ಕಾರಟಗಿ: ಪಟ್ಟಣದ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ 14ನೇ ವಾರ್ಡ್‌ನ ರೇಖಾ ರಾಜಶೇಖರ ಆನೇಹೊಸೂರು ಅಧ್ಯಕ್ಷರಾಗಿ ಮತ್ತು 2ನೇ ವಾರ್ಡ್‌ನ ದೇವಮ್ಮ ಛಲವಾದಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಒಟ್ಟು 23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ 11, ಬಿಜೆಪಿ 11, ಜೆಡಿಎಸ್‌ನ ಒಬ್ಬ ಸದಸ್ಯರಿದ್ದರು. ಈಚೆಗೆ ಕಾಂಗ್ರೆಸ್ ಸದಸ್ಯರೊಬ್ಬರು ಮೃತಪಟ್ಟಿದ್ದರಿಂದ ಕಾಂಗ್ರೆಸ್ ಬಲ 10ಕ್ಕೆ ಕುಸಿದಿತ್ತು. ಜೆಡಿಎಸ್ ಸದಸ್ಯ, ಬಿಜೆಪಿಯ ಮೂವರು ಸದಸ್ಯರು ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡಿದ್ದರು. ಇದರಿಂದ ಬಿಜೆಪಿ ಕೈಚೆಲ್ಲಿ ಕುಳಿತುಕೊಳ್ಳದೇ, ಅಧಿಕಾರದ ಗದ್ದುಗೆಗೆ ಬರಲು ಸದಸ್ಯರಿಗೆ ವಿಪ್ ಜಾರಿಗೊಳಿಸಿ, ಅಧಿಕಾರ ವಂಚಿತ ಕಾಂಗ್ರೆಸ್ ಸದಸ್ಯರು ತಮ್ಮ ಪಕ್ಷಕ್ಕೆ ಬಂದರೆ ಅಧಿಕಾರದ ಗದ್ದುಗೆಗೇರಬಹುದು ಎಂಬ ಲೆಕ್ಕಾಚಾರದಲ್ಲಿತ್ತು. ಆದರೆ ವಿಪ್ ಜಾರಿ ಮಾಡಿದರೂ ಬಿಜೆಪಿಯ ಮೂವರು ಸದಸ್ಯರು ಗೈರಾದರು.
ಬಿಜೆಪಿ ಲೆಕ್ಕಾಚಾರ ತಲೆಕೆಳಗಾಗಿ ಕಾಂಗ್ರೆಸ್ ಅಧಿಕಾರಕ್ಕೇರುವಲ್ಲಿ ಯಶಸ್ವಿಯಾಯಿತು. ಸಚಿವ, ಸಂಸದರ ತಲಾ ಒಂದು, ಕಾಂಗ್ರೆಸ್‌ನ 10, ಜೆಡಿಎಸ್‌ನ ಒಬ್ಬ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ತನ್ನದಾಗಿಸಿಕೊಂಡಿತು.
ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಎಂ. ಕುಮಾರಸ್ವಾಮಿ ವಿವರ ನೀಡಿ, ‘ರೇಖಾ ರಾಜಶೇಖರ ಆನೇಹೊಸೂರು 13 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಪ್ರತಿಸ್ಫರ್ಧಿ ಬಿಜೆಪಿ ಅಭ್ಯರ್ಥಿ ಮೌನಿಕಾ ಧನಂಜಯ 8 ಮತ ಪಡೆದು ಪರಾಭವಗೊಂಡರು. ದೇವಮ್ಮ ಗಂಗಪ್ಪ ಛಲವಾದಿ 13 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು. ಆನಂದ ಮ್ಯಾಗಳಮನಿ 8 ಮತ ಪಡೆದು ಸೋತರು’ ಎಂದು ತಿಳಿಸಿದರು.
ಸಚಿವ, ಸಂಸದ ಮತ ಚಲಾವಣೆ: ಸಚಿವ ಶಿವರಾಜ ತಂಗಡಗಿ ಮತ್ತು ಸಂಸದ ರಾಜಶೇಖರ ಹಿಟ್ಬಾಳ, ಜೆಡಿಎಸ್ ಅಭ್ಯರ್ಥಿ ಕೆ. ಎಚ್. ಸಂಗನಗೌಡ ಮತ ಚಲಾಯಿಸಿದ್ದರಿಂದ ಪುರಸಭೆ ಆಡಳಿತ ‘ಕೈ’ ವಶವಾಯಿತು.
ಫಲಿತಾಂಶ ಪ್ರಕಟಿಸುತ್ತಿದ್ದಂತೆಯೇ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ ಹೂಮಾಲೆ ಹಾಕಿ ಅಭಿನಂದಿಸಿದರು.
ರಾಜಕೀಯ ಸೇಡು ನನಗಿಲ್ಲ: ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವರಾಜ ತಂಗಡಗಿ, ರಾಜಕೀಯ ಜಿದ್ದಾಜಿದ್ದಿ, ಸೇಡು ನನಗೆ ಗೊತ್ತಿಲ್ಲ. ಜಿದ್ದಾಜಿದ್ದು ರಾಜಕೀಯದಲ್ಲಿ ಚುನಾವಣೆ ಸಂದರ್ಭದಲ್ಲಿರುವುದು ಸಹಜ. ಎಲ್ಲಾ ಚುನಾವಣೆಯಲ್ಲೂ ಅದನ್ನು ಪ್ರಯೋಗಿಸುವುದಿಲ್ಲ. ಅಭಿವೃದ್ದಿ ವಿಷಯದಲ್ಲಿ ವಿರೋಧ ಪಕ್ಷವನ್ನು ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡುತ್ತೇವೆ ಎಂದರು.
ವಿರಾಮ: ಸಂಖ್ಯಾಬಲದ ಸರ್ಕ್‌ಸ್‌ನಲ್ಲಿ ಕಾಂಗ್ರೆಸ್, ಬಿಜೆಪಿ ಮುಖಂಡರು ವಾರದಿಂದ ನಡೆದ ಶತಪ್ರಯತ್ನಕ್ಕೆ ಮಂಗಳವಾರ ವಿರಾಮ ಬಿದ್ದಿದೆ. ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದರೆ, ವಿಪ್ ಜಾರಿ ಮಾಡಿಯೂ ತಮ್ಮ ಸದಸ್ಯರ ಬೆಂಬಲ ಪಡೆಯುವಲ್ಲಿ ಬಿಜೆಪಿ ವಿಫಲವಾಗಿ ಸೋಲು ಅನುಭವಿಸಿದೆ.
ವಿಜಯೋತ್ಸವದ ಸಂಭ್ರಮ: ಚುನಾವಣಾ ಫಲಿತಾಂಶ ಪ್ರಕಟಗೊಂಡು, ಮುಖಂಡರು ತೆರಳುತ್ತಿದ್ದಂತೆಯೇ ಕಾರ್ಯಕರ್ತರು ವಿಜಯೋತ್ಸವದ ಮೆರವಣಿಗೆ ಆರಂಭಿಸಿ, ಭಾರಿ ಪ್ರಮಾಣದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.
ಪುರಸಭೆ ಸದಸ್ಯರಾದ ಕೆ. ಎಚ್. ಸಂಗನಗೌಡ, ಹಿರೇಬಸಪ್ಪ ಸಜ್ಜನ್, ಮಂಜುನಾಥ ಮೇಗೂರು, ದೊಡ್ಡ ಬಸವರಾಜ ಬೂದಿ, ಶ್ರೀನಿವಾಸ್ ಕಾನುಮಲ್ಲಿ, ಸೌಮ್ಯ ಮಹೇಶ್ ಕಂದಗಲ್, ಪದ್ಮಾವತಿ ನಾಗರಾಜ್, ಹುಸೇನಬೀ ನನುಸಾಬ್, ಸುಜಾತ ನಾಗರಾಜ್ ಭಜಂತ್ರಿ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್, ನಗರ ಘಟಕ ಅಧ್ಯಕ್ಷ ಅಯ್ಯಪ್ಪ ಉಪ್ಪಾರ ಮುಖಂಡರಾದ ಶಿವರೆಡ್ಡಿ ನಾಯಕ, ಕೆ. ಸಿದ್ದನಗೌಡ, ಶರಣಪ್ಪ ಪರಕಿ, ಚನ್ನಬಸವ ಸುಂಕದ, ಶರಣಯ್ಯಸ್ವಾಮಿ ಸಾಹುಕಾರ, ಬಸವರಾಜ ಪಗಡದಿನ್ನಿ, ಸಿ. ಗದ್ದೆಪ್ಪ, ಶರಣಪ್ಪ ದಿವಟರ್, ಮಲ್ಲಿಕಾರ್ಜುನ ತೊಂಡಿಹಾಳ, ಸೋಮನಾಥ ಗಚ್ಚಿನಮನಿ, ಚಂದ್ರಶೇಖರ ಆನೇಹೊಸೂರ ಸಹಿತ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.