ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಜಿಲ್ಲೆಯಲ್ಲಿ ಭಾರಿ ಮಳೆ: ರಸ್ತೆಗೆ ನುಗ್ಗಿದ ಬೃಹತ್ ಪ್ರಮಾಣದ ನೀರು

Last Updated 6 ಅಕ್ಟೋಬರ್ 2022, 16:30 IST
ಅಕ್ಷರ ಗಾತ್ರ

ಕೊಪ್ಪಳ: ನಗರದಲ್ಲಿ ಗುರುವಾರ ಸುರಿದ ಮಳೆಯಿಂದಾಗಿ ಕೆಲ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿದರೆ, ಇಲ್ಲಿನ ಕಿನ್ನಾಳ ರಸ್ತೆಯ ಕಲ್ಯಾಣ ನಗರ, ಪ್ರಗತಿ ನಗರ ಮತ್ತಿತರ ಪ್ರದೇಶಗಳ ನಿವಾಸಿಗಳು ಪ್ರವಾಹ ಭೀತಿ ಎದುರಿಸುವಂತಾಗಿದೆ. ಮನೆಗಳಿಗೆ ನುಗ್ಗಿದ ನೀರನ್ನು ಜನ ಮೋಟಾರ್‌ ಬಳಸಿ ಹೊರ ಹಾಕಿದರು.

ಹಲವಾರು ವರ್ಷಗಳಿಂದ ಸುಮಾರು 40ಕ್ಕೂ ಹೆಚ್ಚು ಅಡಿ ಅಗಲದಲ್ಲಿ ಹರಿಯುತ್ತಿದ್ದ ಹಳ್ಳವನ್ನು ಅತಿಕ್ರಮಿಸಿ, ಕೇವಲ 8 ಅಡಿ ಅಗಲದ ಕಾಲುವೆಯನ್ನು ಮಾತ್ರ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ನಿಸರ್ಗ ಸಹಜವಾಗಿ ಹರಿಯುತ್ತಿದ್ದ ನೀರಿನ ಹರಿವಿಗೆ ಇದೀಗ ಮಾರ್ಗವಿಲ್ಲದಂತಾಗಿ, ನೀರು ರಸ್ತೆಗೆ ನುಗ್ಗಿದೆ. ರಸ್ತೆಯೇ ಹಳ್ಳವಾಗಿ ಪರಿಣಮಿಸಿದ್ದು, ಇದರಿಂದ ಜನ ಆತಂಕ ಎದುರಿಸುವಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ಕಿನ್ನಾಳ ರಸ್ತೆಯ ಹಳ್ಳವನ್ನು ಅತಿಕ್ರಮಣ ಮಾಡಿ ಕೆಲವು ಖಾಸಗಿ ವ್ಯಕ್ತಿಗಳು ಕಟ್ಟಡಗಳನ್ನು ನಿರ್ಮಿಸಿಕೊಂಡಿರುವ ಪರಿಣಾಮ ಈ ಸಮಸ್ಯೆಯಾಗಿದೆ. ಜಿಲ್ಲಾಡಳಿತ, ನಗರಸಭೆ, ಭಾಗ್ಯನಗರ ಪಟ್ಟಣ ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆ ಗಂಭೀರ ಸಮಸ್ಯೆಯ ಬಗ್ಗೆ ಕಣ್ಣು ತೆರೆದು ನೋಡಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಸುಮಾರು ಎರಡೂವರೆ ತಾಸು ಸುರಿದ ಮಳೆಗೆ ನಗರದ ಪ್ರಮುಖ ರಸ್ತೆಗಳು ಕೆರೆಗಳಂತೆ ಆಗಿದ್ದವು. ನೀರು ಸರಾಗವಾಗಿ ಹರಿದು ಹೋಗಲು ಅವಕಾಶವಿಲ್ಲದೆ ವಾಹನ ಸವಾರರು ಪರದಾಡುವಂತಾಯಿತು.

ಜಲಾವೃತ (ಮುನಿರಾಬಾದ್‌ ವರದಿ): ವ್ಯಾಪಕ ಮಳೆಯಾಗಿದ್ದು ಮುನಿರಾಬಾದ್ ಸಮೀಪ ಬೇವಿನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣ ಜಲಾವೃತವಾಗಿದೆ. ಬಿಸಿಯೂಟ ತಯಾರಿಸುವ ಅಡುಗೆಕೋಣೆ ನೀರಿನಿಂದ ತುಂಬಿ ಹೋಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT