ಕೊಪ್ಪಳ: ದೇಶದ ಆತ್ಮವಾದ ಹಳ್ಳಿಗಳು ಸುಧಾರಣೆಯಾದರೆ ದೇಶವೂ ಅಭಿವೃದ್ಧಿಯಾಗುತ್ತದೆ ಎನ್ನುವ ಅಚಲ ನಂಬಿಕೆ ಹೊಂದಿದ್ದ ಮಹಾತ್ಮ ಗಾಂಧೀಜಿ ಹಳ್ಳಿಗಳಲ್ಲಿರುವ ಜನರ ಬದುಕು ಸುಧಾರಿಸಲು ಅನೇಕ ಕೆಲಸಗಳನ್ನು ಮಾಡಿದರು.
ಶ್ರಮ ಜೀವನ ಸುಂದರ ಬದುಕಿಗೂ ದಾರಿ ಎನ್ನುವ ಪಾಠ ಕಲಿಸಿಕೊಟ್ಟರು. ಮದ್ಯಪಾನ ವಿರೋಧಿಸಿದರು. ಶ್ರಮ ಸಂಸ್ಕೃತಿಯ ಮೌಲ್ಯ ಹೇಳಿಕೊಟ್ಟರು. ಅವರ ಆದರ್ಶಗಳನ್ನೇ ರೂಢಿಸಿಕೊಂಡಿರುವ ಕಾಮನೂರು ಎನ್ನುವ ಗ್ರಾಮ ಈಗ ಸದ್ದಿಲ್ಲದೇ ಸುದ್ದಿ ಮಾಡುತ್ತಿದೆ.
ಜಿಲ್ಲಾಕೇಂದ್ರದಿಂದ 13 ಕಿ.ಮೀ. ದೂರದಲ್ಲಿರುವ ಕಾಮನೂರಿನಲ್ಲಿ ಇಂದಿಗೂ ಮದ್ಯ ಮಾರಾಟ ನಡೆಯುವುದಿಲ್ಲ. ಇದಕ್ಕಾಗಿ ನಡೆದ ಪ್ರಯತ್ನಗಳಿಗೆ ಗ್ರಾಮಸ್ಥರು, ವಿಶೇಷವಾಗಿ ಯುವಕರು ಅವಕಾಶ ಮಾಡಿಕೊಟ್ಟಿಲ್ಲ. ಈ ಊರಿನಲ್ಲಿ ಹೋಟೆಲ್‌ಗಳಿಲ್ಲ. ಅಗನತ್ಯವಾಗಿ ಯಾರೂ ಹರಟೆ ಹೊಡೆದು ಸಮಯ ವ್ಯರ್ಥ ಮಾಡುವುದಿಲ್ಲ. ಸೂರ್ಯೋದಯಕ್ಕೂ ಮೊದಲು ಮನೆಯಿಂದ ಹೊರಟು ದಿನಪೂರ್ತಿ ಹೊಲಗಳಲ್ಲಿ ದುಡಿದು ದಣಿದು ಸೂರ್ಯೋದಯದ ಬಳಿಕವೇ ಊರಿಗೆ ಮರಳುವ ಗ್ರಾಮದ ರೈತರಿಗೆ ಶ್ರಮ ಸಂಸ್ಕೃತಿಯೇ ಜೀವಾಳ.
ಕಾಮನೂರಿನಲ್ಲಿರುವ ಬಹುತೇಕ ರೈತರು ಸಾವಯವ ಕೃಷಿಯನ್ನು ನೆಚ್ಚಿಕೊಂಡವರು. ಇಲ್ಲಿನ ಕೃಷಿಪದ್ಧತಿ, ಉತ್ತಮ ಆರೋಗ್ಯಕ್ಕಾಗಿ ಜಗತ್ತು ಭಾರತದತ್ತ ನೋಡುವಂತೆ ಮಾಡಿರುವ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ರಾಸಾಯನಿಕ ಗೊಬ್ಬರಗಳ ಭರಾಟೆ ನಡುವೆಯೂ ಗ್ರಾಮದಲ್ಲಿ ನೈಸರ್ಗಿಕ ಹಾಗೂ ಸಾವಯವ ಕೃಷಿಯೇ ಪ್ರಧಾನವಾಗಿದೆ. ಜಾನುವಾರು ಸಾಕಾಣಿಕೆ, ಸಗಣಿ, ಮೂತ್ರ, ಸಹಜ ಮತ್ತು ನೈಸರ್ಗಿಕವಾಗಿ ಸಿಗುವ ಎಲೆಗಳಿಂದ ತಯಾರಿಸಲಾಗುವ ಗೊಬ್ಬರ ಬಳಸಲಾಗುತ್ತಿದೆ.
ಈ ಗ್ರಾಮದಲ್ಲಿ ಅನೇಕ ಜನ ಪ್ರಗತಿಪರ ಕೃಷಿಕರಿದ್ದಾರೆ. ರೈತರು ಅನ್ನಕ್ಕಾಗಿ ಪರದಾಡದೇ ನೌಕರರ ಹಾಗೆ ಪ್ರತಿ ತಿಂಗಳು ಕೃಷಿಯಲ್ಲಿಯೇ ಹಣ ಗಳಿಸುವಂತಾಗಬೇಕು. ಸ್ವಾವಲಂಬಿಯಾಗಬೇಕು ಎನ್ನುವ ನಂಬಿಕೆಯನ್ನು ಪ್ರಗತಿಪರ ಕೃಷಿಕ ಬಸಪ್ಪ ಹೊಕಲಕುಂಟಿ ಹೊಂದಿದ್ದಾರೆ. ಅವರಿಗೆ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಊರಿನ ಸುತ್ತಮುತ್ತಲಿನ ಹಸಿರು ಪರಿಸರ, ಕೆರೆ ಸೌಂದರ್ಯಕ್ಕೆ ಸಾಕ್ಷಿಯಂತಿದೆ.
ಸಾವಯವ ಕೃಷಿ ಪದ್ಧತಿ, ಸಿರಿಧಾನ್ಯ, ಶ್ರಮ ಸಂಸ್ಕೃತಿ, ಮದ್ಯಪಾನ ವಿರೋಧ ಹೀಗೆ ಮಹಾತ್ಮ ಗಾಂಧೀಜಿ ಅವರ ಆದರ್ಶದ ಒಂದಷ್ಟು ಅಂಶಗಳನ್ನು ಅಳವಡಿಸಿಕೊಂಡಿರುವ ಕಾಮನೂರು ಜಿಲ್ಲೆಗೆ ಮಾದರಿ ಗ್ರಾಮವಾಗಿದೆ. ಮದ್ಯ ಮಾರಾಟದ ವಿರುದ್ಧ 1998ರಿಂದಲೇ ಸಮರ ಸಾರಿರುವ ಈ ಊರು ಹಿರಿಯರು ಹಾಕಿಕೊಟ್ಟ ಆದರ್ಶಗಳ ಬುನಾದಿಯ ಮೇಲೆ ಮೌಲ್ಯಗಳ ಗೋಪುರ ಕಟ್ಟುತ್ತಿದೆ.
ಕಾಮನೂರಿನ ಜನ ಗಾಂಧೀಜಿಯ ತತ್ವ-ಸಿದ್ಧಾಂತಗಳ ಅಡಿಯಲ್ಲಿ ಬದುಕುತ್ತಿದ್ದಾರೆ. ಗ್ರಾಮದಲ್ಲಿ ಹೋಟೆಲ್‌ಗಳಿಲ್ಲ. ಬೀಡಿ-ಸಿಗರೇಟು ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ.ಸಿದ್ಧಲಿಂಗಪ್ಪ ಕೊಟ್ನೆಕಲ್ ಕನ್ನಡ ಉಪನ್ಯಾಸಕ ಕೊಪ್ಪಳ
ಸಾವಯವ ಹಾಗೂ ಸಿರಿಧಾನ್ಯ ಕೃಷಿಯ ಮೇಲೆ ಕಾಮನೂರು ಜನರಿಗೆ ವಿಶೇಷ ಪ್ರೀತಿಯಿದೆ. ಈ ಗ್ರಾಮದ ಜನ ಶ್ರಮ ಸಂಸ್ಕೃತಿಯನ್ನು ಹೆಚ್ಚಿಕೊಂಡಿದ್ದಾರೆಬಸಪ್ಪ ಹೊಕಲಕುಂಟಿ ಕಾಮನೂರಿನ ರೈತ
ಗ್ರಾಮದಲ್ಲಿ ಇಂದು ವಿಶೇಷ ಗಾಂಧಿ ಜಯಂತಿ
ಗಾಂಧೀಜಿ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ಕಾಮನೂರಿನಲ್ಲಿ ಬುಧವಾರ ವಿಶೇಷವಾಗಿ ಗಾಂಧಿ ಜಯಂತಿ ಕಾರ್ಯಕ್ರಮ ನಡೆಯಲಿದೆ. ಕೊಪ್ಪಳದ ಶಿಕ್ಷಕರ ಕಲಾ ಸಂಘ ಹಾಗೂ ಗಾಂಧಿ ಬಳಗವು ಜಿಲ್ಲಾಕೇಂದ್ರದಿಂದ ಬೆಳಿಗ್ಗೆ 5.30ಕ್ಕೆ ಕಾಮನೂರಿನ ತನಕ ಪಾದಯಾತ್ರೆ ನಡೆಸಲಿದ್ದು ಬಳಿಕ ಆ ಗ್ರಾಮದಲ್ಲಿ ಜಯಂತಿ ಆಚರಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.