ಸೋಮವಾರ, ಜುಲೈ 4, 2022
25 °C

ಗಾಂಧಿ ಮಾರ್ಗದ ಅಭಿವೃದ್ಧಿ ಅಗತ್ಯ; ಅಣ್ಣಾ ವಿನಯಚಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಮಹಾತ್ಮಾ ಗಾಂಧಿ ಕಂಡ ಪ್ರಕೃತಿ, ಕೃಷಿ ಹಾಗೂ ಗ್ರಾಮೀಣ ಸ್ನೇಹಿ ಅಭಿವೃದ್ಧಿ ಭಾರತಕ್ಕೆ ಅತ್ಯಗತ್ಯವಾಗಿದೆ ಎಂದು ಗಾಂಧಿ ವಿಚಾರ ವೇದಿಕೆಯ ರಾಜ್ಯ ಉಪಾಧ್ಯಕ್ಷ ಅಣ್ಣಾ ವಿನಯಚಂದ್ರ ಹೇಳಿದರು.

ಇಲ್ಲಿನ ಕಿನ್ನಾಳ ರಸ್ತೆಯ ಎನ್‌ಜಿಒ ಕಾಲೊನಿಯ ಸವಡಿ ನಿವಾಸದ ಆವರಣದಲ್ಲಿ ಶನಿವಾರ ನಡೆದ ಗಾಂಧಿ ವಿಚಾರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿ ಸ್ನೇಹಿಯಾಗಿ, ಕೃಷಿ ಹಾಗೂ ಗ್ರಾಮೀಣ ಭಾರತದ ಸರ್ವಾಂಗೀಣ ವಿಕಾಸವಾಗಬೇಕು ಎಂಬುದರ ಗಾಂಧೀಜಿ ಅವರ ಕಲ್ಪನೆ ಆಗಿತ್ತು. ನಾವೆಲ್ಲ ಒಂದಾಗಿ ಆ ಮಾರ್ಗದಲ್ಲಿ ಸಾಗಬೇಕಾಗಿದೆ. ಧಾರ್ಮಿಕ ಕಟ್ಟುಪಾಡುಗಳ ಹುಸಿ ಶ್ರೇಷ್ಠತೆಯ ಭ್ರಮೆಗಳನ್ನು ತೊರೆಯಬೇಕು ಎಂದರು.

ಸಮಾಜಕ್ಕೆ ಮಾರ್ಗದರ್ಶನ ಮಾಡುತ್ತಿದ್ದ ಮತ–ಪಂಥಗಳು ಪರಸ್ಪರ ಪೈಪೋಟಿಗೆ ಇಳಿದಿರುವುದು ವಿಷಾದನೀಯ. ಧರ್ಮಕ್ಕೆ ಬಹಳ ವಿಶಾಲ ಅರ್ಥವಿದೆ. ಇಂದು ಅದನ್ನು ಸ್ವಾರ್ಥಕ್ಕೆ ಸೀಮಿತಗೊಳಿಸುವ ಯತ್ನಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ ‘ಮತ್ತೆ ಮತ್ತೆ ಗಾಂಧಿ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಉತ್ತರ ಕರ್ನಾಟಕ ಸಂಯೋಜಕ ನೇತಾಜಿ ಗಾಂಧಿ ಮಾತನಾಡಿ, ಗಾಂಧೀಜಿ ಎಂದರೆ ಉದ್ವೇಗ, ಪ್ರಚೋದನೆಯಲ್ಲ. ಅದೊಂದು ಮಹಾನ್ ಶಕ್ತಿ. ಗಾಂಧಿಯನ್ನು ನಮ್ಮ ಎದೆಗಳಿಗೆ ಇಳಿಸಿಕೊಳ್ಳಬೇಕು ಎಂದರು.

ಸುಳ್ಯದ ಜಿವಿವಿ ಅಧ್ಯಕ್ಷ ಲಕ್ಷ್ಮೀಶ ಗಬಲಡ್ಕ ವೇದಿಕೆಯಲ್ಲಿದ್ದರು. ಕೊಪ್ಪಳ ಜಿಲ್ಲಾ ಘಟಕದ ಅಧ್ಯಕ್ಷ ಶಿವಶರಣಪ್ಪ ಬಳಿಗಾರ ಅಧ್ಯಕ್ಷತೆ ವಹಿಸಿದ್ದರು.

ಡಿ.ಎಂ.ಬಡಿಗೇರ, ಸಾವಿತ್ರಿ ಮುಜುಮದಾರ, ಶ್ರೀಧರಗೌಡ ಬನ್ನಿಕೊಪ್ಪ, ರಾಮಣ್ಣ ಚಲವಾದಿ, ಶ್ರೀನಿವಾಸ ಪಂಡಿತ, ವಿರೇಶ ಸವಡಿ, ನಾಗರಾಜನಾಯಕ ಡೊಳ್ಳಿನ ಸಂವಾದದಲ್ಲಿ ಭಾಗವಹಿಸಿದ್ದರು.

ನಿಧಿ ಚಾಮರಾಜ ಸವಡಿ ಗಾಂಧಿ ಭಜನೆ ಪ್ರಸ್ತುತಪಡಿಸಿದರು. ‌ವೇದಿಕೆಯ ಕೊಪ್ಪಳ ಜಿಲ್ಲಾ ಘಟಕದ ಕಾರ್ಯದರ್ಶಿ ಬಸವರಾಜ ಸವಡಿ ಪ್ರಾಸ್ತಾವಿಕ ಮಾತನಾಡಿದರು. ಬಾಲನಾಗಮ್ಮ ನಿರೂಪಿಸಿದರು. ರಾಜು ತೇರದಾಳ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು