ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಗವಿಸಿದ್ಧೇಶ್ವರ ರಥೋತ್ಸವ: ದಾಸೋಹಕ್ಕೆ ನಾಲ್ಕು ಲಕ್ಷ ಮಿರ್ಚಿ!

Last Updated 9 ಜನವರಿ 2023, 12:49 IST
ಅಕ್ಷರ ಗಾತ್ರ

ಕೊಪ್ಪಳ: ಗವಿಸಿದ್ಧೇಶ್ವರ ಮಹಾರಥೋತ್ಸವ ಮುಗಿದು ಒಂದು ದಿನ ಕಳೆದರೂ ಸೋಮವಾರ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಮಠಕ್ಕೆ ಭೇಟಿ ನೀಡಿದರು. ಎಲ್ಲಾ ಭಕ್ತರಿಗೆ ದಾಸೋಹದಲ್ಲಿ ವಿತರಿಸಲು ನಾಲ್ಕು ಲಕ್ಷ ಮಿರ್ಚಿಗಳನ್ನು ತಯಾರಿಸಿ ಉಣಬಡಿಸಲಾಯಿತು.

ಮಿರ್ಚಿ ಸೇವಾ ಸಮಿತಿ ಜಾತ್ರೆಯ ಸಮಯದಲ್ಲಿ ಪ್ರತಿವರ್ಷವೂ ಭಕ್ತರಿಗೆ ಮಿರ್ಚಿ ತಯಾರಿಸಿ ಕೊಡುವ ಕೆಲಸ ಮಾಡಿಕೊಂಡು ಬಂದಿದೆ. 25 ಕ್ವಿಂಟಲ್‌ ಕಡಲೇಹಿಟ್ಟು, 190 ಲೀಟರ್‌ ಸಾಮರ್ಥ್ಯದ 10 ಅಡುಗೆ ಎಣ್ಣೆ ಬ್ಯಾರೆಲ್‌ಗಳು, 20 ಕ್ವಿಂಟಲ್‌ ಹಸಿ ಮೆಣಸಿನಕಾಯಿ, 100 ಕೆ.ಜಿ. ಉಪ್ಪು, 50 ಕೆ.ಜಿ. ಅಜಿವಾನ ಬಳಸಿ ಮಿರ್ಚಿಗಳನ್ನು ತಯಾರಿಸಲಾಗಿದೆ.

ಗವಿಸಿದ್ಧೇಶ್ವರ ಜಾತ್ರೆ ಪ್ರತಿ ವರ್ಷವೂ ತರಹೇವಾರಿ ಅಡುಗೆ ಮೂಲಕ ಭಕ್ತರ ಮನಸ್ಸು ಗೆಲ್ಲುತ್ತಿದೆ. ದಾನಿಗಳು ಕೂಡ ನಾ ಮುಂದು, ತಾ ಮುಂದು ಎಂದು ಸೇವೆ ಸಲ್ಲಿಸುತ್ತಿದ್ದಾರೆ. ಈ ಬಾರಿಯ ಅನೇಕ ದಾಸೋಹ ಸೇವೆಗಳಲ್ಲಿ ಉತ್ತರ ಕರ್ನಾಟಕ ಪ್ರಸಿದ್ಧ ಮಿರ್ಚಿ ಕೂಡ ಒಂದಾಗಿದೆ. ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಯೇ ಮಿರ್ಚಿ ಹಾಕಿ ಬಾಣಸಿಗರಿಗೆ ಹುಮ್ಮಸ್ಸು ತುಂಬಿದರು.

ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಮಿರ್ಚಿ ಮಾಡುವ ಕಾಯಕ ಆರಂಭವಾಯಿತು. ಸರತಿ ಮೇಲೆ ಒಂದೊಂದು ತಂಡದ ಸದಸ್ಯರು ಸೇವಾ ಮನೋಭಾವದಿಂದ ಮಿರ್ಚಿ ತಯಾರಿಸಿದರು. ಜಿಲ್ಲೆಯ ವಿವಿಧ ಗ್ರಾಮಗಳ ಜನರು ಮಿರ್ಚಿ ಮಾಡುವ ಸೇವೆಗಾಗಿಯೇ ಬಂದಿದ್ದರು. ನಾಲ್ಕು ಲಕ್ಷ ಮಿರ್ಚಿಗಳು ಹೇಗೆ ತಯಾರಾಗುತ್ತವೆ ಎನ್ನುವ ಕುತೂಹಲ ಕೂಡ ಅನೇಕರಲ್ಲಿ ಇತ್ತು.

‘ಮಿರ್ಚಿ ತಯಾರಿಸುವ ಪ್ರತಿ ತಂಡದಲ್ಲಿ 60 ಜನ ಬಾಣಸಿಗರು ಇದ್ದು, ಒಟ್ಟಿಗೆ ನಾಲ್ಕು ತಂಡಗಳು ಸೇವೆ ಸಲ್ಲಿಸುತ್ತಿವೆ. ಒಂದೇ ಬಾರಿಗೆ ಅಂದಾಜು ಮೂರು ಸಾವಿರ ಮಿರ್ಚಿಗಳು ತಯಾರಾಗಿವೆ. ಮಠಕ್ಕೆ ಬಂದ ಭಕ್ತರು ಕೂಡ ಸ್ವಯಂ ಪ್ರೇರಣೆಯಿಂದ ಮಿರ್ಚಿ ತಯಾರಿಸಿ ನೆರವಾದರು’ ಎಂದು ಮಿರ್ಚಿ ಸೇವಾ ಸಮಿತಿ ಸದಸ್ಯ ಸಂತೋಷ ದೇಶಪಾಂಡೆ ತಿಳಿಸಿದರು.

105 ಕ್ವಿಂಟಲ್‌ ಅನ್ನ

ಕೊಪ್ಪಳ: ರಥೋತ್ಸವದ ದಿನವಾದ ಭಾನುವಾರ ಮಧ್ಯೆರಾತ್ರಿಯ ತನಕ ದಾಸೋಹ ವಿತರಣೆ ಮಾಡಲಾಗಿದ್ದು, 105 ಕ್ವಿಂಟಲ್‌ ಅನ್ನ ಖರ್ಚಾಗಿದೆ ಎಂದು ದಾಸೋಹ ವಿಭಾಗದ ಉಸ್ತುವಾರಿ ರಾಮನಗೌಡರ ಹೇಳಿದರು.

‘10 ಕೊಪ್ಪರಿಕೆ ಸಾಂಬಾರು, ಎಂಟು ಕೊಪ್ಪರಿಕೆ ದಾಲ್‌, ಮೂರು ಲಕ್ಷದಷ್ಟು ಜೋಳದ ರೊಟ್ಟಿ, ಒಂದೂವರೆ ಲಕ್ಷ ಶೇಂಗಾ ಹೋಳಿಗೆ ಖರ್ಚಾಗಿವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT