ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲಬುರ್ಗಾ | ಕೆರೆಗೆ ನೀರು: 38 ನಿಮಿಷದಲ್ಲಿ ಪೂರ್ಣಗೊಂಡ ಉದ್ಘಾಟನಾ ಕಾರ್ಯಕ್ರಮ

ಪತ್ರಿಕಾಗೋಷ್ಠಿಗೆ ಎರಡು ನಿಮಿಷ ಮೊದಲು ಮುಗಿದ ಸಮಾರಂಭ
Last Updated 29 ಮಾರ್ಚ್ 2023, 10:03 IST
ಅಕ್ಷರ ಗಾತ್ರ

ಯಲಬುರ್ಗಾ (ಕೊಪ್ಪಳ ಜಿಲ್ಲೆ): ಭವ್ಯ ವೇದಿಕೆ ನಿರ್ಮಿಸಿ ಸಾವಿರಾರು ಜನರ ಎದುರು ಯಲಬುರ್ಗಾ ತಾಲ್ಲೂಕಿನ ಕೆರೆಗಳಿಗೆ ಕೃಷ್ಣಾ ಬಿ ಸ್ಕೀಮ್‌ನಿಂದ ನೀರು ಹರಿಸುವ ಕಾರ್ಯಕ್ರಮಕ್ಕೆ ಅದ್ದೂರಿ ಚಾಲನೆ ಕೊಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಚುನಾವಣಾ ಆಯೋಗದ ಪತ್ರಿಕಾಗೋಷ್ಠಿಯಿಂದಾಗಿ ಕಾರ್ಯಕ್ರಮ ನಿಗದಿತ ಅವಧಿಗಿಂತ ಮೊದಲೇ ಶುರುವಾಗಿ 38 ನಿಮಿಷಗಳಲ್ಲಿ ಮುಗಿದು ಹೋಯಿತು.

ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ ನೀರಾವರಿ ವಿಷಯ ಎಲ್ಲ ರಾಜಕೀಯ ಪಕ್ಷಗಳಿಗೂ ಪ್ರತಿಷ್ಠೆಯಾಗಿ ಪರಿಣಮಿಸಿದೆ. ರಾಜಕೀಯ ವಾಕ್ಸಮರಕ್ಕೂ ಹಾಗೂ ಚುನಾವಣೆಗೂ ಪ್ರಮುಖ ಅಸ್ತ್ರವಾಗಿದೆ. ಹೀಗಾಗಿ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ, ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್‌ ಅದ್ಧೂರಿ ಸಿದ್ಧತೆ ಮಾಡಿಕೊಂಡಿದ್ದರು. ಮುಖ್ಯಮಂತ್ರಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಬೇಕಾಗಿತ್ತು. ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನಲ್ಲಿಯೇ ಉಳಿದುಕೊಂಡರು. ವಿಜಯಪುರದಿಂದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆತುರದಲ್ಲಿ ವೇದಿಕೆಗೆ ಬಂದು ನೀರು ಹರಿಸುವ ಕಾರ್ಯಕ್ಕೆ ಚಾಲನೆ ಕೊಟ್ಟರು.

11 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ 10 ನಿಮಿಷ ಮೊದಲೇ ಶುರುವಾಯಿತು. ಪ್ರತಿ ಹೆಜ್ಜೆಯಲ್ಲಿಯೂ ಆತುರ, ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ ಶುರುವಾಗುವ ಮೊದಲೇ ಕಾರ್ಯಕ್ರಮ ಮುಗಿಸುವ ಲೆಕ್ಕಾಚಾರ ಕಂಡುಬಂತು.

ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ರತ್ನಂ ಪಾಂಡೆ ಸ್ವಾಗತ ಭಾಷಣ ಮುಗಿಸುತ್ತಿದ್ದಂತೆ ಸಂಸದ ಸಂಗಣ್ಣ ಕರಡಿ ಮಾತನಾಡಿ ‘ಯಲಬುರ್ಗಾ ಕ್ಷೇತ್ರಕ್ಕೆ ನೀರು ಬರಲು ಹಾಲಪ್ಪ ಆಚಾರ್‌ ಕಾರಣ. ಪ್ರಧಾನಿ ನರೇಂದ್ರ ಮೋದಿ ಹಾಗೂ ನಿತಿನ್‌ ಗಡ್ಕರಿ ಅವರ ಶ್ರಮದಿಂದಾಗಿ ದೇಶದ ಹೆದ್ದಾರಿಗಳು ಅಭಿವೃದ್ಧಿ ಕಂಡಿವೆ. ಡಬಲ್‌ ಎಂಜಿನ್‌ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಚುನಾವಣೆಯಯಲ್ಲಿ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು’ ಎಂದು ಸರ್ಕಾರಿ ಕಾರ್ಯಕ್ರಮದಲ್ಲಿ ಪಕ್ಷದ ಪರ ಚುನಾವಣಾ ಪ್ರಚಾರ ಮಾಡಿದರು.

ಸಂಸದ ಮಾತು ಮುಂದುವರಿಸುತ್ತಿದ್ದಂತೆ ಅವರ ಪಕ್ಕದಲ್ಲಿ ಬಂದ ಹಾಲಪ್ಪ ಆಚಾರ್‌ ಅವರ ಆಪ್ತ ’ಸಮಯವಾಗುತ್ತಿದೆ’ ಎಂದು ಪಿಸುಗುಟ್ಟಿದರು. ತಕ್ಷಣವೇ ಅವರು ಮಾತು ನಿಲ್ಲಿಸಿದರು.

ಬಳಿಕ ಮಾತನಾಡಿದ ಹಾಲಪ್ಪ ಆಚಾರ್‌ ಎಲ್ಲರನ್ನೂ ಸ್ವಾಗತಿಸಿ ‘ಚುನಾವಣೆ ಆಯೋಗ ಪತ್ರಿಕಾಗೋಷ್ಠಿ ಕರೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಂದಿಲ್ಲ’ ಎಂದು ಭಾಷಣ ಮಾಡುತ್ತಿದ್ದಂತೆ ವೇದಿಕೆಗೆ ಸಚಿವ ಗೋವಿಂದ ಕಾರಜೋಳ ಬಂದರು. ಅವರನ್ನು ಸ್ವಾಗತಿಸಿ ಭಾಷಣ ಅರ್ಧದಲ್ಲಿಯೇ ಬಿಟ್ಟು ಒಟ್ಟು 24 ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಬಳಿಕ ಮಾತು ಮುಂದುವರಿಸಿದ ಹಾಲಪ್ಪ ‘ನೀರಾವರಿಗಾಗಿ ಕಾಂಗ್ರೆಸ್‌ ಏನೂ ಮಾಡಲಿಲ್ಲ. ಅಧಿಕಾರಕ್ಕೆ ಬಂದಾಗಲೇ ಶಿಕ್ಷಣ ಮತ್ತು ನೀರಾವರಿಗೆ ಆದ್ಯತೆ ಕೊಡುವುದಾಗಿ ಹೇಳಿದ್ದೆ. ಕೊಟ್ಟ ಮಾತಿನಂತೆ ನಾನು ಹಾಗೂ ನನ್ನ ಪಕ್ಷ ನಡೆದುಕೊಂಡಿದೆ’ ಎಂದರು.

ಹಾಲಪ್ಪ ಮಾತು ಮುಂದುವರಿಸಿದರೂ ಅವರ ಬಳಿ ಬಂದು ಕಾರಜೋಳ ಭಾಷಣ ಆರಂಭಿಸಿದರು. ‘3.25 ಲಕ್ಷ ಎಕರೆಗೆ ನೀರಾವರಿ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ. ಇದಕ್ಕಾಗಿ ₹3 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಹಿಂದೆ ಕಾಂಗ್ರೆಸ್‌ ನಮ್ಮ ನಡಿಗೆ ಕೃಷ್ಣೆಗೆ ಕಡೆ ಎಂದು ಪಾದಯಾತ್ರೆ ಮಾಡಿತ್ತು. ಆದರೂ ಒಂದು ಹನಿ ನೀರು ತರಲಿಲ್ಲ. ಕಾಂಗ್ರೆಸ್‌ನಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಈ ಯೋಜನೆಯನ್ನು ನಮ್ಮ ಸರ್ಕಾರ ಮಾಡಿದೆ. ಹಾಲಪ್ಪ ಆಚಾರ್‌ ಮಾಡಿದ್ದಾರೆ’ ಎಂದು ಕಾರಜೋಳ ಹೇಳಿದರು.

’ಕೆರೆಗಳಿಗೆ ನೀರು ತುಂಬಿಸುವ ಕಾರ್ಯದಿಂದಾಗಿ ಬರಗಾಲದಲ್ಲಿಯೂ ಇಲ್ಲಿ ಬಂಗಾರದಂಥ ಬೆಳೆ ಬೆಳೆಯಲು ಸಾಧ್ಯವಾಗುತ್ತದೆ. ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ, ವಿಧಾನ ಪರಿಷತ್‌ ಸದಸ್ಯೆ ಹೇಮಲತಾ ನಾಯಕ, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಹೀಗಿತ್ತು ಕಾರ್ಯಕ್ರಮದ ಟೈಮ್‌ ಲೈನ್‌

* 10.50: ಕಾರ್ಯಕ್ರಮ ಆರಂಭ

* 10.52: ನಾಡಗೀತೆ

* 10.55: ಜಿಲ್ಲಾ ಪಂಚಾಯಿತಿ ಸಿಇಒಯಿಂದ ಸ್ವಾಗತ

* 10.59: ಸಂಸದ ಸಂಗಣ್ಣ ಕರಡಿ ಭಾಷಣ

* 11.08: ಸಚಿವ ಹಾಲಪ್ಪ ಆಚಾರ್‌ ಭಾಷಣ

* 11.15: ವೇದಿಕೆಗೆ ಬಂದ ಸಚಿವ ಗೋವಿಂದ ಕಾರಜೋಳ

* 11.16: ಕಾರ್ಯಕ್ರಮ ಉದ್ಘಾಟನೆ

* 11.18: ವೇದಿಕೆಯಿಂದ ಎದ್ದು ಹೋದ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ಪೊಲೀಸ್ ವರಿಷ್ಠಾಧಿಕಾರಿ

* 11.28: ಕಾರ್ಯಕ್ರಮ ಮುಕ್ತಾಯ

* 11.29: ವೇದಿಕೆಯಿಂದ ಕೆಳಗಡೆ ಇಳಿದ ಜನಪ್ರತಿನಿಧಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT