ಅವಧಿಗೆ ತನುಶ್ರೀ ಅವರಿಗೆ ಅಧಿಕಾರ ಹಂಚಿಕೆ ಮಾಡಲಾಗಿದೆ ಎಂದು ಇಬ್ಬರ ಹೆಸರುಗಳನ್ನು ಪ್ರಕಟಿಸಿದರು.
ಪಿಐ ಎಂ.ಡಿ ಪೈಜುಲ್ಲಾ, ಬಂದೋಬಸ್ತ್ ಒದಗಿಸಿದ್ದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ. ಗಂಗಾಧರಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ವಕ್ತಾರ ಶರಣಬಸಪ್ಪ ಭತ್ತದ, ಜಿ.ಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಸಿದ್ದಪ್ಪ ನೀರ್ಲೂಟಿ, ತಾ.ಪಂ ಮಾಜಿ ಅಧ್ಯಕ್ಷರಾದ ಹೊನ್ನೂರಸಾಬ ಮೇಸ್ತ್ರಿ, ಬಸಂತಗೌಡ, ಪಟ್ಟಣ ಪಂಚಾಯಿತಿ ಸದಸ್ಯರು, ವಿವಿಧ ಘಟಕಗಳ ಅಧ್ಯಕ್ಷರು ಮುಖಂಡರು ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.