ಕೊಪ್ಪಳ: ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ಸ್ಥಳೀಯವಾಗಿಯೇ ಗುಣಮಟ್ಟದ ತರಬೇತಿ ಲಭಿಸಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ದೇಶದ ಹಲವು ಕಡೆ ಖೇಲೊ ಇಂಡಿಯಾ ಯೋಜನೆಯಡಿ ಕ್ರೀಡಾ ಸೌಲಭ್ಯಗಳನ್ನು ಒದಗಿಸಿದೆ. ಅಂಥದ್ದೊಂದು ಕೇಂದ್ರ ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಾಣವಾಗಿದ್ದು, ಇದೇ 30ರಂದು ಉದ್ಘಾಟನೆಯಾಗಲಿದೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಆಡಳಿತಾತ್ಮಕ ಅನುಮೋದನೆಯಾಗಿ ₹4.5 ಕೋಟಿ ಮೊತ್ತ ಈ ಕಾಮಗಾರಿಗೆ ಲಭಿಸಿದ್ದು ಕಾಮಗಾರಿಯೂ ಪೂರ್ಣಗೊಂಡಿದೆ.
ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಅಂಕಣ, ವಾಲಿಬಾಲ್ ಅಂಕಣ, ಜಿಮ್, ಯೋಗ ಕೊಠಡಿ, ಪ್ರಥಮ ಚಿಕಿತ್ಸಾ ಕೊಠಡಿ, ಶೌಚಾಲಯ, ದಾಸ್ತಾನು ಕೊಠಡಿ, ಆಡಳಿತ ಕಚೇರಿ, ಸಭಾಂಗಣ ಮತ್ತು ಫಿಟ್‌ನೆಸ್ ಕೊಠಡಿ ಹೀಗೆ ಹಲವು ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗಿದೆ.
ಜಿಲ್ಲಾ ಕ್ರೀಡಾಂಗಣದಲ್ಲಿ ವಾಯುವಿಹಾರಕ್ಕೆ ಹಾಗೂ ವಿವಿಧ ಕ್ರೀಡೆಗಳನ್ನು ಆಡಲು ನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಜನ ಬರುತ್ತಾರೆ. ಒಳಾಂಗಣ ಕ್ರೀಡಾಂಗಣದಲ್ಲಿ ಸೌಲಭ್ಯಗಳ ಕೊರತೆ ಕಾರಣದಿಂದಾಗಿ ಅನೇಕರು ಕ್ರೀಡಾಂಗಣದ ಹೊರಭಾಗದಲ್ಲಿ ವಾಲಿಬಾಲ್ ಆಡುತ್ತಾರೆ. ವೃತ್ತಿಪರ ತರಬೇತಿ ಮತ್ತು ಪಂದ್ಯಗಳನ್ನು ನಡೆಸಲು ಕ್ರೀಡಾಂಗಣದ ಅಗತ್ಯವೂ ಇತ್ತು. ಕೇಂದ್ರದ ಯೋಜನೆಯಿಂದಾಗಿ ಸ್ಥಳೀಯ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ.
ಸಿಂಥೆಟಿಕ್‌ಗೆ ಪ್ರಸ್ತಾವ: ಇಲ್ಲಿನ ಯುವ ಸಬಲೀಕರಣ ಕ್ರೀಡಾ ಇಲಾಖೆಯ ನೂರಾರು ಜನ ಕ್ರೀಡಾಪಟುಗಳು ನಿತ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಣ್ಣಿನ ಅಂಕಣದಲ್ಲಿ ಅಭ್ಯಾಸ ಮಾಡಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಮೇಲೆ ಓಡುವ ಕಠಿಣ ಸವಾಲು ಎದುರಿಸಬೇಕಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿಯೇ ಮೈದಾನದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲು ಸಂಸದ ಸಂಗಣ್ಣ ಕರಡಿ ಪ್ರಸ್ತಾವ ಸಲ್ಲಿಸಿದ್ದು, ಇದು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಪ್ರಸ್ತಾವ ಹೋಗಬೇಕಾಗಿದೆ.
‘ಸ್ಥಳೀಯವಾಗಿಯೇ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣವಾದರೆ ನಾವೂ ರಾಷ್ಟ್ರೀಯ ಮಟ್ಟದಲ್ಲಿ ಎತ್ತರದ ಸಾಧನೆ ತೋರಲು ಅನುಕೂಲವಾಗುತ್ತದೆ. ಒಳಾಂಗಣ ಕ್ರೀಡಾಂಗಣದಿಂದ ವಾಲಿಬಾಲ್ ಮತ್ತು ಬ್ಯಾಡ್ಮಿಂಟನ್ ವೃತ್ತಿಪರ ತರಬೇತಿ ಗಳಿಸಿಕೊಳ್ಳಲು ಉತ್ತಮ ಕ್ರೀಡಾಂಗಣ ಲಭಿಸಿದಂತಾಗಿದೆ. ಸಿಂಥೆಟಿಕ್‌ನಿಂದಾಗಿ ಒಬ್ಬ ಅಥ್ಲೀಟ್‌ಗೆ ಎಲ್ಲ ರೀತಿಯಲ್ಲಿಯೂ ಅಭ್ಯಾಸ ನಡೆಸಲು ಅನುಕೂಲವಾಗಲಿದೆ’ ಎಂದು ಈಚೆಗೆ ರಾಷ್ಟ್ರೀಯ ಜೂನಿಯರ್ ಕ್ರೀಡಾಕೂಟ ಫೆಡರೇಷನ್ ಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಕೊಪ್ಪಳದ ಅಥ್ಲೀಟ್ ಸಚಿನ್ ಹೇಳಿದರು.
ಸಿಂಥೆಟಿಕ್ ಟ್ರ್ಯಾಕ್‌ಗೂ ಪ್ರಸ್ತಾವ: ಸಂಸದ ಸಂಗಣ್ಣ
ಸ್ಥಳೀಯ ಅಥ್ಲೀಟ್‌ಗಳಿಗೆ ಅನುಕೂಲ ಕಲ್ಪಿಸಲು ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದ್ದು ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಸದ ಸಂಗಣ್ಣ ಕರಡಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಒಳಾಂಗಣ ಕ್ರೀಡಾಂಗಣದಿಂದ ವಾಲಿಬಾಲ್ ಹಾಗೂ ಬ್ಯಾಡ್ಮಿಂಟನ್ ಕ್ರೀಡಾಪಟುಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ. ಇದರಿಂದ ಜಿಲ್ಲೆಯ ಕ್ರೀಡಾಪಟುಗಳು ಅಭ್ಯಾಸಕ್ಕಾಗಿ ಬೇರೆ ಕಡೆ ಹೋಗುವುದೂ ತಪ್ಪುತ್ತದೆ. ಟ್ರ್ಯಾಕ್ ನಿರ್ಮಾಣಕ್ಕೆ ಅನುದಾನ ಒದಗಿಸಲು ಕೇಂದ್ರ ಸರ್ಕಾರ ಸಿದ್ಧವಿದ್ದು ಕ್ರೀಡಾ ಇಲಾಖೆ ಈಗಾಗಲೇ ಪ್ರಸ್ತಾವ ನೀಡಿದೆ. ಇದು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಬರಬೇಕಾಗಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.