ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾವತಿ: ರೆಡ್ಡಿ ಮುಂದೆ ಅಭಿವೃದ್ಧಿ ಸವಾಲುಗಳ ಸರಣಿ

ಗಂಗಾವತಿ: ಹೊಸತನಕ್ಕೆ ಮಣೆ ಹಾಕಿದ ಮತದಾರರ, ಮೂಲ ಸೌಕರ್ಯಕ್ಕೆ ನೀಡಬೇಕಿದೆ ಆದ್ಯತೆ
Published 11 ಜೂನ್ 2023, 23:30 IST
Last Updated 11 ಜೂನ್ 2023, 23:30 IST
ಅಕ್ಷರ ಗಾತ್ರ

ಎನ್.ವಿಜಯ

ಗಂಗಾವತಿ: ರಾಜಕೀಯ ಜಿದ್ದಾಜಿದ್ದಿ, ಸಾಂಪ್ರದಾಯಿಕ ಮತಗಳಿಕೆಯ ಪೈಪೋಟಿ, ರಾಷ್ಟ್ರೀಯ ಪಕ್ಷಗಳ ಪ್ರಬಲ ಸವಾಲುಗಳ ನಡುವೆಯೂ ಗಂಗಾವತಿ ವಿಧಾನಸಭಾ ಕ್ಷೇತ್ರದ ಮತದಾರರು ಈ ಬಾರಿ ಹೊಸತನಕ್ಕೆ ಮಣೆ ಹಾಕಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಜನಾರ್ದನ ರೆಡ್ಡಿ ಅವರನ್ನು ಆಯ್ಕೆ ಮಾಡಿದ್ದು, ಅವರ ಮೇಲೆ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಹೊಣೆಗಾರಿಕೆ ಇದೆ.

ಹನುಮ ಉದಯಿಸಿದ ನಾಡು ಎಂದು ಹೆಸರಾದ ಗಂಗಾವತಿ ಕ್ಷೇತ್ರದಲ್ಲಿ ಹಿಂದಿನ ಶಾಸಕ ಪರಣ್ಣ ಮುನವಳ್ಳಿ ಅವರ ಅಭಿವೃದ್ಧಿ ಕೆಲಸಗಳ ಕೊರತೆ, ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಇಕ್ಬಾಲ್ ಅನ್ಸಾರಿ ಸುಲಭವಾಗಿ ಜನರ ಕೈಗೆ ಸಿಗುವುದಿಲ್ಲ ಎನ್ನುವ ದೂರಿನ ಕಾರಣಗಳು ಕೂಡ ರೆಡ್ಡಿ ಅವರ ಗೆಲುವಿಗೆ ಕಾರಣವಾದವು.

ಚುನಾವಣಾ ಪೂರ್ವದಲ್ಲಿ ಜನಾರ್ದನ ರೆಡ್ಡಿ ಜನರಿಗೆ ಪಕ್ಷದ ಪ್ರಣಾಳಿಕೆ, ಅಭಿವೃದ್ದಿ ಕೆಲಸಗಳ ಬಗ್ಗೆ ಭರವಸೆ ನೀಡಿದ್ದು, ಅವುಗಳನ್ನು ಯಾವಾಗ ಈಡೇರಿಸುತ್ತಾರೆ ಎಂದು ಜನ ನಿರೀಕ್ಷೆಗಳ ಮೂಟೆ ಹೊತ್ತು ಕಾತರದಿಂದ ಎದುರು ನೋಡುತ್ತಿದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇರಕಲ್ಲಗಡ, ಕಿನ್ನಾಳ, ವೆಂಕಟಗಿರಿ, ವಿಠಲಾಪುರ, ಆಗೋಲಿ ಭಾಗ ಒಣಭೂಮಿ ಹೊಂ‌ದಿದ್ದು, ಈ ಭಾಗ ನೀರಾವರಿ ಕ್ಷೇತ್ರ ಆಗಬೇಕಿದೆ. ಕೆರೆಗಳಿದ್ದರೂ ಪೂರ್ಣ ಪ್ರಮಾಣದಲ್ಲಿ ನೀರು ತುಂಬಿಸುವ ಕೆಲಸವಾಗಿಲ್ಲ.

ಗಂಗಾವತಿ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇಲ್ಲಿನ ಸಮಸ್ಯೆಗಳ ಈಡೇರಿಕೆ ಜೊತೆಗೆ ಹೊಸ ಅಭಿವೃದ್ಧಿ ಕೆಲಸಗಳು ಆಗಬೇಕಾದ ಅಗತ್ಯವಿದೆ. ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಹುಬ್ಬಳ್ಳಿಗಳಿಗೆ ಸಂಪರ್ಕ ಹೊಂದಿರುವ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಕರ್ಯ, ರಸ್ತೆಗಳ ನಿರ್ಮಾಣ, ಗಂಗಾವತಿ ನಗರಕ್ಕೆ ಬೈಪಾಸ್ ರಸ್ತೆ, ಆರ್.ಟಿ.ಒ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ದರೋಜಿಗೆ ರೈಲು ಸೌಲಭ್ಯ ಕಲ್ಪಿಸಬೇಕಾಗಿದೆ.

ರಾಜ್ಯದ ಭತ್ತದ ಕಣದ ಎಂದೇ ಹೆಸರಾದ ಗಂಗಾವತಿಯಲ್ಲಿ ಭತ್ತ ಅಭಿವೃದ್ಧಿ ಮಂಡಳಿ, ಕರಡಿಗಳ ವ್ಯಾಪಕ ಹಾವಳಿ ಇರುವ ಇರಕಲ್ಲಗಡ ಭಾಗದಲ್ಲಿ ಕರಡಿಧಾಮ ನಿರ್ಮಾಣ, ಜನಾರ್ದನ ರೆಡ್ಡಿ ಮನೆ ಸಮೀಪದಲ್ಲಿಯೇ ಇರುವ ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿ, ಮೂಲ ಸೌಕರ್ಯ, ಮಹಿಳಾ ಪದವಿ ಕಾಲೇಜು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸಿಬ್ಬಂದಿ ನೇಮಕ, ಗ್ರಾಮೀಣ ಭಾಗಗಳಿಗೆ ರಸ್ತೆ, ಸಾರಿಗೆ ಸೌಲಭ್ಯ, ಬಾಲಕರ, ಸಣ್ಣ ಉದ್ಯಮಗಳು, ಬಾಲಕಿಯರ ವಸತಿ ನಿಲಯ ಮತ್ತು ಉಪ ಬಂದಿಖಾನೆ ನಿರ್ಮಾಣವಾಗಬೇಕಾಗಿದೆ.  

ಗಂಗಾವತಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯ, ಒಳಚರಂಡಿ ವ್ಯವಸ್ಥೆ, ತ್ಯಾಜ್ಯ ವಿಲೇವಾರಿ, ದೂಳುಮುಕ್ತ ರಸ್ತೆ, ಪಾದಚಾರಿಗಳ ಮಾರ್ಗ, ರಸ್ತೆಗಳ ಒತ್ತುವರಿ ತೆರವು, ರಸ್ತೆಗಳ ವಿಸ್ತರಣೆ, ಸಾರ್ವಜನಿಕ ಶೌಚಾಲಯಗಳ ನಿರ್ಮಾಣ, ಶುದ್ದ ಕುಡಿಯುವ ನೀರಿನ ಘಟಕ, ಫಾರಂ-3 ಸಮಸ್ಯೆಗಳು ಇತ್ಯರ್ಥವಾಗಬೇಕಿವೆ.

ಬೀಳುವುದೇ ಲಗಾಮು?: ವಾಣಿಜ್ಯ ಕ್ಷೇತ್ರದಲ್ಲೂ ಜಿಲ್ಲೆಯಲ್ಲಿ ಮುಂದುವರಿದ ತಾಲ್ಲೂಕು ಕೇಂದ್ರವಾದ ಗಂಗಾವತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿವೆ. ಸಾರ್ವಜನಿಕರ ಬದುಕಿನ ಸ್ವಾಸ್ಥ್ಯ ಹಾಳು ಮಾಡುವ ಜೂಜಾಟಕ್ಕೆ ಲಗಾಮು ಹಾಕಬೇಕಾದ ಹೊಣೆಗಾರಿಕೆ ಪೊಲೀಸರ ಮೇಲಿದೆ. ತುಂಗಭದ್ರಾ ನದಿಪಾತ್ರದಲ್ಲಿ ಮರಳು ಸಾಗಾಣಿಕೆಗೂ ಕಡಿವಾಣ ಬೀಳಬೇಕಾಗಿದೆ.

ಈಡೇರಲಿವೆಯೇ ಭರವಸೆ: ಚುನಾವಣಾ ಪೂರ್ವದಲ್ಲಿ ರೆಡ್ಡಿ ಮತದಾರರಿಗೆ ನೀಡಿದ್ದ ಭರವಸೆಗಳನ್ನು ಭಾರಿ ಸುದ್ದಿ ಮಾಡಿದ್ದವು.

ನಿರ್ಗತಿಕರಿಗೆ ಡಬಲ್ ಬೆಡ್ ರೂಂ ಮನೆ, ಹಕ್ಕುಪತ್ರ ವಿತರಣೆ, ಮಹಿಳೆಯರಿಗೆ ಹೊಲಿಗೆ ಯಂತ್ರ ತರಬೇತಿ, ಬೃಹತ್ ಬಟ್ಟೆ ಗಾರ್ಮೆಂಟ್, ಕಾಂಕ್ರೀಟ್‌ ರಸ್ತೆಗಳ ನಿರ್ಮಾಣ, ದೇವಸ್ಥಾನಗಳ ಜೀರ್ಣೊದ್ದಾರ ಸೇರಿದಂತೆ ಅನೇಕ ಭರವಸೆಗಳನ್ನು ನೀಡಿದ್ದರು. ಡಬಲ್‌ ಬೆಡ್ ರೂಂ ಮನೆ ಭರವಸೆಯೇ ಎಲ್ಲರ ಗಮನ ಸೆಳೆದಿತ್ತು. ಈ ಭರವಸೆಯನ್ನು ಅವರು ಹೇಗೆ ಈಡೇರಿಸುತ್ತಾರೆ ಎನ್ನುವ ಪ್ರಶ್ನೆಯೂ ಇದೆ.

ಗಂಗಾವತಿ ವಿಧಾನಸಭಾ ಕ್ಷೇತ್ರದ ಭಟ್ಟರ ನರಸಾಪುರಕ್ಕೆ ಹೋಗುವ ರಸ್ತೆ ಹದಗೆಟ್ಟಿರುವುದು
ಗಂಗಾವತಿ ವಿಧಾನಸಭಾ ಕ್ಷೇತ್ರದ ಭಟ್ಟರ ನರಸಾಪುರಕ್ಕೆ ಹೋಗುವ ರಸ್ತೆ ಹದಗೆಟ್ಟಿರುವುದು
ಅಭಿವೃದ್ಧಿಗೆ ಕಾಯುತ್ತಿರುವ ಅಂಜನಾದ್ರಿ ಬೆಟ್ಟ
ಅಭಿವೃದ್ಧಿಗೆ ಕಾಯುತ್ತಿರುವ ಅಂಜನಾದ್ರಿ ಬೆಟ್ಟ
ಗುರುಕಿರಣ್
ಗುರುಕಿರಣ್
ಜೈಬುನ್ನೀಸಾ ಬೇಗಂ
ಜೈಬುನ್ನೀಸಾ ಬೇಗಂ
ದೇವರಾಜ್ ಗುಡದಳ್ಳಿ
ದೇವರಾಜ್ ಗುಡದಳ್ಳಿ
ಅಶೋಕಸ್ವಾಮಿ ಹೇರೂರು
ಅಶೋಕಸ್ವಾಮಿ ಹೇರೂರು
ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ

ತಾಲ್ಲೂಕು ಕ್ರೀಡಾಂಗಣದಲ್ಲಿ ಸ್ವಚ್ಚತೆ ಮರೀಚಿಕೆಯಾಗಿದೆ. ಸಂಜೆ ವೇಳೆಗೆ ಕುಡುಕರ ತಾಣವಾಗುತ್ತದೆ. ಈಜುಕೊಳ ಹಾಗೂ ಶೌಚಾಲಯ ದುರಸ್ತಿಗೆ ಕಾದಿವೆ. ಒಳಾಂಗಣ ಕ್ರೀಡಾಂಗಣ ಇದ್ದೂ ಇಲ್ಲದಂತಾಗಿದ್ದು ಇದರತ್ತ ಹೊಸ ಶಾಸಕರು ಗಮನ ಹರಿಸಬೇಕು ಗುರುಕಿರಣ್ ಸದಸ್ಯ ಗಂಗಾವಗಿ ಇನ್‌ಸ್ಟಿಟ್ಯೂಟ್‌ ಆಫ್‌ ಕ್ರಿಕೆಟ್

ಗಂಗಾವತಿಯಲ್ಲಿ ಎಂಜನಿಯರಿಂಗ್ ನರ್ಸಿಂಗ್ ಕೃಷಿ ಪದವಿ ಪೂರ್ವ ಮಹಿಳಾ ಕಾಲೇಜುಗಳಿದ್ದು ಕ್ಷೇತ್ರದಲ್ಲಿ ವಿದ್ಯಾರ್ಥಿನಿಯರಿಗೆ ಇನ್ನಷ್ಟು ವಸತಿ ನಿಲಯಗಳ ಅಗತ್ಯವಿದೆ. ಮಹಿಳಾ ಪದವಿ ಕಾಲೇಜು ಬೇಕಾಗಿದೆ. ಮಹಿಳೆಯರ ಉನ್ನತ ಶಿಕ್ಷಣಕ್ಕೆ ಸ್ಥಳೀಯವಾಗಿಯೇ ಅವಕಾಶ ಸಿಗಬೇಕು ಜೈಬುನ್ನೀಸಾ ಬೇಗಂ ಗುಂಡಮ್ಮ ಕ್ಯಾಂಪ್ ನಿವಾಸಿ

ವಿದ್ಯಾರ್ಥಿಗಳ ಶಿಕ್ಷಣ ವಸತಿ ಸೌಲಭ್ಯಕ್ಕೆ ಒತ್ತು ನೀಡಿ ನಿರುದ್ಯೋಗ ಸಮಸ್ಯೆ ಈಡೇರಿಸಲು ಕ್ಷೇತ್ರದಲ್ಲಿ ಕಾರ್ಖಾನೆಗಳನ್ನು ಆರಂಭಿಸಲು ಪ್ರಯತ್ನಿಸಬೇಕು. ಅಂಜನಾದ್ರಿ ಪಂಪಾಸರೋವರ ಭಾಗವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮಕ್ಕೆ ಉತ್ತೇಜಿಸಬೇಕು ದೇವರಾಜ್ ಗುಡದಳ್ಳಿ ವಿದ್ಯಾರ್ಥಿ ಗಂಗಾವತಿ

ಗಾರ್ಮೆಂಟ್ ಕರ್ಪೂರ ಮೇಣದಬತ್ತಿ ಊದು ಬತ್ತಿ ಟೀ ಜ್ಯೂಸ್ ಪೇಪರ್ ಗ್ಲಾಸ್ ಊಟದ ತಟ್ಟೆಯಂತಹ ಸಣ್ಣ ಉದ್ಯಮಗಳು ಆರಂಭವಾಗಬೇಕಾದ ಅಗತ್ಯವಿದೆ. ಭತ್ತ ಸಾಗಾಟಕ್ಕೆ ದರೋಜಿ ರೈಲ್ವೆ ಮಾರ್ಗ ತುರ್ತಾಗಿ ಆಗಬೇಕಾಗಿದೆ. ಅಶೋಕಸ್ವಾಮಿ ಹೇರೂರು ಅಧ್ಯಕ್ಷ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ

ಗಂಗಾವತಿ ಕ್ಷೇತ್ರದ ಸಮಗ್ರ ಅಭಿವೃದ್ಧಿ ನನ್ನ ಕನಸು. ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇನೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸುವೆ. ಆಗ ಪಕ್ಷದ ಶಕ್ತಿ ಮತ್ತಷ್ಟು ಹೆಚ್ಚಾಗಲಿದೆ. ಅಭಿವೃದ್ಧಿಗೂ ಅನುಕೂಲವಾಗುತ್ತದೆ ಜನಾರ್ದನ ರೆಡ್ಡಿ ಶಾಸಕ ಗಂಗಾವತಿ

ಅಂಜನಾದ್ರಿ ಅಭಿವೃದ್ಧಿ; ಎಲ್ಲರ ಚಿತ್ತ ಚುನಾವಣಾ ಪೂರ್ವದಲ್ಲಿ ಅಂಜನಾದ್ರಿ ಅಭಿವೃದ್ಧಿ ವಿಚಾರವನ್ನು ಮುಂದಿಟ್ಟು ಎಲ್ಲ ಪಕ್ಷಗಳು ಪ್ರಚಾರ ನಡೆಸಿ ಹಿಂದೂತ್ವದ ಮತ ಬ್ಯಾಂಕ್‌ ಮಾಡಿಕೊಂಡಿದ್ದವು. ಬಿಜೆಪಿ ಅಧಿಕಾರದಲ್ಲಿದ್ದಾಗ ₹120 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಯೋಜನೆ ರೂಪಿಸಿ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೂಮಿಪೂಜೆ ನೆರವೇರಿಸಿದ್ದಾರೆ; ಆದರೆ ಕಾಮಗಾರಿ ಆರಂಭಗೊಂಡಿಲ್ಲ. ಜನಾರ್ದನ ರೆಡ್ಡಿ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ₹5 ಸಾವಿರ ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಅಭಿವೃದ್ಧಿ ಮಾಡುವುದಾಗಿ ರೆಡ್ಡಿ ಹೇಳಿದ್ದಾರೆ. ಅಂಜನಾದ್ರಿ ಅಭಿವೃದ್ಧಿ ಭಾಗವಾಗಿ ಬಿಜೆಪಿ ಸರ್ಕಾರ ರೂಪ್‌ ವೇ 600 ಕೊಠಡಿಗಳ ಪ್ರವಾಸಿ ಮಂದಿರ ಬಸ್ ನಿಲ್ದಾಣ ಯಾತ್ರಿ ನಿವಾಸ ಅತಿಥಿ ಗೃಹ ಸಮುದಾಯ ಭವನ ನಿರ್ಮಾಣ ಮಾಡುವುದಾಗಿ ಹೇಳಿ ಯೋಜನೆಯನ್ನೂ ರೂಪಿಸಿತ್ತು. ‘ಬಿಜೆಪಿಯ ಯೋಜನೆ ಬಗ್ಗೆ ನನಗೆ ಬೇಕಾಗಿಲ್ಲ. ಅಂಜನಾದ್ರಿ ಅಭಿವೃದ್ಧಿಗೆ ನನ್ನವೇ ಆದ ಯೋಜನೆ ಹಾಗೂ ಯೋಚನೆಗಳು ಇವೆ’ ಎಂದು ರೆಡ್ಡಿ ಹೇಳಿದ್ದಾರೆ.

ಭರವಸೆ ಭರಪೂರ; ಹೇಗೆ ಬರಲಿದೆ ಅನುದಾನ? ಚುನಾವಣಾ ಪೂರ್ವದಲ್ಲಿ ಮತ್ತು ಬಳಿಕ ಶಾಸಕ ಜನಾರ್ದನ ರೆಡ್ಡಿ ಗಂಗಾವತಿ ಕ್ಷೇತ್ರದ ಅಭಿವೃದ್ಧಿ ಭರಪೂರ ಭರವಸೆಗಳನ್ನು ನೀಡಿದ್ದಾರೆ. ಸುಲಭವಾಗಿ ಜನರ ಕೈಗೆ ಸಿಗಲು ತಿಂಗಳಿಗೆ ಒಂದು ಸಲ ನಾನೇ ಜನರ ಬಳಿಕಗೆ ಹೋಗುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಬಹುಮತಕ್ಕಿಂತಲೂ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡು ಸುಭದ್ರ ಸ್ಥಾನದಲ್ಲಿದೆ. ರೆಡ್ಡಿ ಗೆದ್ದಿರುವ ಕೆಆರ್‌ಪಿಪಿ ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಗಂಗಾವತಿಯಲ್ಲಿ ಮಾತ್ರ. ಜಿಲ್ಲೆಯ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಸ್ಥಳೀಯವಾಗಿರುವ ಕಾಂಗ್ರೆಸ್‌ ಶಾಸಕರ ಪ್ರಭಾವ ಮತ್ತು ಇದೇ ಪಕ್ಷದ ಸರ್ಕಾರದಲ್ಲಿ ರೆಡ್ಡಿ ಹೇಗೆ ಅನುದಾನ ತರುತ್ತಾರೆ ಎನ್ನುವ ಕುತೂಹಲವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT