ಕುಷ್ಟಗಿ: ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ವೇಳಾಪಟ್ಟಿ ಮತ್ತು ಮಾದರಿ ನೀತಿ ಸಂಹಿತೆ ಜಾರಿಗೊಳಿಸುವ ಸುಳಿವು ಅರಿತ ಇಲ್ಲಿಯ ಶಾಸಕ ಅಮರೇಗೌಡ ಬಯ್ಯಾಪುರ ಅಳಿದುಳಿದ ಕೆಲವು ಕಾಮಗಾರಿಗಳಿಗೆ ಬುಧವಾರ ಗಡಿಬಿಡಿಯಲ್ಲೇ ಅಡಿಗಲ್ಲು ಹಾಕಿದ್ದು ಕಂಡುಬಂದಿತು.
ಬೆಳಿಗ್ಗೆಯಿಂದಲೇ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಮಿಂಚಿನ ಸಂಚಾರ ಆರಂಭಿಸಿದ ಶಾಸಕ ಬಯ್ಯಾಪುರ ಇಲ್ಲಿಯ ಸರ್ಕಾರಿ ಪದವಿ ಕಾಲೇಜಿನ ಕಟ್ಟಡ ಉನ್ನತೀಕರಣಕ್ಕೆ ಸಂಬಂಧಿಸಿದಂತೆ ವಸತಿ ಇಲಾಖೆಗೆ ಸೇರಿದ ಕಾಮಗಾರಿಗೆ ಅವಸರದಲ್ಲಿ ಭೂಮಿಪೂಜೆ ನೆರವೇರಿಸಿದರು.
ಅಲ್ಲದೆ ಕೆಲಸದ ಸ್ಥಳದಲ್ಲಿ ಅಳವಡಿಸಲಾಗಿದ್ದ ಶಾಸಕ ಬಯ್ಯಾಪುರ ಭಾವಚಿತ್ರದ ಫ್ಲೆಕ್ಸ್‌ನ್ನು ಕಾಂಗ್ರೆಸ್ ಕಾರ್ಯಕರ್ತರೇ ತೆರವುಗೊಳಿಸಿಕೊಂಡು ಜಾಗ ಖಾಲಿ ಮಾಡಿದರು. ಈ ದಿನದ ಭೂಮಿಪೂಜೆ ಮತ್ತು ಅಡಿಗಲ್ಲು ಹಾಕುವ ಸರ್ಕಾರದ ಕಾರ್ಯಕ್ರಮಗಳು ಶಾಸಕ ಅಮರೇಗೌಡ ಬಯ್ಯಾಪುರ ಅವರ ಅಧಿಕಾರದ ಅವಧಿಯ ಕೊನೆಯ ಕಾರ್ಯಕ್ರಮಗಳಾಗಿದ್ದವು.
ಪಕ್ಷದ ಮುಖಂಡರು, ಬೆಂಬಲಿಗರೊಂದಿಗೆ ಬಳೂಟಗಿ ಹಾಗೂ ಶಿರಗುಂಪಿ ಗ್ರಾಮಗಳಿಗೆ ತೆರಳಿದ ಬಯ್ಯಾಪುರ 11 ಗಂಟೆ ಒಳಗಾಗಿ ಅಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರಿಟ್ ರಸ್ತೆ ಕಾಮಗಾರಿಗಳಿಗೂ ಅವಸರದಲ್ಲಿ ಭೂಮಿಪೂಜೆಯ ಸಂಪ್ರದಾಯ ನೆರವೇರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.