ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕೇಂದ್ರದಲ್ಲಿ ಇನ್ನೂ ಇಲ್ಲ ಗುರುಭವನ!

20 ವರ್ಷಗಳಿಂದ ಹೋರಾಟ: ಕೆಲ ಕಡೆ ಉಗ್ರಾಣವಾದ ಭವನಗಳು; ಜನಪ್ರತಿನಿಧಿಗಳ ನಿರಾಸಕ್ತಿ: ಆರೋಪ
Last Updated 5 ಜುಲೈ 2021, 3:46 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲಾ ಕೇಂದ್ರವಾಗಿ 24 ವರ್ಷಗಳಾದರೂ ಶಿಕ್ಷಕರ ಅನುಕೂಲಕ್ಕಾಗಿ ಈವರೆಗೆ ಗುರುಭವನ ನಿರ್ಮಾಣಗೊಂಡಿಲ್ಲ. ರಾಜಕಾರಣ ಮತ್ತು ಬೇರೆ ಬೇರೆ ಕಾರಣಗಳಿಂದ ಗುರುಭವನ ಇಲ್ಲಿ ಅಸ್ತಿತ್ವಕ್ಕೆ ಬಂದಿಲ್ಲ.

ಜಿಲ್ಲೆಯ ನಾಲ್ಕು ಮತ್ತು ಮೂರು ಹೊಸ ತಾಲ್ಲೂಕುಗಳಲ್ಲಿನ ಗುರುಭವನಗಳೂ ಸಮಸ್ಯೆಗಳಿಂದ ಮುಕ್ತಿ ಪಡೆದಿಲ್ಲ. ಕುಷ್ಟಗಿ ಗುರುಭವನ ಈಚೆಗೆ ನವೀಕರಣವಾಗಿದ್ದು ಹೊರತುಪಡಿಸಿದರೆ, ಬಹುತೇಕ ಕಟ್ಟಡಗಳು ಶಿಥಿಲಗೊಂಡಿವೆ. ಇನ್ನೂ ಕೆಲ ಕಡೆ ನಿರ್ಮಾಣವೇ ಆಗಿಲ್ಲ. ಗಂಗಾವತಿಯ ಗುರು ಭವನವು ಉಗ್ರಾಣದಂತೆ ಭಾಸವಾಗುತ್ತದೆ.

‘ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಸುಸಜ್ಜಿತ ಗುರುಭವನ ನಿರ್ಮಿಸಬೇಕೆಂದು ಎರಡು ದಶಕಗಳಿಂದ ಹೋರಾಟ ನಡೆಸುತ್ತಿದ್ದರೂ ಈವರೆಗೆ ಯಾವುದೇ ತೀರ್ಮಾನ ಆಗದಿರುವುದು ಬೇಸರದ ಸಂಗತಿ. ಶಿಕ್ಷಕರು ಮತ್ತು ಶಿಕ್ಷಕಿಯರ ಅನುಕೂಲಕ್ಕಾಗಿ ಗುರುಭವನ ನಿರ್ಮಿಸಬೇಕು’ ಎಂದು ಶಿಕ್ಷಕರ ಸಂಘದ ಸದಸ್ಯರು ಹೇಳುತ್ತಾರೆ.

‘ನಗರದ ಶಾಸಕರ ಮಾದರಿ ಶಾಲೆಯಲ್ಲಿ ಸೂಕ್ತ ಸ್ಥಳವಿದ್ದು, ಇಲ್ಲಿಯೇ ಗುರುಭವನ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವಂತೆ ಸಂಘದ ಸದಸ್ಯರು ಕೋರಿದ್ದಾರೆ. ಆದರೆ, ಶಾಸಕಕೆ.ರಾಘವೇಂದ್ರ ಹಿಟ್ನಾಳ ಅವರು, ‘ಇಲ್ಲಿ ಮಾದರಿ ಶಾಲೆ ನಿರ್ಮಿಸಬೇಕು. ಹಳೆ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಭವನ ನಿರ್ಮಾಣಕ್ಕೆ ಸ್ಥಳ ನೀಡಲಾಗುವುದು’ ಎಂದು ಹೇಳಿದ್ದಾರೆ. ಆದರೆ, ಅಲ್ಲಿ ಆರೋಗ್ಯ ಭವನ ನಿರ್ಮಾಣಕ್ಕೆ ಸ್ಥಳ ಬೇಕಾಗಿದ್ದು, ಶಿಕ್ಷಕರ ಭವನಕ್ಕೆ ನೀಡಲು ಆಗುವುದಿಲ್ಲ’ ಎಂದು ಆರೋಗ್ಯ ಇಲಾಖೆ ಪತ್ರ ಬರೆದು ತಿಳಿಸಿದೆ.

ನಗರದಿಂದ 3 ರಿಂದ 6 ಕಿ.ಮೀ ವ್ಯಾಪ್ತಿಯಲ್ಲಿ ಸಿಎ ಸೈಟ್‌ ಪಡೆದು ಹೊಸ ಗುರುಭವನ ನಿರ್ಮಾಣ ಮಾಡಬೇಕು ಎಂದರೆ ನಿವೇಶನಕ್ಕೆ ₹50 ಲಕ್ಷದವರೆಗೆ ಬೆಲೆ ಇದೆ. ಶಾಸಕರ ಮಾದರಿ ಶಾಲೆ ಶಿಕ್ಷಕರದ್ದೇ ಆಗಿದ್ದು, ಸ್ಥಳಾವಕಾಶವಿದೆ. ಅಲ್ಲದೆ, ಅದು ಕೇಂದ್ರ ಬಸ್‌ ನಿಲ್ದಾಣದಿಂದ ಕೂಗಳತೆ ದೂರದಲ್ಲಿದೆ. ಇಲ್ಲಿಯೇ ನಿವೇಶನ ನೀಡಲು ಉತಾರ್‌, ಸರ್ವೆ ಕೂಡಾ ಮಾಡಲಾಗಿದೆ. ಮಕ್ಕಳ ದಾಖಲಾತಿ ಸಂಖ್ಯೆ ಕೂಡಾ ಕಡಿಮೆಯಾಗಿದೆ. ಶಾಲೆ ಆವರಣದಲ್ಲಿಯೇ ಈಗಾಗಲೇ ಇಂದಿರಾ ಕ್ಯಾಂಟೀನ್‌ ನಿರ್ಮಾಣ ಮಾಡಲಾಗಿದೆ. ಶಿಕ್ಷಕರ ಭವನ ನಿರ್ಮಾಣಕ್ಕೆ ಜಾಗ ಏಕೆ ನೀಡುತ್ತಿಲ್ಲ ಎಂಬುವುದು ಶಿಕ್ಷಕರ ಸಂಘದ ಪದಾಧಿಕಾರಿಗಳ ಪ್ರಶ್ನೆಯಾಗಿದೆ.

ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಶಿಕ್ಷಕರು ವಿರೋಧ ಮಾಡಿಲ್ಲ. ಗುರುಭವನ ನಿರ್ಮಾಣಕ್ಕೆ ಏಕೆ ಜಾಗ ನೀಡುತ್ತಿಲ್ಲ ಎಂದು ಶಿಕ್ಷಕರು ಪ್ರಶ್ನಿಸುತ್ತಾರೆ. ಪ್ರಾಥಮಿಕ ಶಾಲೆಯ 5 ಸಾವಿರ, ಪ್ರೌಢ ಶಾಲೆಯ 2500, ಕಾಲೇಜಿನ 500 ಉಪನ್ಯಾಸಕರಿಗೆ ಉಪಯುಕ್ತವಾಗುವ ಈ ಗುರುಭವನ ನಿರ್ಮಾಣಕ್ಕೆ ಪ್ರತಿಷ್ಠೆ, ರಾಜಕೀಯ ಅಡ್ಡಿಯಾಗಿದೆ.

‘ಗುರುಭವನ ಸರ್ಕಾರಕ್ಕೆ ಸೇರಿದ ಆಸ್ತಿ. ಮುಂದಿನ ಎಲ್ಲ ಶಿಕ್ಷಕರಿಗೆ ಅನುಕೂಲವಾಗಲಿದೆ. ಕೆಲವರು ನೀಡುವ ತಪ್ಪು ಮಾಹಿತಿಯಿಂದ ಗುರುಭವನ ನಿರ್ಮಾಣಕ್ಕೆ ಅಡ್ಡಿ ಆಗುತ್ತಿದೆ’ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಲಗೇರಿ ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಗುರುಭವನ ನಿರ್ಮಾಣಕ್ಕೆ ಹಿಂದೇಟು ಹಾಕಿದರೆ, ಶಿಕ್ಷಕರ ದಿನಾಚರಣೆ ಬಹಿಷ್ಕಾರ ಮಾಡುವುದಲ್ಲದೆ, ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಾಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುವುದಾಗಿ ಅವರು ಎಚ್ಚರಿಕೆ ನೀಡುತ್ತಾರೆ.

‘ನಗರದಲ್ಲಿ ನೌಕರರ ಸಂಘದ ಭವನ, ಸಾಂಸ್ಕೃತಿಕ ಭವನ ಕೂಡಾ ಇದೆ. ಆದರೆ, ಶಿಕ್ಷಕರು ಮತ್ತು ಶೈಕ್ಷಣಿಕ ಚಟುವಟಿಕೆಗೆ ಸಂಬಂಧಿಸಿದ ತರಬೇತಿ, ಕಾರ್ಯಾಗಾರ, ಶಿಕ್ಷಕರ ಸಹಕಾರ ಸಂಘಗಳು ಕಾರ್ಯನಿರ್ವಹಿಸಲು ಗುರುಭವನದ ಅವಶ್ಯಕತೆ ಹೆಚ್ಚಿದೆ. ಈ ಕುರಿತು ಹಲವು ಬಾರಿ ಮುಖ್ಯಮಂತ್ರಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಯವರೆಗೆ ಮನವಿ ಸಲ್ಲಿಸಲಾಗಿದೆ. ಆದರೆ ಇನ್ನೂ ಅಂತಿಮ ನಿರ್ಣಯಕ್ಕೆ ಬಂದಿಲ್ಲ’ ಎಂದು ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸವನಗೌಡ ಪಾಟೀಲ ಬೇಸರ ವ್ಯಕ್ತಪಡಿಸುತ್ತಾರೆ.

‘ಶಿಕ್ಷಕರ ಒಂದು ದಿನದ ವೇತನ ಸೇರಿ ₹2 ಕೋಟಿ, ಜಿಲ್ಲಾ ಸಂಘದಿಂದ ₹1 ಕೋಟಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹1 ಕೋಟಿ, ಸರ್ಕಾರದಿಂದ ₹3 ಕೋಟಿ ಸೇರಿದಂತೆ ₹6 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮತ್ತು ಮಾದರಿ ಗುರುಭವನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ವಾಹನ ನಿಲುಗಡೆ, ಸಮುದಾಯ ಭವನ, ತರಬೇತಿ ಕಟ್ಟಡ, ಶಿಕ್ಷಣ ಇಲಾಖೆ ಮತ್ತು ದೂರದಿಂದ ಬರುವ ಶಿಕ್ಷಕರಿಗೆ ಕೊಠಡಿಗಳನ್ನು ನಿರ್ಮಿಸುವ ಯೋಜನೆ ಇದೆ. ಶಾಸಕರ ಮತ್ತು ಸಂಸದರ ಅನುದಾನದಲ್ಲಿ ಕಟ್ಟಡ ನಿರ್ಮಿಸಬೇಕು’ ಎಂದು ಶಿಕ್ಷಕರ ಸಂಘದ ಪ್ರಮುಖರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT