ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ವಿಮಾ ಕಂಪನಿಯ ನಿಯಮವೇ ಉರುಳು!

ಬರ ಸಂಕಷ್ಟದಲ್ಲಿ ಮತ್ತೊಂದು ಹೊಡೆತ, ಭತ್ತ ಹಾಳಾದ ರೈತರಿಗೆ ವಿಮೆ ಅನುಮಾನ
Published 18 ನವೆಂಬರ್ 2023, 6:24 IST
Last Updated 18 ನವೆಂಬರ್ 2023, 6:24 IST
ಅಕ್ಷರ ಗಾತ್ರ

ಕೊಪ್ಪಳ: ಮಳೆ ಹಾಗೂ ತೇವಾಂಶದ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಈಗಾಗಲೇ ಬಹುತೇಕ ಬೆಳೆಗಳು ಬಾಡಿಹೋಗಿ ಬರಗಾಲ ಘೋಷಣೆಯಾಗಿದೆ. ಬೇಡವಾದ ಸಮಯಕ್ಕೆ ಮಳೆ ಸುರಿದ ಪರಿಣಾಮ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ಭಾಗದಲ್ಲಿ ವ್ಯಾಪ‍ಕವಾಗಿ ಬೆಳೆಯಲಾಗಿದ್ದ ಭತ್ತ ಕೂಡ ಹಾಳಾಗಿದೆ.

ವಿಮಾ ಕಂಪನಿಯ ನಿಯಮ ಭತ್ತ ಬೆಳೆದ ರೈತರಿಗೆ ಉರುಳಾಗಿ ಪರಿಣಮಿಸಿದ್ದು, ಈ ಬೆಳೆ ಹಾಳಾದ ಬೆಳೆಗಾರರಿಗೆ ವಿಮಾ ಹಣ ಲಭಿಸುವುದು ಈಗಿನ ನಿಯಮದ ಪ್ರಕಾರ ಅನುಮಾನವಿದೆ. ಜಿಲ್ಲೆಯ ಭತ್ತ ಬೆಳೆಗಾರರಿಗೆ ಫ್ಯೂಚರ್‌ ಜನರಿಲಿ ಎನ್ನುವ ಸಂಸ್ಥೆ ವಿಮೆ ಮಾಡಿಸಿಕೊಂಡಿದೆ.

ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್‌. ಅವರು ಇತ್ತೀಚೆಗೆ ವಿಮಾ ಕಂಪನಿಯವರಿಗೆ ಪತ್ರ ಬರೆದಿದ್ದು ‘ಅನಿರೀಕ್ಷಿತ ಹವಾಮಾನ ವೈಪರೀತ್ಯದಿಂದಾಗಿ ಗಂಗಾವತಿ, ಕಾರಟಗಿ, ಕನಕಗಿರಿ ಮತ್ತು ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಭಾಗದಲ್ಲಿ ಕಟಾವು ಪೂರ್ವದಲ್ಲಿಯೇ ಭತ್ತ ನೆಲಕಚ್ಚಿದೆ. ಹೆಚ್ಚಿನ ಗಾಳಿ ಮತ್ತು ಮಳೆಯೂ ಆಗಿದ್ದರಿಂದ ಇಳುವರಿ ಪ್ರಮಾಣ ಕಡಿಮೆಯಾಗಲಿದೆ. ಆದ್ದರಿಂದ ರೈತರಿಗೆ ಬೆಳೆ ವಿಮೆ ನೀಡಬೇಕು’ ಎಂದು ಹೇಳಿದ್ದಾರೆ.

ಇದಕ್ಕೆ ಉತ್ತರ ಬರೆದಿರುವ ವಿಮಾ ಕಂಪನಿಯವರು, ‘ನೀರಿನಲ್ಲಿಯೇ ಬೆಳೆಯುವ ಭತ್ತ, ಕಬ್ಬು ಮತ್ತು ಸೆಣಬು ಫಸಲು ಬರುವ ಹಂತದಲ್ಲಿದ್ದಾಗ ಹಾಳಾದರೆ ಪರಿಹಾರ ಸಿಗುವುದಿಲ್ಲ. ಫಸಲು ಬಂದು ಬಳಿಕ ಪ್ರಕೃತಿ ವಿಕೋಪದಿಂದ ಹಾಳಾದರೆ ಮಾತ್ರ ಪರಿಹಾರ ಲಭಿಸುತ್ತದೆ’ ಎಂದು ಹೇಳಿದ್ದು, ಮೊದಲೇ ಬರಗಾಲದ ಸಂಕಷ್ಟದಲ್ಲಿರುವ ರೈತರಿಗೆ ವಿಮಾ ಕಂಪನಿಯ ಹೇಳಿಕೆ ಮತ್ತೊಂದು ಹೊಡೆತ ಕೊಟ್ಟಂತಾಗಿದೆ.  

ಜಿಲ್ಲೆಯಲ್ಲಿ ಒಟ್ಟು 60 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬಿತ್ತನೆ ಮಾಡಲಾಗಿದ್ದು, ‘ಅನಿರೀಕ್ಷಿತ ಆಘಾತಕ್ಕೆ’ 3,724 ಹೆಕ್ಟೇರ್‌ ಪ್ರದೇಶದ ಬೆಳೆ ಹಾಳಾಗಿದೆ. ಗಂಗಾವತಿ ತಾಲ್ಲೂಕಿನ ಜಂಗಮರ ಕಲ್ಗುಡಿ, ಹಣವಾಳ, ಹೊಸಕೇರಾ, ಢಣಾಪುರ, ಶ್ರೀರಾಮನಗರ ಭಾಗದಲ್ಲಿನ ಭತ್ತದ ಬೆಳೆಗಳು ನೆಲಕ್ಕೆ ಹಾಸಿಕೊಂಡು, ಕಟಾವಿಗೆ ಬಾರದಂತಾಗಿವೆ. ಕೋಟ್ಯಂತರ ರೂಪಾಯಿ ಬೆಳೆ ಹಾನಿಯಾಗಿದೆ.

ಎಂಟು ಸಾವಿರ ರೈತರು ಭತ್ತದ ಬೆಳೆ ಬೆಳೆಯುತ್ತಿದ್ದು, ಇದರಲ್ಲಿ ಅಂದಾಜು ಮೂರೂವರೆ ಸಾವಿರ ಜನ ವಿಮೆ ಮಾಡಿಸಿದ್ದಾರೆ. ಭತ್ತ ಹಾಳಾದ ಜಾಗದಲ್ಲಿ ಎಷ್ಟು ಪ್ರಮಾಣದಲ್ಲಿ ರೈತರು ವಿಮೆ ಮಾಡಿಸಿದ್ದಾರೆ ಎನ್ನುವುದರ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮೂರು ದಿನಗಳ ಹಿಂದೆ ಇಲ್ಲಿ ನಡೆದ ಬರಗಾಲ ಕುರಿತು ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಗಮನಕ್ಕೆ ಈ ವಿಷಯ ತಂದಾಗ ಪ್ರಕೃತಿ ವಿಕೋಪ ಸಮಯದಲ್ಲಿ ಪರಿಹಾರ ಲಭಿಸಿದಿದ್ದರೆ ಆ ಕಂಪನಿಯ ವಿಮೆ ಯಾಕೆ? ಎಂದು ಖಾರವಾಗಿ ಪ್ರಶ್ನಿಸಿದ್ದರು. ವಿಮಾ ಕಂಪನಿ ಪ್ರತಿನಿಧಿ ಜೊತೆ ಚರ್ಚಿಸಿ ಪರಿಹಾರ ಲಭಿಸುವಂತೆ ವ್ಯವಸ್ಥೆ ಮಾಡಿ ಎಂದೂ ಸೂಚಿಸಿದ್ದರು.

ರುದ್ರೇಶಪ್ಪ ಟಿ.ಎಸ್‌.
ರುದ್ರೇಶಪ್ಪ ಟಿ.ಎಸ್‌.
ವಿಮಾ ಕಂಪನಿಯ ನಿಯಮದ ಬಗ್ಗೆ ನಮ್ಮ ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಆ ಕಂಪನಿಯವರ ಜೊತೆ ಚರ್ಚಿಸುವುದಾಗಿ ತಿಳಿಸಿದ್ದಾರೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.
-ರುದ್ರೇಶಪ್ಪ ಟಿ.ಎಸ್‌. ಜಂಟಿ ಕೃಷಿ ನಿರ್ದೇಶಕ ಕೊಪ್ಪಳ
ಶಿವರಾಜ ತಂಗಡಗಿ

ಶಿವರಾಜ ತಂಗಡಗಿ

ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ನೆರವಾಗದೇ ಹೋದರೆ ಆ ವಿಮಾ ಕಂಪನಿ ಜೊತೆ ಯಾಕೆ ವಿಮೆ ಮಾಡಿಸಬೇಕು. ಈ ಕುರಿತು ಅಧಿಕಾರಿಗಳು ಆದಷ್ಟು ಬೇಗನೆ ಕ್ರಮ ವಹಿಸಬೇಕು.
- ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT