ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಇಎ ಅಣಕು ಪ್ರಕ್ರಿಯೆ ಯಡವಟ್ಟು; ವಿದ್ಯಾರ್ಥಿಗಳಿಗೆ ಸಂಕಷ್ಟ

11 ಲಕ್ಷದ ರ‍್ಯಾಂಕ್‌ ಅಭ್ಯರ್ಥಿಗೆ ಸರ್ಕಾರಿ ಕಾಲೇಜ್‌!
Published 12 ಆಗಸ್ಟ್ 2023, 13:50 IST
Last Updated 12 ಆಗಸ್ಟ್ 2023, 13:50 IST
ಅಕ್ಷರ ಗಾತ್ರ

ಕುಷ್ಟಗಿ (ಕೊಪ್ಪಳ): ‘11 ಲಕ್ಷಕ್ಕಿಂತಲೂ ಅಧಿಕ ರ್‍ಯಾಂಕಿಂಗ್‌ ಪಡೆದಿರುವ ಅಭ್ಯರ್ಥಿಗೆ ಕೊಪ್ಪಳ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟ್‌ ಹಂಚಿಕೆಯಾಗುವುದಾದರೆ ಅತಿ ಹೆಚ್ಚು ಅಂಕಗಳನ್ನು ಪಡೆದವರಿಗೆ ಅಂಥ ಅವಕಾಶ ಏಕಿಲ್ಲ? ಉತ್ತಮ ರ್‍ಯಾಂಕ್‌ ಪಡೆದವರಿಗೆ ಉತ್ತಮ ಕಾಲೇಜುಗಳ ಬದಲು ಹೊಸದಾಗಿ ಆರಂಭವಾದ ಕಾಲೇಜುಗಳಲ್ಲಿ ಸೀಟ್‌ ಸಿಕ್ಕಿದೆ ಇದೆಂಥ ಅನ್ಯಾಯ? ಮುಂದುವರೆದ ತಾಂತ್ರಿಕ ಯುಗದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಈ ಯದ್ವಾತದ್ವಾ ಪ್ರಕ್ರಿಯೆ ಎಷ್ಟು ಮಕ್ಕಳು, ಪಾಲಕರನ್ನು ಸಂಕಷ್ಟಕ್ಕೆ ದೂಡಿದೆ ಗೊತ್ತೆ?’

ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಕೆಇಎ ನಡೆಸಿದ ಅಣಕು ಸೀಟು ಹಂಚಿಕೆ ಪ್ರಕ್ರಿಯೆಯಲ್ಲಿನ ಗೊಂದಲ ಕುರಿತು ಬಹುತೇಕ ಪಾಲಕರು ಅಸಮಾಧಾನ ಹೊರಹಾಕಿದ್ದು ಹೀಗೆ.

ಶುಕ್ರವಾರ ರಾತ್ರಿ ಅಣಕು ಸೀಟು ಹಂಚಿಕೆ ಪ್ರಕ್ರಿಯೆ ಮಾಹಿತಿಯನ್ನು ಕೆಇಎ ತನ್ನ ವೆಬ್‌ಸೈಟ್‌ದಲ್ಲಿ ಪ್ರಕಟಿಸಿದರೂ ಶನಿವಾರ ಬೆಳಗಿನವರೆಗೂ ವೆಬ್‌ಸೈಟ್‌ ತೆರೆದುಕೊಳ್ಳದೆ ವಿದ್ಯಾರ್ಥಿಗಳು ರಾತ್ರಿಪೂರ್ತಿ ಚಡಪಡಿಸಿದರು. ಬೆಳಿಗ್ಗೆ ವೆಬ್‌ಸೈಟ್‌ದಲ್ಲಿ ಬಿಡುಗಡೆಯಾದ ಅಣಕು ಫಲಿತಾಂಶ ವಿದ್ಯಾರ್ಥಿಗಳನ್ನು ಬೆಚ್ಚಿಬೀಳುವಂತೆ ಮಾಡಿತು.

ಸೀಟ್‌ ದೊರೆಯುವ ಭರವಸೆಯಲ್ಲಿದ್ದ ಉತ್ತಮ ಅಂಕ ಪಡೆದವರು ಗೊಂದಲಕ್ಕೆ ಒಳಗಾದರೆ ಅನೇಕ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗಿರುವುದು ಗೊತ್ತಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಮಾತ್ರ ಈ ಸಮಸ್ಯೆ ಎಂದು ಕೆಇಎ ನಿರ್ದೇಶಕಿ ಹೇಳಿದ್ದರೂ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಇಂಥ ಸಮಸ್ಯೆ ಕಂಡುಬಂದಿದೆ ಎಂದು ಪಾಲಕರು 'ಪ್ರಜಾವಾಣಿ'ಗೆ ದೂರಿದರು.

ನೀಟ್‌ ಪರೀಕ್ಷೆಯಲ್ಲಿ ಅರ್ಹತೆ ಪಡೆಯದವರು, 300-400ಕ್ಕಿಂತ ಕಡಿಮೆ ಅಂಕ ಪಡೆದವರಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಹಂಚಿಕೆಯಾಗಿದೆ. ಆದರೆ, 371ಜೆ ಅನ್ವಯ ಮೀಸಲಾತಿ ಹೊಂದಿದ ಅರ್ಹರಿಗೆ ಸೀಟ್‌ ಹಂಚಿಕೆಯಾಗಿಲ್ಲ. ಸರ್ಕಾರಿ ಕಾಲೇಜು ಬೇಡ ಕನಿಷ್ಠ ಖಾಸಗಿ ಕಾಲೇಜಿನಲ್ಲಿಯ ಸರ್ಕಾರಿ ಸೀಟ್‌ ಆದರೂ ಸಿಗಬೇಕಿತ್ತು. ಆದರೆ ಅರ್ಹತೆ ಹೊಂದಿರುವ ಅನೇಕ ವಿದ್ಯಾರ್ಥಿಗಳು ತಮಗೆ 'ಸೀಟ್‌ ನಾಟ್‌ ಅಲಾಟ್) ಎಂಬ ಸಂದೇಶ ನೋಡಿ ಊಟ ಬಿಟ್ಟಿದ್ದಾರೆ. ಹೆಚ್ಚು ಅಂಕ ಬಂದರೂ ಉತ್ತಮ ಕಾಲೇಜುಗಳ ಬದಲು ಈ ವರ್ಷ ಆರಂಭಗೊಂಡಿರುವ ಕಾಲೇಜುಗಳ ಸೀಟ್‌ ಹಂಚಿಕೆಯಾಗಿದೆ. ಮಾನಸಿಕ ಗೊಂದಲಕ್ಕೆ ಒಳಗಾಗಿರುವ ಮಕ್ಕಳನ್ನು ಸಂತೈಸುವುದು ಪಾಲಕರಿಗೆ ಬಹಳಷ್ಟು ಕಷ್ಟವಾಗಿದೆ ಎಂದು ಪಾಲಕರಾದ ಉಮೇಶ ಮಾಲೀಪಾಟೀಲ, ನೇಮಣ್ಣ ಇತರರು ಪ್ರಾಧಿಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.

ಖಾಸಗಿ ಕಾಲೇಜಿನ ಸರ್ಕಾರಿ ಸೀಟ್‌ ಹಂಚಿಕೆಯಾಗುವ ನಿರೀಕ್ಷೆ ಇತ್ತು ಯಾವುದೂ ಇಲ್ಲ ಎಂದು ಕುಷ್ಟಗಿಯ ಭರತಕುಮಾರ, ವೆಂಕಟೇಶ ಇತರರು ಹೇಳಿದರು.

61 ಸಾವಿರ ರ್‍ಯಾಂಕಿಂಗ್‌ ಬಂದಿದೆ. ಉತ್ತಮ ಕಾಲೇಜು ಸಿಗಬೇಕಿತ್ತು. ಆದರೆ. ಚಿತ್ರದುರ್ಗದ ಹೊಸ ಕಾಲೇಜಿಗೆ ಹಂಚಿಕೆಯಾಗಿದೆ ಎಂದು ಬಾಗಲಕೋಟೆ ಜಿಲ್ಲೆಯ ಕಮತಗಿಯ ಅರುಣ ಹಳೇಪೇಟೆ ಬೇಸರ ವ್ಯಕ್ತಪಡಿಸಿದರು. ಅದೇ ರೀತಿ 68 ಸಾವಿರ ರ್‍ಯಾಂಕಿಂಗ್‌ ಪಡೆದರೂ 'ಸೀಟ್‌ ನಾಟ್‌ ಅಲಾಟ್'‌ ಎಂಬ ಸಂದೇಶ ನೋಡಿ ಮನಸ್ಸಿಗೆ ನೋವು ಉಂಟಾಗಿದೆ ಎಂದು ಹುನಗುಂದದ ವಿದ್ಯಾರ್ಥಿ ಪವನಕುಮಾರ ಬೇಸರ ತೋಡಿಕೊಂಡರು.

ರಾಜ್ಯದ ಮೆರಿಟ್‌ ಪಟ್ಟಿ ಏಕಿಲ್ಲ?:

ನೀಟ್‌ ಪರೀಕ್ಷೆಯಲ್ಲಿ ಅರ್ಹತೆ ಪಡೆದವರು ಮತ್ತು ಅವರು ಗಳಿಸಿದ ಅಂಕಗಳು ಎಷ್ಟು ಎಂಬ ವಿವರಗಳನ್ನು ಒಳಗೊಂಡ ಮೆರಿಟ್‌ ಪಟ್ಟಿಯನ್ನು ಬೇರೆ ಬೇರೆ ರಾಜ್ಯಗಳು ತಮ್ಮ ವೆಬ್‌ಸೈಟ್‌ದಲ್ಲಿ ಮೊದಲೇ ಪ್ರಕಟಿಸಿದ್ದರಿಂದ ಅಲ್ಲಿ ಗೊಂದಲ ಇಲ್ಲ. ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾತ್ರ ಇದೂವರೆಗೂ ಮೆರಿಟ್‌ ಪಟ್ಟಿ ಬಿಡುಗಡೆ ಮಾಡಿಲ್ಲ. ಒಟ್ಟಾರೆ ಪ್ರಾಧಿಕಾರದ ಪ್ರಕ್ರಿಯೆಯಲ್ಲಿ ಸ್ಪಷ್ಟತೆಯೇ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ ಎಂಬ ಆತಂಕ ಎದುರಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT