ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ನಗರಸಭೆ ಚುನಾವಣೆ: ಶಿವಗಂಗಾ ಅಧ್ಯಕ್ಷೆ, ಆಯಿಷಾ ಉಪಾಧ್ಯಕ್ಷೆ

ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಆಡಳಿತ
Last Updated 3 ಜೂನ್ 2022, 4:38 IST
ಅಕ್ಷರ ಗಾತ್ರ

ಕೊಪ್ಪಳ: ಇಲ್ಲಿನ ನಗರಸಭೆಗೆ ಉಳಿದ ಹತ್ತು ತಿಂಗಳ ಅವಧಿಗೆ ಗುರುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 29ನೇ ವಾರ್ಡ್‌ನ ಕಾಂಗ್ರೆಸ್‌ ಸದಸ್ಯೆ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ ಅಧ್ಯಕ್ಷೆಯಾಗಿ ಹಾಗೂ 19ನೇ ವಾರ್ಡ್‌ನ ಜೆಡಿಎಸ್‌ನ ಆಯಿಷಾ ರುಬಿನಾ ಉಪಾಧ್ಯಕ್ಷೆಯಾಗಿ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 31 ಸದಸ್ಯರ ಬಲದಲ್ಲಿ 15 ಜನ ಕಾಂಗ್ರೆಸ್‌, 10 ಜನ ಬಿಜೆಪಿ, ಇಬ್ಬರು ಜೆಡಿಎಸ್‌, ಮೂವರು ಪಕ್ಷೇತರರು ಮತ್ತು ಒಬ್ಬರು ವೆಲ್‌ಫೇರ್‌ ಪಕ್ಷದ ಸದಸ್ಯರು ಇದ್ದರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಹಿಂದುಳಿದ ಎ ವರ್ಗಕ್ಕೆ ಮೀಸಲಾಗಿತ್ತು.

ಬೆಳಿಗ್ಗೆ ಚುನಾವಣಾ ಪ್ರಕ್ರಿಯೆ ಆರಂಭವಾದಾಗ ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ತಲಾ ಒಬ್ಬರು ಅಭ್ಯರ್ಥಿಗಳಷ್ಟೇ ನಾಮಪತ್ರ ಸಲ್ಲಿಸಿದ್ದರು. ರಾಷ್ಟ್ರೀಯ ಪಕ್ಷವಾದ ಬಿಜೆಪಿ ಅಭ್ಯರ್ಥಿಯನ್ನೂ ಕಣಕ್ಕಿಳಿಸಲಿಲ್ಲ. ಹೀಗಾಗಿ ಕಾಂಗ್ರೆಸ್‌–ಜೆಡಿಎಸ್‌ ಯಾವ ಎದುರಾಳಿಯೂ ಇಲ್ಲದ ಸರಾಗವಾಗಿ ಗೆಲುವಿನ ಕೇಕೆ ಹಾಕಿತು.

ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕಾರ್ಯಕರ್ತರು, ಹೊಸ ಪದಾಧಿಕಾರಿಗಳ ಬೆಂಬಲಿಗರು ಕುಣಿದು, ಬಣ್ಣ ಎರಚಿ ಸಂಭ್ರಮಿಸಿದರು. ಅಶೋಕ ಸರ್ಕಲ್ ಮಾರ್ಗವಾಗಿ ಮೆರವಣಿಗೆ ಮಾಡಿದರು.

ಗೋವಾದಿಂದ ಬಂದರು: ಚುನಾವಣೆಯಲ್ಲಿ ಪಕ್ಷದ ಸದಸ್ಯರನ್ನು ಬೇರೆಯವರು ಸೆಳೆಯಬಹುದು ಎನ್ನುವ ಆತಂಕದಿಂದಾಗಿ ಕಾಂಗ್ರೆಸ್‌ನ ಹಲವು ಸದಸ್ಯರು ಗೋವಾ ಪ್ರವಾಸಕ್ಕೆ ಹೋಗಿದ್ದರು. ಗದಗನಲ್ಲಿ ಒಟ್ಟಿಗೆ ಸೇರಿ ಕೊಪ್ಪಳಕ್ಕೆ ಬಂದು ಚುನಾವಣೆ ಎದುರಿಸಿದರು.

ನಗರದಲ್ಲಿ ನೂರಾರು ಸಮಸ್ಯೆಗಳಿದ್ದರೂ ಜನಪ್ರತಿನಿಧಿಗಳ ಈ ಪ್ರವಾಸ ಸಾರ್ವಜನಿಕರ ಟೀಕೆಗೂ ಕಾರಣವಾಗಿತ್ತು.

ಚರ್ಚೆಗೆ ಗ್ರಾಸವಾದ ಬಿಜೆಪಿ ನಡೆ
ಕೊಪ್ಪಳ:
ನಗರಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇದ್ದದ್ದು ಪಕ್ಷದ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಬಹುಮತಕ್ಕೆ ಬೇಕಾಗುವಷ್ಟು ಸದಸ್ಯರ ಬಲ ಇಲ್ಲದಿದ್ದರೂ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಕನಿಷ್ಠ ಸ್ಪರ್ಧೆಯನ್ನಾದರೂ ಎದುರಿಸಬೇಕಿತ್ತು ಎಂದು ಪಕ್ಷದ ಹಲವರು ಬೇಸರ ತೋಡಿಕೊಂಡರು.

ಮೊದಲು ಬಿಜೆಪಿಯಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಕೆಲ ಸದಸ್ಯರಿಗೆ ತಿಳಿಸಲಾಗಿತ್ತು. ಆದರೆ, ಕೆಲ ಸದಸ್ಯರು ನಮಗೆ ಬಲವಿಲ್ಲವೆಂದು ನಿರುತ್ಸಾಹ ತೋರಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಸ್ಪರ್ಧಿಗಳನ್ನು ಕಣಕ್ಕಿಳಿಸುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಲಾಗಿತ್ತು. ಬಹುಮತವಿಲ್ಲದ ಕಾರಣ ಸ್ಪರ್ಧೆ ಮಾಡುವ ಅಗತ್ಯವೇ ಇಲ್ಲವೆಂದು ತೀರ್ಮಾನಿಸಿ ಸುಮ್ಮನಾದೆವು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಎಚ್‌. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT