ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಲಾಕ್‌ಡೌನ್‌: ಕ್ಷೀರೋದ್ಯಮಕ್ಕೆ ಹೊಡೆತ

Last Updated 14 ಜೂನ್ 2021, 3:40 IST
ಅಕ್ಷರ ಗಾತ್ರ

ಕೊಪ್ಪಳ: ಕೊರೊನಾ ಎರಡನೇ ಅಲೆಯ ಕಾರಣಕ್ಕೆ ಲಾಕ್‌ಡೌನ್‌ ಹೇರಿದ್ದರಿಂದ ವಿವಿಧ ಕ್ಷೇತ್ರಗಳು ನಲುಗಿದ್ದು, ಮಾರುಕಟ್ಟೆ ಸಮಸ್ಯೆಯಿಂದ ಹಾಲು ಮಾರಾಟಕ್ಕೆ ಕೂಡಾ ಸಮಸ್ಯೆಯಾಗಿದೆ. ಹೈನುಗಾರಿಕೆಗೂ ಸಂಕಷ್ಟ ಎದುರಾಗಿದೆ.

ಲಾಕ್‌ಡೌನ್‌ ಕಾರಣದಿಂದ ಬೃಹತ್ ಪ್ರಮಾಣದ ಹಾಲು ಖರೀದಿಸುವ ಹೊಟೇಲ್‌, ರೆಸ್ಟೋರೆಂಟ್‌, ಬೇಕರಿಗಳು ಬಂದ್ ಆಗಿದ್ದರಿಂದ ಮಾರಾಟಕ್ಕೆ ಪರ್ಯಾಯ ವ್ಯವಸ್ಥೆ ದೊರೆಯದೇ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ.

ಹಾಲಿನ ಉತ್ಪನ್ನಗಳು ಹೆಚ್ಚಿದ್ದರೂ, ಮಾರುಕಟ್ಟೆ ಸಮಸ್ಯೆ ಕಾಡುತ್ತಿದೆ. ಹಾಲು, ತುಪ್ಪ, ಬೆಣ್ಣೆ, ಮಜ್ಜಿಗೆ, ಹಾಲಿನ ಪುಡಿ ಸೇರಿದಂತೆ ಪರ್ಯಾಯ ಉತ್ಪನ್ನಗಳ ತಯಾರಿಕೆ ಮಾಡಿದ್ದರೂ ನಿಗದಿತ ಪ್ರಮಾಣದಲ್ಲಿ ಖರೀದಿ ಆಗುತ್ತಿಲ್ಲ. ಹಾಲಿನ ಪುಡಿ ಖರೀದಿಸುವ ಬಿಸಿಯೂಟ, ವಿವಿಧ ವಸತಿ ನಿಲಯಗಳು ಮತ್ತು ಶಾಲೆಗಳು ಬಂದ್‌ ಆಗಿದ್ದರಿಂದ ಟನ್‌ಗಟ್ಟಲೆ ಉಳಿಕೆ ಆಗುತ್ತಿರುವುದು ಸಮಸ್ಯೆ ಉಂಟು ಮಾಡಿದೆ.

ಹೈನುಗಾರಿಕೆಗೆ ಉತ್ತೇಜನ: ರಾಯಚೂರು, ಬಳ್ಳಾರಿ, ಕೊಪ್ಪಳ (ರಾಬಕೋ) ಹಾಲು ಒಕ್ಕೂಟದ ಕೇಂದ್ರ ಕಚೇರಿ ಬಳ್ಳಾರಿಯಲ್ಲಿದ್ದು, ಮೂರು ಜಿಲ್ಲೆಗಳ ಪೈಕಿ ಕೊಪ್ಪಳ ಜಿಲ್ಲೆಯೇ ಪ್ರಸ್ತುತ ವರ್ಷ ಹೆಚ್ಚಿನ ಹಾಲು ಉತ್ಪಾದನೆ ಮಾಡಿದೆ. ಕೃಷಿಗೆ ಪರ್ಯಾಯವಾದ ಉದ್ಯೋಗ, ಲಾಕ್‌ಡೌನ್‌ನಿಂದ ಹೆಚ್ಚಿನ ಜನರು ಊರಿನಲ್ಲಿಯೇ ಉಳಿದಿದ್ದರಿಂದ ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಇದರಿಂದಹೈನುಗಾರಿಕೆಗೆ ಉತ್ತೇಜನ ದೊರೆತಿದೆ.

ರಾಬಕೋ ಅಡಿಯಲ್ಲಿ 730 ಹಾಲು ಉತ್ಪಾದಕರ ಸಹಕಾರ ಸಂಘಗಳ ಪೈಕಿ ಕೊಪ್ಪಳ ಜಿಲ್ಲೆಯಲ್ಲಿ 245 ಕಾರ್ಯ ನಿರ್ವಹಿಸುತ್ತಿವೆ. ಮೂರುಜಿಲ್ಲೆಗಳಿಂದ ಕಳೆದ ವರ್ಷ 1.65 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಈಗ ಜನವರಿಯಿಂದ 2.05 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗಿದೆ.

ವಿವಿಧ ಗ್ರಾಮ ಮತ್ತು ಪಟ್ಟಣಗಳಲ್ಲಿ ಇರುವ ಹಾಲುಉತ್ಪಾದಕರ ಸಹಕಾರ ಸಂಘಗಳಿಂದ ಹೈನುಗಾರಿಕೆಯಲ್ಲಿ ತೊಡಗಿರುವ ರೈತರು ಸಹಕಾರ ಸಂಘಗಳ ಮೂಲಕ ಹಾಲು ಮಾರಾಟ ಮಾಡುತ್ತಾರೆ. ಅಲ್ಲಿಂದ ತಾಲ್ಲೂಕಿನ ಬೂದಗುಂಪಾ ಬಳಿ ಇರುವ ಕೆಎಂಎಫ್‌ ಶೈತ್ಯಾಗಾರದಲ್ಲಿ ಸಂಗ್ರಹಿಸಿ, ಶಿಥಲೀಕರಣ ಮತ್ತು ಸಂಸ್ಕರಣೆ ಮೂಲಕ ಮಾರಾಟ ಮಾಡಲಾಗುತ್ತದೆ. ಟೋನ್ಡ್‌ ಹಾಲು ಪ್ಯಾಕೆಟ್‌ಗೆ ₹ 46, ಸಾದಾ ಹಾಲು ಲೀಟರ್‌ಗೆ ₹ 42ಕ್ಕೆ ಮಾರಾಟ ಮಾಡಲಾಗುತ್ತದೆ.

ಮನೆ, ಮನೆಗೆ ಹಾಲು ಪೂರೈಕೆ ಮಾಡುವವರು ಲೀಟರ್‌ಗೆ ₹ 44ಕ್ಕೆ ಮಾರಾಟ ಮಾಡುತ್ತಾರೆ. ಎಮ್ಮೆ ಮತ್ತು ಆಕಳು ಹಾಲಿನ ದರಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಇರುತ್ತದೆ. ಬೆಣ್ಣೆ ಕೆಜಿಗೆ ₹ 550ಕ್ಕೆ ಮಾರಾಟವಾಗುತ್ತದೆ. ಹಾಲು ಅಂದು ಕರೆದು, ಅಂದೇ ಮಾರಾಟವಾದರೆ ರೈತರಿಗೆ ಲಾಭವಾಗುತ್ತದೆ. ಸಂಘಗಳಲ್ಲಿ ವಾರ, ತಿಂಗಳಿಗೊಮ್ಮೆ ಪ್ರೋತ್ಸಾಹಧನ ಸೇರಿದಂತೆ ಹಣ ನೀಡುವುದರಿಂದ ಹಣಕ್ಕಾಗಿ ರೈತರು ಕಾಯುತ್ತಾರೆ.

ಹಾಲು ಖರೀದಿ, ಮಾರಾಟ: ಲಾಕ್‌ಡೌನ್‌ ಸಂದರ್ಭದಲ್ಲಿ ಕೆಎಂಎಫ್‌ನಿಂದ 3 ಸಾವಿರ ಲೀಟರ್‌ಗೂ ಹೆಚ್ಚು ಹಾಲು ಖರೀದಿಸಿ ಬಡವರು ಮತ್ತು ಕೆಲವು ಮಕ್ಕಳಿಗೆ ಹಂಚಲಾಗಿದೆ. ಆದರೆ ಮೊದಲ ಅಲೆಯಲ್ಲಿ ಹಾಲು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿ ಜನರಿಗೆ ನೀಡಲಾಗಿತ್ತು. ಆದರೆ ಎರಡನೇ ಅಲೆಯಲ್ಲಿ ದಿನಸಿ ಕಿಟ್‌ಗಳ ಜತೆ ಕನಕಗಿರಿ, ಕುಕನೂರು, ಯಲಬುರ್ಗಾ, ಕಾರಟಗಿಯಲ್ಲಿ ಹಾಲು ಖರೀದಿಸಿ ಹಂಚಲಾಗಿದೆ.

ಇದನ್ನು ಬಿಟ್ಟರೆ ಯಾವುದೇ ಪ್ರೋತ್ಸಾಹದಾಯಕ ಯೋಜನೆ ಇಲ್ಲದೆ ಹಾಲು ಉತ್ಪಾದನೆ ಮಾಡುವ ರೈತರಿಗೆ ತೊಂದರೆಯಾಗುತ್ತಿದೆ.

ಜಾರಿಗೆ ಬಾರದಹಾಲು ಪ್ರಸಾದ ಯೋಜನೆ
ಮುಜರಾಯಿ ಇಲಾಖೆಗೆ ಒಳಪಟ್ಟ ಜಿಲ್ಲೆಯ ಹುಲಿಗಿ, ಅಂಜನಾದ್ರಿ, ಕನಕಾಚಲಪತಿ ದೇವಸ್ಥಾನಕ್ಕೆ ನಿತ್ಯ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಅವರಿಗೆ ಪ್ರಸಾದದ ಜತೆ ಹಾಲನ್ನು ವಿತರಿಸಿದರೆ ಒಕ್ಕೂಟಕ್ಕೆ ಹೆಚ್ಚಿನ ಲಾಭ ಆಗಲಿದೆ ಎಂದು ಕೃಷಿ ತಜ್ಞರು ಸಲಹೆ ನೀಡಿದ್ದರು.

ಅಲ್ಲದೆ ವಾರದಲ್ಲಿ ಒಂದು ದಿನ ಹಾಲಿನಲ್ಲಿ ತಯಾರಿಸುವ ವಿಶೇಷ ಪದಾರ್ಥವನ್ನು ಸಾಮೂಹಿಕ ಭೋಜನದಲ್ಲಿ ನೀಡಿದರೆ ಹೆಚ್ಚಿನ ಹಾಲಿಗೆ ಬೇಡಿಕೆ ಬರುತ್ತದೆ. ಇದರಿಂದ ರೈತರಿಗೆ ಪರೋಕ್ಷವಾಗಿ ಅನುಕೂಲವಾಗುತ್ತದೆ.ಈ ನಿಟ್ಟಿನಲ್ಲಿ ರಾಬಕೋ ಸಭೆಯಲ್ಲಿ ಚರ್ಚೆ ನಡೆಸಿ ಶೀಘ್ರ ನಿರ್ಧಾರ ಮಾಡಲಾಗುವುದು ಎಂದುಹಾಲು ಒಕ್ಕೂಟದ ಸಭೆಯಲ್ಲಿ ನಿರ್ಧಾರ ಮಾಡಲಾಗಿತ್ತು.

ಲಾಕ್‌ಡೌನ್‌ ಕಾರಣದಿಂದ ದೇವಸ್ಥಾನಗಳು ಬಂದ್ ಆಗಿದ್ದರಿಂದ ರೈತರು, ಹಾಲು ಉತ್ಪಾದಕರು ಸಮಸ್ಯೆ ಎದುರಿಸುತ್ತಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT