ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡಿ

ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿ ಸದಸ್ಯರ ಒತ್ತಾಯ
Last Updated 3 ಜೂನ್ 2020, 11:40 IST
ಅಕ್ಷರ ಗಾತ್ರ

ಕೊಪ್ಪಳ: ಕನ್ನಡ ಭಾಷೆ ಪ್ರಾಚೀನ ಇತಿಹಾಸ ಹೊಂದಿರುವುದರಿಂದ ಕನ್ನಡ ಶಾಸ್ತ್ರೀಯ ಭಾಷೆ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡಬೇಕು ಎಂದು ಹೈದರಾಬಾದ್‌ ಕರ್ನಾಟಕ ಹೋರಾಟ ಸಮಿತಿಯಿಂದ ಒತ್ತಾಯಿಸಲಾಗಿದೆ.

ಈ ಕುರಿತು ಪ್ರಕಟಣೆ ನೀಡಿರುವ ಸಮಿತಿ ದ್ರಾವಿಡ ಭಾಷೆಗಳಿಗೆ ಪ್ರಾಚಿನ ಇತಿಹಾಸ ಇರುವುದರಿಂದ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿ 10 ವರ್ಷಗಳಾದವು. ತಮಿಳಿಗೆ ಸ್ವಾಯತ್ತತೆಯನ್ನು ನೀಡಿ ಹಲವು ವರ್ಷಗಳಾದವು. ಕನ್ನಡ, ತೆಲುಗುಗಳಿಗೆ ಇಲ್ಲಿಯವರೆಗೆ ಸ್ವಾಯತ್ತತೆ ನೀಡಲಾಗಿಲ್ಲ. ಇದಕ್ಕೆ ಭಾರತಿಯ ಭಾಷಾ ಸಂಸ್ಥಾನ ಮೈಸೂರು ಕಾರಣವಾಗಿದೆ ಎಂದು ದೂರಿದೆ.

ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರು ಈವರೆಗೆ ಕನ್ನಡ ಶಾಸ್ತ್ರೀಯ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಮೂಲಸೌಕರ್ಯಗಳನ್ನು ಒದಗಿಸಿಲ್ಲ. ಕನಿಷ್ಟ ಕ್ಷೇತ್ರ ಕಾರ್ಯಕ್ಕಾಗಿ ವಿಡಿಯೊ ಕ್ಯಾಮೆರಾ ಮುಂತಾದ ಆಧುನಿಕ ಸೌಕರ್ಯಗಳನ್ನು ಸಹ ಒದಗಿಸಿಲ್ಲ. ಈವರೆಗಿನ ಪ್ರಾಜೆಕ್ಟ್ ಗ್ರಂಥಗಳನ್ನು ಪ್ರಕಟಿಸಿಲ್ಲ. ಫೆಲೋಗಳು ಆಯ್ದುಕೊಂಡ ಪ್ರಾಜೆಕ್ಟ್ ಕೆಲಸವನ್ನು ಪೂರ್ಣಗೊಳಿಸುವ ಮೊದಲೇ ಅವರನ್ನು ಕಿತ್ತುಹಾಕಿ ಬೇರೆಯವರನ್ನು ನೇಮಿಸಿಕೊಳ್ಳುವ ಜಾಹೀರಾತಿನ ಹುನ್ನಾರವೇನು?. ಪ್ರಾಜೆಕ್ಟ್ ರಿಪೋರ್ಟ್ ಪ್ರಕಟಿಸದೆ ಪ್ರೀ ಮಾಚ್ಯುವರ್ ಎಂದು ಷರಾ ಬರೆದು ಸ್ವಾಯತ್ತತೆ ಪಡೆಯಲು ಅಡ್ಡಗಾಲು ಹಾಕುತ್ತಿರುವುದು ಯಾವ ನ್ಯಾಯ? ಎಂದು ನಿರ್ದೇಶಕರನ್ನು ಸಮಿತಿಯು ಪ್ರಶ್ನಿಸಿದೆ.

ಈ ಉನ್ನತ ಕನ್ನಡ ಅಧ್ಯಯನ ಕೇಂದ್ರವನ್ನು ಕನ್ನಡ ನಾಡಿನಲ್ಲಿ ಕುಳಿತು ವಿರೋಧಿಸುತ್ತಿರುವುದು ಖಂಡನೀಯ. ಕನ್ನಡಿಗರು ಈ ಕುರಿತು ಪ್ರತಿಭಟಿಸಿ, ಮನವಿಗಳನ್ನು ಅರ್ಪಿಸಿದರೂ ಕಣ್ಣುಮುಚ್ಚಿ ಕುಳಿತಿರುವದರ ರಹಸ್ಯವೇನು?. ತಾವುಎಲ್ಲ ಭಾಷೆಗಳನ್ನು ಸಮಾನವಾಗಿ ಕಾಣದೆ ಕನ್ನಡದ ಉಪ್ಪು ತಿಂದು ಕನ್ನಡಕ್ಕೆ ದ್ರೋಹ ಬಗೆಯುತ್ತಿರುವ ನಿಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮನ್ನು ಕಿತ್ತು ಹಾಕಲು ಕೇಂದ್ರ ಸರಕಾರಕ್ಕೆ ಒತ್ತಾಯಿಸಿ ಚಳವಳಿ ನಡೆಸಬೇಕಾಗುತ್ತದೆ ಎಂದು ಸಮಿತಿ ಕಾರ್ಯಾಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು,ಎಚ್.ಎಸ್.ಪಾಟೀಲ, ಎ.ಎಂ.ಮದರಿ, ಬಸವರಾಜ ಆಕಳವಾಡಿ, ಡಾ.ಚೆನ್ನಬಸಪ್ಪ ಚಿಲ್ಕರಾಗಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT