ಬುಧವಾರ, ಮಾರ್ಚ್ 22, 2023
21 °C
ಅಕ್ರಮ ಗಣಿ ಆರೋಪ; ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರ ಸಮ್ಮತಿ

ಜನಾರ್ದನ ರೆಡ್ಡಿಗೆ ಆರಂಭದಲ್ಲಿಯೇ ಸಂಕಷ್ಟ

ಪ್ರಮೋದ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ಕೆಲವೇ ದಿನಗಳಲ್ಲಿ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದ ಅರೋಪದ ಹಿನ್ನೆಲೆಯಲ್ಲಿ ರೆಡ್ಡಿ ಹಾಗೂ ಅವರ ಕುಟುಂಬದವರಿಗೆ ಸೇರಿದ ಹೆಚ್ಚುವರಿ ಆಸ್ತಿ ಜಪ್ತಿ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಗುರುವಾರ ಅನುಮತಿ ನೀಡಿದೆ. ಈ ಕುರಿತು ಸಿಬಿಐ, ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

17 ದಿನಗಳ ಹಿಂದೆಯಷ್ಟೇ ಹೊಸ ಪಕ್ಷ ಘೋಷಣೆ ಮಾಡಿದ್ದ ರೆಡ್ಡಿ ಜಿಲ್ಲೆಯ ಬಿಜೆಪಿ ಹಾಗೂ ಕಾಂಗ್ರೆಸ್‌ ಪ್ರಮುಖರನ್ನು ಭೇಟಿಯಾಗಿ ತಮ್ಮ ಪಕ್ಷಕ್ಕೆ ಕರೆದುಕೊಂಡಿದ್ದರು. ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿಯೂ ಹೇಳಿದ್ದ ಅವರು ಅಲ್ಲಿನ ಜಿಲ್ಲೆಯ ವಿವಿಧ ಸಮಾಜಗಳ ಮುಖಂಡರನ್ನು ಭೇಟಿಯಾಗಿದ್ದರು. ದರ್ಗಾ, ದೇವಸ್ಥಾನಗಳಿಗೆ ಭೇಟಿ ಕೊಟ್ಟು ಎಲ್ಲ ಸಮುದಾಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಿದ್ದರು.

ಆಸ್ತಿ ಜಪ್ತಿಗೆ ಸಂಬಂಧಿಸಿದಂತೆ ಬುಧವಾರವಷ್ಟೇ ಮಾತನಾಡಿದ್ದ ರೆಡ್ಡಿ ‘ಎಷ್ಟೇ ಆಸ್ತಿ ಜಪ್ತಿ ಮಾಡಿದರೂ ಇಟ್ಟ ಹೆಜ್ಜೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಆಂಜನೇಯನ ಸನ್ನಿಧಿಯಲ್ಲಿ (ಅಂಜನಾದ್ರಿ) ವಿಜಯಲಕ್ಷ್ಮಿಯೂ ಇದ್ದಾಳೆ’ ಎಂದು ಹೇಳಿದ್ದರು.

ಗುರುವಾರ ಆಸ್ತಿ ಜಪ್ತಿ ವಿಷಯ ಹೊರ ಬೀಳುತ್ತಿದ್ದಂತೆಯೇ ರೆಡ್ಡಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಚಿಂತೆ ಮನೆ ಮಾಡಿದೆ. ಒಂದೆರೆಡು ದಿನಗಳ ಹಿಂದೆಯೇ ಅನೇಕರು ಹೊಸ ಪಕ್ಷ ಸೇರಿದ್ದು, ಅವರಿಗೆ ಅಲ್ಲಿಯೂ ಇಲ್ಲ, ಇಲ್ಲಿಯೂ ಸಲ್ಲಲಿಲ್ಲ ಎನ್ನುವಂತಾದರೆ ಹೇಗೆ ಎನ್ನುವ ಚಿಂತೆ ಎದುರಾಗಿದೆ. ಆರಂಭದಲ್ಲಿಯೇ ಹೊಸ ಪಕ್ಷವನ್ನು ಕಟ್ಟಿ ಹಾಕುವ ಪ್ರಯತ್ನ ಮಾಡಲಾಗುತ್ತಿದೆ ಎನ್ನುವ ಮಾತುಗಳು ಜಿಲ್ಲೆಯ ರಾಜಕೀಯ ವಲಯದಿಂದ ಕೇಳಿಬರುತ್ತಿವೆ.      

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ರೆಡ್ಡಿ ಪಕ್ಷದ ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಮತ್ತು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ಬಿ. ಕಣವಿ ‘ಭವಿಷ್ಯದಲ್ಲಿ ಏನೇ ಸಮಸ್ಯೆ ಎದುರಾದರೂ ಅವುಗಳನ್ನು ಎದುರಿಸಿ ಚುನಾವಣೆಯಲ್ಲಿ ನನ್ನ ಪಕ್ಷ ಹಾಗೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಖುದ್ದು ರೆಡ್ಡಿ ಅವರೇ ಹೇಳಿದ್ದಾರೆ. ಆಸ್ತಿ ಜಪ್ತಿ ಪ್ರಕರಣವನ್ನು ಕಾನೂನು ರೀತಿಯಲ್ಲಿ ಎದುರಿಸುವುದಾಗಿಯೂ ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ಪಕ್ಷ ಸಂಘಟನೆ ಹಾಗೂ ಬೆಳವಣಿಗೆಗೆ ಏನೂ ತೊಂದರೆಯಾಗುವುದಿಲ್ಲ’ ಎಂದರು.

ಅತೃಪ್ತರಿಗೆ ಹೊಸ ಪಕ್ಷವೇ ವೇದಿಕೆ?

ಕೊಪ್ಪಳ: ಮುಂಬರುವ ವಿಧಾನಸಭಾ ಚುನಾವಣೆಗೆ ಜಿಲ್ಲೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಹಲವರು ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಈಗಾಗಲೇ ಅನೇಕರು ತಮ್ಮ ಶಕ್ತಿ ಬಳಸಿಕೊಂಡು ತಮ್ಮ  ಪಕ್ಷದ ಪ್ರಮಖರನ್ನು ಭೇಟಿಯಾಗಿ ಟಿಕೆಟ್‌ ತಮಗೇ ಕೊಡಬೇಕು ಎನ್ನುವ ಒತ್ತಡ ಹೇರುತ್ತಿದ್ದಾರೆ. ವಿಶೇಷವಾಗಿ ಗಂಗಾವತಿ ವಿಧಾನಸಭಾ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿರುವ ಕಾರಣ ಅಲ್ಲಿ ‘ಗೆಲ್ಲುವ ಕುದುರೆ’ಗಳಿಗೆ ಮಣೆ ಹಾಕಬೇಕು ಎನ್ನುವ ಲೆಕ್ಕಾಚಾರವೂ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿದೆ.

ಜಿಲ್ಲೆಯ ಹಲವು ಮುಖಂಡರು ಒಂದು ವೇಳೆ ತಮ್ಮ ಪಕ್ಷ ಟಿಕೆಟ್‌ ನೀಡದಿದ್ದರೆ ರೆಡ್ಡಿ ಪಕ್ಷವನ್ನು ಸೇರುವ ಇರಾದೆ ಹೊಂದಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳಿಂದ ಗೊತ್ತಾಗಿದೆ. ರೆಡ್ಡಿ ಪಕ್ಷದಿಂದ ಸ್ಪರ್ಧಿಸಲು ಬಯಸಿ ಹಲವರು ಟಿಕೆಟ್‌ ಕೇಳಿದ್ದಾರೆ ಎನ್ನುವುದು ಗೊತ್ತಾಗಿದೆ.

ಹೆಸರು ಹೇಳಲು ಬಯಸದ ಬಿಜೆಪಿ ಮುಖಂಡರೊಬ್ಬರು ‍‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ ‘ತಮ್ಮ ಪಕ್ಷಗಳಿಂದ ಟಿಕೆಟ್‌ ಸಿಗದಿದ್ದರೆ ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಕೆಲವರು ರೆಡ್ಡಿ ಪಕ್ಷಕ್ಕೆ ಹೋಗಲಿದ್ದಾರೆ. ಅಂಥ ಅಕಾಂಕ್ಷಿಗಳ ಜೊತೆ ರೆಡ್ಡಿ ಸಂಪರ್ಕದಲ್ಲಿದ್ದಾರೆ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು