ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಝಳ: ಮಡಿಕೆಗೆ ಭಾರಿ ಬೇಡಿಕೆ

ಕಾರಟಗಿ: ಫ್ರಿಜ್‌ಗಳಿದ್ದರೂ ಮಡಿಕೆ ಖರೀದಿ
Published 21 ಏಪ್ರಿಲ್ 2024, 6:39 IST
Last Updated 21 ಏಪ್ರಿಲ್ 2024, 6:39 IST
ಅಕ್ಷರ ಗಾತ್ರ

ಕಾರಟಗಿ: ಬಿಸಿಲು ಹೆಚ್ಚಾಗುತ್ತಿದ್ದಂತೆ ಮಡಕೆಗಳಿಗೂ ಬೇಡಿಕೆ ಹೆಚ್ಚಾಗಿದೆ. ಸಹಜವಾಗಿ ಬೆಲೆಯೂ ಏರಿಕೆಯಾಗಿದೆ. 

‘ಬೇಸಿಗೆ ಆರಂಭದಿಂದಲೇ ಬಿಸಿಲು ಹೆಚ್ಚಾಗಿದೆ. ಮಣ್ಣಿನ ಮಡಕೆಯಲ್ಲಿನ ನೀರು ಕುಡಿದರೆ ದಾಹ ಇಂಗುವುದಲ್ಲದೇ ಮನಸ್ಸಿಗೂ ಮುದ ನೀಡುತ್ತದೆ. ಫ್ರಿಜ್‌ ಇರುವ ಶ್ರೀಮಂತರೂ ಮಡಕೆಗಳ ಮೊರೆ ಹೋಗಿದ್ದಾರೆ‘ ಎನ್ನುತ್ತಾರೆ ಪಟ್ಟಣದ ನಿವಾಸಿ ಗದ್ದಿ ಪ್ರಕಾಶ.

‘ವಿದ್ಯುತ್‌ ಬೇಕಾಗಿಲ್ಲ. ದಿನದ 24 ಗಂಟೆಯೂ ನೈಸರ್ಗಿಕವಾದ ತಣ್ಣನೆಯ ನೀರು ದೊರೆಯುತ್ತದೆ. ಆರೋಗ್ಯಕ್ಕೂ ಮಡಕೆ ನೀರು ಉತ್ತಮ. ಅದಕ್ಕಾಗಿ ನಾವು ಫ್ರಿಜ್‌ ಇದ್ದರೂ ಮಡಕೆ ನೀರನ್ನೇ ಬಳಸುತ್ತೇವೆ’ ಎನ್ನುತ್ತಾರೆ ಬೇವಿನಾಳನ ನಾಗಮ್ಮ.

ಕುಂಬಾರರು ಮಡಕೆ ತಯಾರಿಕೆಗೆ ಆಧುನಿಕ ಸ್ಪರ್ಷ ನೀಡಿದ್ದಾರೆ. ಪನ್ನಾಪುರ ಮೊದಲಾದ ಗ್ರಾಮಗಳಿಗೆ ತೆರಳಿ ಮಣ್ಣಿನ ಕುಡಿಕೆ ಸಹಿತ ಇತರ ವಸ್ತುಗಳನ್ನು ಜನರು ಖರೀದಿಸುತ್ತಾರೆ.

‘ಪನ್ನಾಪುರದಲ್ಲಿ ಕುಂಬಾರಿಕೆಯನ್ನೇ ಆಶ್ರಯಿಸಿದ ಅನೇಕ ಕುಟುಂಬಗಳಿವೆ. ನಮ್ಮ ಕುಟುಂಬದವರೂ ತಲೆಮಾರುಗಳಿಂದ ಕುಲಕಸಬನ್ನು ಮುಂದುವರಿಸಿದ್ದೇವೆ. ಹಿಂದಿನಂತೆ ಕುಂಬಾರಿಕೆ ಸಲೀಸಾಗಿಲ್ಲ. ಮಣ್ಣು ಮೊದಲು ನಮ್ಮ ಭಾಗದಲ್ಲೇ ಸಿಗುತ್ತಿತ್ತು. ಈಗ ಸಿಂಧನೂರ ತಾಲ್ಲೂಕು ಸಾಲಗುಂದಾ, ಸಹಿತ ವಿವಿಧೆಡೆಯಿಂದ ಟ್ರ್ಯಾಕ್ಟರ್‌ಗಳಲ್ಲಿ ಹಣ ನೀಡಿ, ಕೂಲಿ ಪಾವತಿಸಿ ತರಬೇಕಿದೆ. ಮನೆಯವರೇ ಮಣ್ಣಿನ ವಸ್ತುಗಳನ್ನು ಸಿದ್ದಪಡಿಸುತ್ತೇವೆ. ಪಟ್ಟಣದ ವಾರದ ಸಂತೆಯಾದ ಬುಧವಾರ ಕಡ್ಡಾಯವಾಗಿ ಬಯಲಿಗಿಟ್ಟು ವ್ಯಾಪಾರ ಮಾಡುತ್ತೇವೆ. ಉಳಿದ ದಿನಗಳಲ್ಲಿ ಮಾರಾಟದ ಭರಾಟೆ ಕಡಿಮೆ ಇರುತ್ತದೆ’ ಎಂದು ಪಟ್ಟಣದ ದಲಾಲಿ ಬಜಾರ್‌ನ ತಿರುವಿನ ಬಳಿ ವಿವಿಧ ಆಕಾರಗಳ ಮಣ್ಣಿನ ವಸ್ತುಗಳನ್ನು ಮಾರಾಟ ಮಾಡುವ ತಾಲ್ಲೂಕಿನ ಪನ್ನಾಪುರ ಗ್ರಾಮದ ಶರಣಪ್ಪ ವೀರೇಶಪ್ಪ ಕುಂಬಾರ ತಿಳಿಸಿದರು.

ಪಟ್ಟಣದ ವಿವಿಧೆಡೆ ಮಣ್ಣಿನ ಮಡಗಳ ಸಹಿತ ಇತರ ವಸ್ತುಗಳ ಮಾರಾಟ ನಡೆದಿದೆ. ಪನ್ನಾಪುರ, ಬೇವಿನಾಳ ಗ್ರಾಮದಲ್ಲಿ ಕುಂಬಾರಿಕೆಯನ್ನೇ ಕುಲಕಸಬನ್ನಾಗಿ ಆಶ್ರಯಿಸಿದ ಅನೇಕ ಕುಟುಂಬಗಳಿವೆ.

ಈ ವರ್ಷ ಮಣ್ಣಿನ ಮಡಕೆಗಳಿಗೆ ಭಾರಿ ಬೇಡಿಕೆ ಇದೆ. ನಿರಂತರವಾಗಿ ಮಾರಾಟ ನಡೆದಿದೆ. ₹200ರಿಂದ ₹400ವರೆಗೆ ಮಾರಾಟವಾಗುತ್ತಿವೆ. ಕುಲಕಸಬು ಆಗಿರುವುದರಿಂದ ವ್ಯಾಪಾರ ಎಷ್ಟಾದರೂ ಲೆಕ್ಕಿಸದೇ ಮುಂದುವರೆಸಿದ್ದೇವೆ
ಶರಣಪ್ಪ ವೀರೇಶಪ್ಪ ಕುಂಬಾರ ಪನ್ನಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT